Advertisement

ಅರಂತೋಡು –ತೊಡಿಕಾನ ರಸ್ತೆ ಮೋರಿ ಕುಸಿತ

02:32 PM May 19, 2018 | Team Udayavani |

ತೊಡಿಕಾನ : ಅರಂತೋಡು – ತೊಡಿಕಾನ ಸಂಪರ್ಕ ರಸ್ತೆಯ ಮೋರಿಗಳೆರಡು ಕಲ್ಲಂಬಳ ಸಮೀಪ ಕುಸಿತಗೊಂಡ ಪರಿಣಾಮ ಸ್ಥಳೀಯ ಜನರಿಗೆ ಅರಂತೋಡು – ತೊಡಿಕಾನ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಕಳೆದ ವರ್ಷವೇ ಇಲ್ಲಿಯ ಮೋರಿ ಕುಸಿತಗೊಂಡಿರುವ ಬಗ್ಗೆ ಜಿ.ಪಂ.ಗೆ ಸ್ಥಳೀಯರು ಮಾಹಿತಿ ನೀಡಿ ದುರಸ್ತಿ ಪಡಿಸುವಂತೆ ಬರೆದುಕೊಂಡಿದ್ದರು. ಆದರೆ ಈ ತನಕ ಈ ಎರಡು ಮೋರಿಗಳನ್ನು ತೆರವುಗೊಳಿಸಿ ನೂತನ ಮೋರಿ ನಿರ್ಮಾಣ ಮಾಡುವಂಥ ಕೆಲಸ ಇನ್ನೂ ನಡೆದಿಲ್ಲ.

Advertisement

ಜಿಲ್ಲಾ ಪಂಚಾಯತ್‌ ರಸ್ತೆ
ಈ ರಸ್ತೆ ಅರಂತೋಡಿನಿಂದ ತೊಡಿಕಾನದ ದ.ಕ. – ಕೊಡಗು ಗಡಿಭಾಗದ ತನಕ ಜಿಲ್ಲಾ ಪಂಚಾಯತ್‌ ರಸ್ತೆಯಾಗಿದ್ದು, ನಾಲ್ಕು ವರ್ಷಗಳ ಹಿಂದೆ 4 ಕೋಟಿ ರೂ. ವೆಚ್ಚದಲ್ಲಿ ಡಾಮರು ಕಾಮಗಾರಿ, ಸೇತುವೆ, ಮೋರಿ, ಇತರ ಕೆಲಸಗಳನ್ನು ಲೋಕೋಪಯೋಗಿ ಇಲಾಖೆ ನಡೆಸಿತ್ತು. ವಿಪರ್ಯಾಸ ಏನೆಂದರೆ, ಎಸ್ಟಿಮೇಟ್‌ ಪ್ರಕಾರ ಗುತ್ತಿಗೆದಾರರು ಕೆಲಸ ಮಾಡದೆ ವಂಚಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಎಸ್ಟಿಮೇಟ್‌ ಪ್ರಕಾರ ಈಗ ಕುಸಿತಗೊಂಡಿರುವ ಒಂದು ಮೋರಿಯನ್ನು ತೆಗೆದು ಕಿರು ಸೇತುವೆ ನಿರ್ಮಾಣ ಮಾಡಬೇಕಾಗಿತ್ತು. ಇನ್ನೊಂದು ಮೋರಿಯನ್ನು ತೆಗೆದು ಹೊಸ ಮೋರಿ ನಿರ್ಮಾಣ ಮಾಡಬೇಕಾಗಿತ್ತು. ಸೇತುವೆ ಮತ್ತು ಮೋರಿ ನಿರ್ಮಾಣ ಮಾಡದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣ ವಾಗಿದೆ. ಗುತ್ತಿಗೆದಾರರು ಕಾಮಗಾರಿ ಮುಗಿದ ಬಳಿಕ ಎರಡು ವರ್ಷಗಳ ಕಾಲ ರಸ್ತೆಯ ನಿರ್ವಹಣೆಯನ್ನು ನೋಡಿಕೊಳ್ಳಬೇಕಾಗಿತ್ತು. ಅದನ್ನೂ ಮಾಡಿಲ್ಲ. ಕಳೆದ ವರ್ಷ ಮೋರಿಗಳು ಕುಸಿತಗೊಂಡಿದ್ದು, ಅದನ್ನು ಬದಲಾಯಿಸುವಂತೆ ಜಿಲ್ಲಾ ಪಂಚಾಯತ್‌ಗೆ ಬರೆದರೂ ಕಾಮಗಾರಿ ಇನ್ನೂ ಪ್ರಾರಂಭಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಧಾರ್ಮಿಕ ಕೇಂದ್ರದ ಸಂಪರ್ಕ ರಸ್ತೆ
ಅರಂತೋಡು – ತೊಡಿಕಾನ ರಸ್ತೆ ಸುಳ್ಯ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಭಕ್ತರು ಅಲ್ಲದೆ ಉತ್ಸವಾದಿ ದಿನಗಳಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಈ ರಸ್ತೆಯ ಮೂಲಕವೇ ಬರುತ್ತಾರೆ. ಈ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುತ್ತದೆ. ಕುಸಿದು ನಿಂತಿರುವ ಮೋರಿಗಳು ಯಾವ ಸಮಯದಲ್ಲಿ ಪೂರ್ಣವಾಗಿ ಕುಸಿದು ರಸ್ತೆ ಸಂಪರ್ಕ ಕಡಿತವಾಗುತ್ತದೆ ಎಂಬ ಭಯದಲ್ಲಿ ಜನರು ದಿನ ಕಳೆಯುವಂತಾಗಿದೆ.

