Advertisement

Archery ಶೀತಲ್‌ ದೇವಿ ಅಚ್ಚರಿಯ ಸಾಧನೆ!

12:03 AM Oct 29, 2023 | Team Udayavani |

ಹ್ಯಾಂಗ್‌ಝೂ ಪ್ಯಾರಾ ಏಷ್ಯನ್‌ ಗೇಮ್ಸ್‌ನ ಆರ್ಚರಿ ವಿಭಾಗದಲ್ಲಿ ಜಮ್ಮುವಿನ ಶೀತಲ್‌ ದೇವಿ ಭಾಗವಹಿಸಿ ಎರಡು ಚಿನ್ನದ ಪದಕ ಗೆದ್ದು ಅಸಾಮಾನ್ಯ ಸಾಧನೆಗೈದು ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಮೂಲಕ ಅವರು ವಿಶ್ವದ ಮೊದಲ ಎರಡೂ ಕೈಗಳಿಲ್ಲದ ವನಿತಾ ಬಿಲ್ಲುಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Advertisement

ಕೇವಲ 16ರ ಹರೆಯದ ಶೀತಲ್‌ ಅವರಿಗೆ ಎರಡೂ ಕೈಗಳಿಲ್ಲ. ಆದರೆ ಆರ್ಚರಿ ಕ್ರೀಡೆಯಲ್ಲಿ ಅಪ್ರತಿಮ ಸಾಧನೆಗೈದ ಸಾಧಕಿಯೆಂದೇ ಹೇಳಬಹುದು. ತನ್ನ ಅಚಲ, ದೃಢ ಮನಸ್ಸು ಮತ್ತು ಕಠಿನ ಅಭ್ಯಾಸದಿಂದ ಅದ್ಭುತ ನಿರ್ವಹಣೆ ನೀಡಿದ ಶೀತಲ್‌ ಎರಡು ಚಿನ್ನ ಮತ್ತು ಇನ್ನೊಂದು ಬೆಳ್ಳಿ ಗೆದ್ದು ಸಂಭ್ರಮಿಸಿದ್ದಾರೆ. ಈ ಗೇಮ್ಸ್‌ನಲ್ಲಿ ಎರಡು ಚಿನ್ನ ಗೆದ್ದ ಮೊದಲ ವನಿತೆ ಎಂಬ ಗೌರವ ಸಂಪಾದಿಸಿದ್ದಾರೆ. ವೈಯಕ್ತಿಕ ಕಾಂಪೌಂಡ್‌ನ‌ಲ್ಲಿ ಚಿನ್ನ ಗೆದ್ದ ಶೀತಲ್‌ ಈ ಮೊದಲು ಮಿಕ್ಸೆಡ್‌ ಕಾಂಪೌಂಡ್‌ ತಂಡ ವಿಭಾಗದಲ್ಲಿಯೂ ಚಿನ್ನ ಜಯಿಸಿದ್ದರು. ಕಾಂಪೌಂಡ್‌ ಡಬಲ್ಸ್‌ನಲ್ಲಿ ಬೆಳ್ಳಿ ಸಂಪಾದಿಸಿದ್ದರು.

ಜಮ್ಮುವಿನಲ್ಲಿ ಜನನ
ಜಮ್ಮುವಿನ ಕಿಶ್‌¤ವಾರ್‌ ಜಿಲ್ಲೆಯ ಲಾಯಿಧರ್‌ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಅವರು ಹುಟ್ಟುವಾಗಲೇ ಫೊಕೊಮೀಲಿಯ ಕಾಯಿಲೆಗೆ ತುತ್ತಾಗಿದ್ದರು. ಈ ಕಾಯಿಲೆಯಿದ್ದವರಿಗೆ ಕೈ ಅಥವಾ ಕಾಲುಗಳ ಬೆಳವಣಿಗೆ ಇರುವುದಿಲ್ಲ. ಶೀತಲ್‌ ಅವರಿಗೆ ಎರಡೂ ಕೈಗಳು ಬೆಳೆಯದೇ ಹಾಗೇ ಜೀವನ ಸಾಗಬೇಕಾಯಿತು.

ಭಾರತೀಯ ಸೇನೆ ಆಸರೆ
2019 ಅವರ ಬಾಳ್ವೆಯ ಮಹತ್ತರ ಘಟ್ಟವಾಗಿ ಪರಿಣಮಿಸಿತಲ್ಲದೇ ಕ್ರೀಡಾಕ್ಷೇತ್ರದಲ್ಲಿ ಬೆಳಗಲು ನಾಂದಿಯಾಯಿತು. ಭಾರತೀಯ ಸೇನೆ ಕಿಶ್‌¤ವಾರ್‌ನಲ್ಲಿ ಆಯೋಜಿಸಿದ ಯುವ ಕ್ರೀಡಾಕೂಟದ ವೇಳೆ ಶೀತಲ್‌ ಅವರ ಚುರುಕಿನ ಓಟ, ಕ್ರೀಡಾಸ್ಫೂರ್ತಿಯಿಂದ ಸೇನೆಯ ಅಧಿಕಾರಿಗಳು ಅಕರ್ಷಿತ ರಾದರಲ್ಲದೇ ಆಕೆಯ ಭವಿಷ್ಯದ ಬಗ್ಗೆ ಚಿಂತಿಸಿ ಶೈಕ್ಷಣಿಕ, ವೈದ್ಯಕೀಯ ನೆರವಿಗೆ ಸಹಾಯಹಸ್ತ ಚಾಚಿದರು.

