“ಸೋನು ಫಿಲಂಸ್’ ಬ್ಯಾನರಿನಲ್ಲಿ ಕೆ. ಮಂಜುನಾಥ್ ನಾಯಕ್ ನಿರ್ಮಿಸಿರುವ “ಅರಳಿದ ಹೂವುಗಳು’ ಸಿನಿಮಾದ ಟೀಸರ್ ಮತ್ತು ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.
ಕೆ. ಮಂಜು ನಾಥ್ ನಾಯಕ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಹೆಣ್ಣು ಅಬಲೆಯಲ್ಲ ಸಬಲೆ, ಆಕೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಸಂದೇಶ ಹೊತ್ತು ಈ ಸಿನಿಮಾ ಬರುತ್ತಿದೆ ಎಂಬುದು ಚಿತ್ರತಂಡದ ಮಾತು.
“ಅರಳಿದ ಹೂವುಗಳು’ ಸಿನಿಮಾಕ್ಕೆ ಬಿ. ಎ ಪುರುಷೋತ್ತಮ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಪುರುಷೋತ್ತಮ್, “ತಂದೆ-ತಾಯಿ ಮಕ್ಕಳನ್ನು ಹೇಗೆ ಬೆಳೆಸಬೇಕು. ಹಾಗೆಯೇ ಮಕ್ಕಳು ತಂದೆ-ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಹೆಣ್ಣು ಎಂದಿಗೂ ಅಬಲೆಯಲ್ಲ ಸಬಲೆ ಎಂಬ ವಿಷಯವನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದು ಸಿನಿಮಾದ ಕಥಾಹಂದರದ ಬಗ್ಗೆ ವಿವರಣೆ ನೀಡಿದರು.
ಕೆ. ಮಂಜುನಾಥ್ ನಾಯಕ್, ಧನಲಕ್ಷ್ಮೀ, ಭಾಗ್ಯಶ್ರೀ, ಶಶಿಕಲಾ, ಸುಲೋಚನಾ, ರಂಜಿತ್, ಗಂಚು ಕುಮಾರ್, ಅಪ್ಪು ಮಂಜುಳಾ, ವಿಶ್ವ ಡುಮ್ಮು ಮೊದಲಾದವರು “ಅರಳಿದ ಹೂವುಗಳು’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಂದವಳ್ಳಿಯ ತೋಟ, ಕಾಲೇಜು, ಕೋಟೆಯ ಸುತ್ತಮುತ್ತ ಸುಮಾರು 30 ದಿನಗಳ ಕಾಲ “ಅರಳಿದ ಹೂವುಗಳು’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ನಾಲ್ಕು ಹಾಡುಗಳಿಗೆ ರಾಜ್ ಭಾಸ್ಕರ್ ಸಂಗೀತವಿದೆ. ಚಿತ್ರಕ್ಕೆ ಮುತ್ತುರಾಜ್ ಛಾಯಾಗ್ರಹಣ, ಕವಿತಾ ಭಂಡಾರಿ ಸಂಕಲನವಿದೆ.
ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಜೂನ್ 9ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂಬ ಯೋಜನೆಯಲ್ಲಿದೆ ಚಿತ್ರತಂಡ.