Advertisement

ಮದುವೆಗೆ ಭಿನ್ನ ಲಿಂಗದ ಜೋಡಿಯೇ ಆಗಬೇಕೇ? CJI Chandrachud ಪ್ರಶ್ನೆ

12:43 AM Apr 21, 2023 | Team Udayavani |

ಹೊಸದಿಲ್ಲಿ: “ಮದುವೆ ಆಗುವ ಜೋಡಿಯು ಭಿನ್ನಲಿಂಗಕ್ಕೆ ಸೇರಿದವರೇ ಆಗಿರಬೇಕು ಎನ್ನುವುದು ಅತ್ಯವಶ್ಯವೇ?’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಗುರುವಾರ ಪ್ರಶ್ನಿಸಿದ್ದಾರೆ.

Advertisement

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ 3ನೇ ದಿನದ ವಿಚಾರಣೆ ವೇಳೆ ಸಂವಿಧಾನ ಪೀಠದ ನೇತೃತ್ವ ವಹಿಸಿರುವ ಸಿಜೆಐ ಈ ಪ್ರಶ್ನೆ ಹಾಕಿದ್ದಾರೆ. “ಈ ಸಲಿಂಗ ಸಂಬಂಧಗಳು ಕೇವಲ ದೈಹಿಕ ಸಂಬಂಧವಷ್ಟೇ ಅಲ್ಲ, ಅದನ್ನೂ ಮೀರಿದ ಸ್ಥಿರ, ಭಾವನಾತ್ಮಕ ಸಂಬಂಧವೂ ಆಗಿರಲೂ ಬಹುದು. ಹೀಗಾಗಿ ಮದುವೆ ಆಗಬೇ ಕೆಂದರೆ ಅವರು ಭಿನ್ನಲಿಂಗಕ್ಕೆ ಸೇರಿದವರೇ ಆಗಿರಬಹುದು ಎನ್ನುವುದು ಅತ್ಯವಶ್ಯವೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು. ಅದಕ್ಕಾಗಿ ನಾವು ಮದುವೆ ಎಂಬ ಪರಿಕಲ್ಪನೆಯನ್ನೇ ಮರುವ್ಯಾಖ್ಯಾನಿಸಬೇಕು’ ಎಂದು ಸಿಜೆಐ ಅಭಿಪ್ರಾಯಪಟ್ಟರು.

1954ರ ವಿಶೇಷ ವಿವಾಹ ಕಾಯ್ದೆ ಜಾರಿಯಾದ ಬಳಿಕ ಕಳೆದ 69 ವರ್ಷಗಳಲ್ಲಿ ಕಾನೂನುಗಳು ಬೇರೆ ಬೇರೆ ರೀತಿಯಲ್ಲಿ ವಿಕಸನಗೊಳ್ಳುತ್ತಾ ಬಂದಿವೆ. ತಮ್ಮ ವೈಯಕ್ತಿಕ ಕಾನೂನುಗಳನ್ನು ಪಾಲನೆ ಮಾಡಲು ಬಯಸದ ವ್ಯಕ್ತಿಗಳಿಗೆಂದು ವಿಶೇಷ ವಿವಾಹ ಕಾಯ್ದೆ ಜಾರಿ ಮಾಡಲಾಯಿತು. ಅನಂತರದಲ್ಲಿ, ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪಿನ ಮೂಲಕ, ನಾವು ಸಮಾನ ಲಿಂಗದ ವಯಸ್ಕ ವ್ಯಕ್ತಿಗಳ ಸಮ್ಮತಿಯ ಸಂಬಂಧಕ್ಕೆ ಮಾತ್ರವಲ್ಲದೇ, ಅವರಲ್ಲಿನ ಸ್ಥಿರ ಬಾಂಧವ್ಯ ಕ್ಕೂ ಮಾನ್ಯತೆ ನೀಡಿದ್ದೇವೆ ಎಂಬುದನ್ನೂ ನ್ಯಾಯಪೀಠ ಸ್ಮರಿಸಿತು.

ಈ ನಡುವೆ, ವಿಶೇಷ ವಿವಾಹ ಕಾಯ್ದೆ ಯಡಿ ಮದುವೆಯಾಗಲು 30 ದಿನಗಳ ಮುಂಚಿತವಾಗಿ ನೋಟಿಸ್‌ ನೀಡುವ ನಿಯಮದಿಂದ, ಅವರ ವಿವಾಹಕ್ಕೆ ಅಡ್ಡಿಯುಂಟು ಮಾಡಲು ಕುಟುಂಬ ಮತ್ತು ಇತರರಿಗೆ ಅವಕಾಶ ಕೊಟ್ಟಂತಾಗುತ್ತದೆ. ಹಾಗಾಗಿ ಈ ನಿಯಮವನ್ನೇ ರದ್ದು ಮಾಡಬೇಕು ಎಂದೂ ವಕೀಲ ರಾಜು ರಾಮಚಂದ್ರನ್‌ ಕೋರಿಕೊಂಡರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಎ. 24ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next