ಸೇನಾ ಅಧಿಕಾರಿಗಳ ಸೂಚನೆ ಯಂತೆ ಶೀತಲ್‌ ಬೆಂಗಳೂರು ಮೂಲದ ಸರಕಾರೇತರ ಸಂಸ್ಥೆ (ಬೀಯಿಂಗ್‌ ಯು) ಯೊಂದನ್ನು ಸಂಪರ್ಕಿಸಿದರು. ಸಂಸ್ಥೆಯ ಸಹ ಸಂಸ್ಥಾಪಕಿ ಪ್ರೀತಿ ರೈ ಜತೆ ಮುಕ್ತವಾಗಿ ಮಾತನಾಡಿದ ಶೀತಲ್‌ ಮರವೇರುವುದು ನೆಚ್ಚಿನ ಹವ್ಯಾಸವೆಂದು ಹೇಳಿರುವುದು ಪ್ರೀತಿ ಅವರನ್ನು ಅಚ್ಚರಿಗೊಳಿಸಿತು. ಅವರನ್ನು ಪರೀಕ್ಷಿಸಿದಾಗ ಕಾಲು ಮತ್ತು ದೇಹದ ಕೆಳ ಭಾಗದಲ್ಲಿ ಅಗಾಧ ಶಕ್ತಿ ಇರುವುದನ್ನು ಗಮನಿಸಿದ ಪ್ರೀತಿ ಆರ್ಚರಿ ಕ್ರೀಡೆ ಅಭ್ಯಾಸ ಮಾಡುವಂತೆ ಸಲಹೆಯಿತ್ತರು.

Advertisement

ಕಠಿನ ಅಭ್ಯಾಸ
ಪ್ಯಾರಾ ಆರ್ಚರಿ ಕೋಚ್‌ ಕುಲದೀಪ್‌ ಮತ್ತು ಅವರ ಪತ್ನಿ ಅಭಿಲಾಷಾ ಚೌಧರಿ ಅವರ ಗರಡಿಯಲ್ಲಿ ಶೀತಲ್‌ ಅವರ ಕಠಿನ ಅಭ್ಯಾಸ ಆರಂಭಗೊಂಡಿತು. 27.5 ಕೆ.ಜಿ. ಭಾರದ ಬಿಲ್ಲನ್ನು ಕಾಲಿನಲ್ಲಿ ಹಿಡಿಯಲು ಬಹಳಷ್ಟು ಶ್ರಮ ವಹಿಸಿದರು. ಅದರಲ್ಲಿ ಹಿಡಿತ ಸಾಧಿಸಿದ ಬಳಿಕ ವಿಶೇಷ ಸಾಧನವನ್ನು ಬಾಯಲ್ಲಿ ಇಟ್ಟು ಅದರ ಮೂಲಕ ಬಾಣವನ್ನು ಗುರಿಯೆಡೆಗೆ ಇಡಲು ಅಭ್ಯಾಸ ಆರಂಭಿಸಿದರು. ಆರಂಭದಲ್ಲಿ ದಿನಕ್ಕೆ 50ರಿಂದ 100ರಷ್ಟು ಸಲ ಬಾಣ ಪ್ರಯೋಗಿಸುತ್ತಿದ್ದ ಅವರು ಬರಬರುತ್ತ ದಿನಕ್ಕೆ 300ರಷ್ಟು ಬಾಣ ಬಿಡುವಷ್ಟರ ಮಟ್ಟಿಗೆ ಬೆಳೆದಿರುವುದು ಮಾತ್ರ ಇತಿಹಾಸ.

