Advertisement

ಅರಕಲಗೂಡು ಜೆಡಿಎಸ್‌ ಅಭ್ಯರ್ಥಿ ಎ.ಮಂಜು

04:45 PM Feb 05, 2023 | Team Udayavani |

ಅರಕಲಗೂಡು: ಮಾಜಿ ಸಚಿವ ಎ.ಮಂಜು ಹೆಸರನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ ಹಿನ್ನೆಲೆ ಶಾಸಕ ಎ.ಟಿ.ರಾಮಸ್ವಾಮಿ ಅವರು ಮುಂದಿನ ರಾಜಕೀಯ ನಡೆ ಕುರಿತು ನನ್ನ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ ಎಂದು ತಿಳಿಸುವ ಮೂಲಕ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜೆಡಿಎಸ್‌ ಬಿಡುವ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.

Advertisement

ಪಟ್ಟಣದ ಕ್ರೀಡಾಂಗಣದಲ್ಲಿ ಮಾಧ್ಯಮದ ವರೊಂದಿಗೆ ಮಾತನಾಡುತ್ತ, ರಾಜಕಾರಣ ಕಲುಷಿತವಾಗಿದೆ. ಹಣವಂತರಿಗೆ ಪಕ್ಷಗಳು ಮಣೆ ಹಾಕುವ ಮೂಲಕ ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ರಾಜಕಾರಣವನ್ನು ತಳ್ಳಿ ಪ್ರಜಾ ಪ್ರಭುತ್ವ ಆಶಯಗಳು ನೆಲಕಚ್ಚುವಂತೆ ಮಾಡಿವೆ. ಇದರ ವಿರುದ್ಧ ಸಾರ್ವಜನಿಕರು ಧ್ವನಿಎತ್ತುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಸತ್ಯ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ.  ಇದನ್ನು ಮನಗಂಡು ಮತದಾರರು ಈ ವ್ಯವಸ್ಥೆಯನ್ನು ತೊಲಗಿಸುವ ಮೂಲಕ ಪ್ರಜಾ ಪ್ರಭುತ್ವವನ್ನು ಉಳಿಸುವಂತೆ ಅವರು ಮನವಿ ಮಾಡಿ, ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಲಾಬಿ ಮಾಡುತ್ತಿರುವ ಮಾಜಿ ಸಚಿವ ಎ.ಮಂಜು, ಕಾಂಗ್ರೆಸ್‌ ಮುಖಂಡ ಕೃಷ್ಣೇಗೌಡರ ಅವರ ಹೆಸರು ಹೇಳದೆ ಮಾರ್ಮಿಕವಾಗಿ ಕುಟುಕಿದರು. ಜೆಡಿಎಸ್‌ ಪಕ್ಷ ಬಿಡುವ ನಿರ್ಧಾರವನ್ನು ಎಂದೂ ಮಾಡಿರಲಿಲ್ಲ. ನಾನು ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಇದ್ದರೂ ಇದನ್ನು ಸರಿದೂಗಿಸಿಕೊಳ್ಳುವ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೊಂದಿಗೆ ಚರ್ಚಿಸುವ ನಿರ್ಣಯವನ್ನು ಕೈಗೊಂಡು ಪಕ್ಷದಲ್ಲೇ ಉಳಿಯುವ ನಿರ್ಧಾರವನ್ನು ಮಾಡಿದ್ದೆ. ಆದರೆ, ಮಾಜಿ ಸಚಿವ ಎಚ್‌.ಡಿ. ರೇವಣ್ಣನವರು ಎರಡು ಬಾರಿ ನಮ್ಮ ಮನೆಗೆ ಬಂದು ನನ್ನೊಂದಿಗೆ ಸಮಾಲೋಚನೆ ನಡೆಸಿದಾಗಲೂ ಕೆಲ ಸಮಸ್ಯೆಗಳಿವೆ, ದೊಡ್ಡವ ರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದೇನೆಯೇ ವಿನಃ, ಪಕ್ಷ ಬಿಡುವ ಮಾತನಾಡಿರಲಿಲ್ಲ. ಇದನ್ನೇ ಮಾಧ್ಯಮದವರ ಪ್ರಶ್ನೆಗೂ ಉತ್ತರಿ ಸುವ ಮೂಲಕ ನಾನು ಇರುವ ಪಕ್ಷದಲ್ಲೇ ಸ್ಪರ್ಧಿಸುವುದಾಗಿ ತಿಳಿಸಿದ್ದೆ ಎಂದು ಹೇಳಿದರು.