ಕೊಡಗು ಸಂಪರ್ಕ ರಸ್ತೆ
ಈ ರಸ್ತೆಯೂ ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ತೊಡಿಕಾನದಿಂದ ತೊಡಿಕಾನ -ಪಟ್ಟಿ ರಸ್ತೆಯ ಅತಿ ಹತ್ತಿರದ ರಸ್ತೆ ಇದ್ದು, ಕಡಿಮೆ ಅವಧಿಯಲ್ಲಿ ತಲಕಾವೇರಿ ಭಾಗಮಂಡಲವನ್ನು ಸೇರಬಹುದಾಗಿದೆ. ತೊಡಿಕಾನ ದೇವಾಲಯಕ್ಕೆ ಭೇಟಿ ನೀಡುವ ಕೆಲವು ಭಕ್ತರು ಈ ರಸ್ತೆಯ ಮೂಲಕ ತಲಕಾವೇರಿ ಭಾಗಮಂಡಲಕ್ಕೆ ಪ್ರಯಾಣ ಬೆಳೆಸುತ್ತಾರೆ.

Advertisement

ನೀತಿ ಸಂಹಿತೆ ಅಡ್ಡಿ
ಚುನಾವಣೆಯ ನೀತಿ ಸಂಹಿತೆ ಬಂದಿರುವ ಕಾರಣ ಕಾಮಗಾರಿ ನಡೆಸಲು ಸಮಸ್ಯೆಯಾಗಿದೆ. ಮುಂದಿನ ದಿನದಲ್ಲಿ ಮೋರಿಯ ಕಾಮಗಾರಿ ನಡೆಸುತ್ತೇವೆ.
–  ಮಣಿಕಂಠ,
   ಜಿ.ಪಂ. ಎಂಜಿನಿಯರ್ 

ಪೂರ್ತಿ ಕುಸಿದರೆ ಸಮಸ್ಯೆ
ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಜಿ.ಪಂ.ಗೆ ಬರೆಯಲಾಗಿದೆ. ಆದರೆ ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ. ಈ ಮೋರಿಗಳು ಸಂಪೂರ್ಣವಾಗಿ ಕುಸಿತಗೊಂಡರೆ ಅರಂತೋಡು ತೊಡಿಕಾನ ಸಂಪರ್ಕಕ್ಕೆ ಸಮಸ್ಯೆಯಾಗಲಿದೆ.
 - ಶಿವಾನಂದ ಕುಕ್ಕುಂಬಳ ಗ್ರಾ.ಪಂ. ಉಪಾಧ್ಯಕ್ಷ

 ಕಾಮಗಾರಿ ನಡೆದಿಲ್ಲ
ರಸ್ತೆ ಡಾಮರು ಕಾಮಗಾರಿ ಸಂದರ್ಭದಲ್ಲಿ ಗುತ್ತಿಗೆದಾರರು ಎಸ್ಟಿಮೇಟ್‌ ಪ್ರಕಾರ ಕಾಮಗಾರಿ ನಡೆಸಿಲ್ಲ. ಈ ಜಾಗದಲ್ಲಿ ಒಂದು ಕಿರುಸೇತುವೆ, ಇನ್ನೊಂದು ಮೋರಿ ನಿರ್ಮಾಣ ಮಾಡಬೇಕಾಗಿತ್ತು. ಅದನ್ನು ಅವರು ಮಾಡಿಲ್ಲ. ಹಳೆ ಮೋರಿಗಳ ಮೇಲೆ ಡಾಮರು ಹಾಕಿ ಬಿಟ್ಟಿದ್ದಾರೆ. ಪರಿಣಾಮವನ್ನು ಜನರು ಎದುರಿಸಬೇಕಾಗಿದೆ. ಕುಸಿದ ಮೋರಿಯನ್ನು ಬದಲಾಯಿಸುವಂತೆ ಸಂಬಂಧಪಟ್ಟ ಇಲಾಖೆಗೆ ಬರೆದರೂ ಯಾವುದೇ ಕಾಮಗಾರಿ ನಡೆದಿಲ್ಲ. 
 -  ವಸಂತ್‌ ಭಟ್‌ ದೊಡ್ಡಡ್ಕ,
     ಸ್ಥಳೀಯರು

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next