ಅಂಗವೈಕಲ್ಯ ಇರುವವರು ಆರ್ಚರಿಯಲ್ಲಿ ವಿಶೇಷ ಪರಿಣತಿ ಸಾಧಿಸಿದುದರ ಕುರಿತು ವಿವರಣೆ ಹಾಗೂ ಕೈಗಳು ಇಲ್ಲದ ಖ್ಯಾತ ಬಿಲ್ಲುಗಾರ ಮ್ಯಾಟ್‌ ಸ್ಟಟ್ಜ್ಮ್ಯಾನ್‌ ಅವರ ಸಾಧನೆಯನ್ನು ತಿಳಿಸಿದಾಗ ಶೀತಲ್‌ಗ‌ೂ ಈ ಕ್ರೀಡೆಗೆ ಬಗ್ಗೆ ಉತ್ಸಾಹ, ಆಸಕ್ತಿ ಬಂತು. ಆ ಬಳಿಕ ಅವರ ಜೀವನ ಬದ ಲಾಯಿತು. ಕಠಿನ ಅಭ್ಯಾಸದ ಜತೆ ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅವರು ಪದಕ ಗೆಲ್ಲುತ್ತ ಉತ್ಸಾಹ ಹೆಚ್ಚಿಸಿ ಕೊಂಡರು. ಕಳೆದ ಮೇ ತಿಂಗಳಲ್ಲಿ ಅವರು ಅಂತಾರಾಷ್ಟ್ರೀಯ ಸ್ಪರ್ಧೆಗೆ ಪ್ರವೇಶಿಸಿದರು. ಜೆಕ್‌ ಗಣರಾಜ್ಯದಲ್ಲಿ ನಡೆದ ಯುರೋ ಪಿಯನ್‌ ಪ್ಯಾರಾ ಆರ್ಚರಿ ಕಪ್‌ನಲ್ಲಿ ಭಾಗವಹಿಸಿದ ಅವರು ಉತ್ತಮ ಸಾಧನೆ ತೋರಿದರು. ಆ ಬಳಿಕ ನಡೆದ ವಿಶ್ವ ಪ್ಯಾರಾ ಆರ್ಚರಿಯಲ್ಲಿ ಬೆಳ್ಳಿ ಗೆದ್ದು ಭರವಸೆ ಮೂಡಿಸಿದರು. ಈ ವೇಳೆ ಸ್ಟಟ್ಜ್ಮ್ಯಾನ್‌ ಅವರನ್ನು ಭೇಟಿಯಾಗಿ ಅವರಿಂದ ಕ್ರೀಡೆಯ ತಾಂತ್ರಿಕ ವಿಷಯಗಳನ್ನು ಅರಿತುಕೊಂಡರು.

ಪ್ಯಾರಿಸ್‌ನಲ್ಲಿ ಪದಕ ನಿರೀಕ್ಷೆ
ಆರ್ಚರಿ ಕ್ರೀಡೆಯಲ್ಲಿ ಅಮೋಘ ನಿರ್ವಹಣೆ ನೀಡುತ್ತಿರುವ ಶೀತಲ್‌ ದೇವಿ ಮುಂದಿನ 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲಲಿ ಎಂಬುದು ಅವರ ಕೋಚ್‌ ಅಭಿಲಾಷಾ ಅವರ ಮನದಾಳದ ಮಾತು ಆಗಿದೆ.

ಅಚ್ಚರಿಯ ಹವ್ಯಾಸ
ಶೀತಲ್‌ ಅವರ ನೆಚ್ಚಿನ ಹವ್ಯಾಸ ಯಾವುದೆಂದು ತಿಳಿದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಎರಡು ಕೈಗಳಿಲ್ಲ. ಆದರೆ ಮರ ಏರುವುದು ನೆಚ್ಚಿನ ಹವ್ಯಾಸವೆಂದು ಅವರು ಖುಷಿಯಿಂದ ಹೇಳಿರುವುದು ಅವರ ಉತ್ಸಾಹವನ್ನು ತಿಳಿಸುತ್ತದೆ. ತನ್ನ ಗ್ರಾಮ ದಲ್ಲಿರುವಾಗ ಅವರು ಕಾಲುಗಳ ಸಹಾಯದಿಂದ ಮರ ಏರುವ ಅಭ್ಯಾಸ ಮಾಡಿಕೊಂಡಿದ್ದರು. ಇದರಿಂದ ಅವರ ಕಾಲುಗಳು ಬಲಿಷ್ಠವಾಗಿದೆ.

ಭಾರತೀಯ ಸೇನೆ, ಕುಟುಂಬ ಸದಸ್ಯರ ಜತೆ ಆರ್ಚರಿ ಕೋಚ್‌ ಕುಲದೀಪ್‌, ಅಭಿಲಾಷಾ ಮತ್ತು ಪ್ರೀತಿ ಅವರ ಸಹಕಾರ, ಮಾರ್ಗದರ್ಶನದಿಂದಾಗಿ ನಾನು ಈ ಸಾಧನೆ ಮಾಡುವಂತಾಯಿತು.
– ಶೀತಲ್‌ ದೇವಿ ಎರಡು ಚಿನ್ನ ಗೆದ್ದ ಬಿಲ್ಲುಗಾರ್ತಿ

*ಶಂಕರನಾರಾಯಣ ಪಿ.

Advertisement

Udayavani is now on Telegram. Click here to join our channel and stay updated with the latest news.

Next