ಕಾರ್ಯಕರ್ತರ ಜೊತೆ ಚರ್ಚೆ: ಆದರೆ, ಜ.22ರಂದು ಪಟ್ಟಣದಲ್ಲಿ ನಡೆದ ಕಾರ್ಯ ಕ್ರಮದ ಹಿಂದಿನ ದಿನ ಎಚ್‌.ಡಿ.ರೇವಣ್ಣನವರ ಮನೆಯ ಮುಂದೆ ನಡೆದ ಪ್ರತಿಭಟನೆಯಿಂದ ಮಾನಸಿಕವಾಗಿ ನೋವಾಯಿತು. ಪ್ರಾಮಾಣಿಕರಿಗೆ ಕಾಲವಲ್ಲ ಎಂದು ತಿಳಿದು, ಅಂದಿನಿಂದ ನನ್ನ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ನನ್ನ ರಾಜಕೀಯ ಮುಂದಿನ ನಿರ್ಧಾರದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಉತ್ತಮ ಶಾಸಕನೆಂಬ ಹೆಗ್ಗಳಿಕೆ ಇದೆ: ನಾನು ಪ್ರಾಮಾಣಿಕನಾಗಿ ನನ್ನ ಕ್ಷೇತ್ರದ ಗೌರವವನ್ನು ಉಳಿಸಿಕೊಂಡು ರಾಜ್ಯದಲ್ಲೇ ಉತ್ತಮ ಶಾಸಕನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದೇನೆ ಎಂದು ನನಗೆ ತೃಪ್ತಿ ಇದೆ. ಆದರೆ, ಕೆಲ ನನ್ನ ರಾಜಕೀಯ ಹಿತಶತ್ರುಗಳು ಕಳೆದ ಜನವರಿ 22ರಂದು ಎಚ್‌.ಡಿ.ರೇವಣ್ಣರವರ ಮನೆ ಮುಂದೆ ಧರಣಿ ನಡೆಸುವ ಮೂಲಕ ನನ್ನನ್ನು ಅಪ್ರಾಮಾಣಿಕ, ಪಕ್ಷ ವಿರೋಧಿ ಎಂದು ಆರೋಪಿಸುವ ಮೂಲಕ ನನಗೆ ಟಿಕೆಟ್‌ ನೀಡದಂತೆ ಧರಣಿ ನಡೆಸಿದರು ಎಂದು ವಿವರಿಸಿದರು. ಅಂತಹ ಒಳ್ಳೆಯವರೊಂದಿಗೆ ನಾನು ಈಗಲೂ ಮುಂದುವರಿಯುವುದು ಅಸಾಧ್ಯ. ಬಹುತೇಕ

Advertisement

ಪಕ್ಷದಿಂದ ದೂರ ಉಳಿಯುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಮುಂದಿನ ನಿರ್ಣಯವನ್ನು ನನ್ನ ಕಾರ್ಯಕರ್ತರೊಂದಿಗೆ ಚರ್ಚಿಸುವೆ ಎಂದು ತಿಳಿಸುವ ಮೂಲಕ ಭಾವುಕರಾಗಿ ನುಡಿದರು.

ನಾನು ಎಚ್ಡಿಕೆ ಹೇಳಿಕೆ ಸ್ವೀಕರಿಸುತ್ತೇನೆ : ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್‌ ಶಾಸಕರಿರುವಾಗಲೇ ತಮ್ಮನ್ನು ಪಕ್ಷಕ್ಕೆ ಬರಮಾಡಿಕೊಂಡ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಅವರನ್ನೇ ಕೇಳಬೇಕು ಮಾಜಿ ಸಚಿವ ಎ.ಮಂಜು ಹೇಳಿದರು. ತಾಲೂಕಿನ ಗಡಿಭಾಗ ಕಳ್ಳಿಮುದ್ದನಹಳ್ಳಿ ಗ್ರಾಮದ ಬಳಿ ಸುದ್ದಿಗಾರರಿಗೆ ಮಾತನಾಡಿದ ಅವರು, ನಾನು ಜೆಡಿಎಸ್‌ ಅಧ್ಯಕ್ಷನಲ್ಲ. ಅರಕಲಗೂಡು ತಾಲೂಕಿನಲ್ಲಿ ಕಾಂಗ್ರೆಸ್‌ ಕಟ್ಟಿದವನು ಎ.ಮಂಜು. ರಾಜಕಾರಣದಲ್ಲಿ ಯಾರ್ಯಾರು ಏನೇನ್‌ ಆಗ್ತಾರೋ ಎಂಬುದನ್ನು ಹೇಳಲು ಅಸಾಧ್ಯ. ಯಾವತ್ತೂ ದ್ವೇಷದ ರಾಜಕಾರಣ ಮಾಡಬಾರದು. ನಾನು ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದು ನಿಜ, ಮಾತನಾಡಿದ್ದು ನಿಜ, ನನ್ನ ಆಧ್ಯತೆ ಕಾಂಗ್ರೆಸ್‌ಗೆ ಕೊಟ್ಟಿದ್ದು ಕೂಡ ನಿಜ. ಕುಮಾರಸ್ವಾಮಿ ಅವರು ನನಗೆ ಆಫರ್‌ ಮಾಡಿಕೊಟ್ಟಿರುವುದಕ್ಕೆ ಕುಮಾರಸ್ವಾಮಿ, ದೇವೇಗೌಡರು, ರೇವಣ್ಣ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನನ್ನ ಮಗನಿಗೆ ಹೇಳ್ಳೋದು ಇಷ್ಟೇ ನನ್ನ ತತ್ವ ಸಿದ್ಧಾಂತದಲ್ಲಿ ಬದಲಾವಣೆ ಇಲ್ಲ. ಅವನಿಗೆ ಒಳ್ಳೆಯದಾಗಲಿ, ಅಂತ ಹಾರೈಸುತ್ತೇನೆ. ನನ್ನ ಫಾಲೋ ಮಾಡಿದ್ರೆ ಅವನಿಗೆ ಒಳ್ಳೆಯದು ಅಂತ ನನ್ನ ಭಾವನೆ. 1994ನೇ ಇಸವಿಯಲ್ಲಿ ದೇವೇಗೌಡರಿಗೆ ಸಹಾಯ ಮಾಡಿದ್ದೆ. ಮೂರು ಸಾವಿರ ಓಟಿನಲ್ಲಿ ಗೆದ್ದಾಗ ನಾನು ಸಹಾಯ ಮಾಡಿದ್ದೇನೆ. ನನಗೆ ರಾಜಕೀಯದಲ್ಲಿ ಶತ್ರುನೂ ಇಲ್ಲ, ಮಿತ್ರನೂ ಇಲ್ಲ. ನಾನು ಕುಮಾರಸ್ವಾಮಿ ಹೇಳಿರುವುದನ್ನು ಸ್ವೀಕರಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next