Advertisement

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

05:23 PM Dec 24, 2024 | Team Udayavani |

ಉದಯವಾಣಿ ಸಮಾಚಾರ
ಶಿರಹಟ್ಟಿ: ಪರಿಶಿಷ್ಟ ಜಾತಿ ಹಾಗೂ ಇತರ ಸಮುದಾಯದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದೆಂಬ ಉದ್ದೇಶದಿಂದ
ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರ ಸಕಲ ಸೌಲಭ್ಯದೊಂದಿಗೆ ಮಕ್ಕಳಿಗೆ ವಸತಿಯುತ ಶಿಕ್ಷಣ ನೀಡಲು ಶ್ರಮಿಸುತ್ತಿದೆ.

Advertisement

ಆದರೆ ನಾಲ್ಕು ವರ್ಷಗಳಿಂದ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಯಗಳು ಕುಂಟುತ್ತ ಸಾಗಿದ್ದರಿಂದ ಮಕ್ಕಳಿಗೆ ವಸತಿಯುತ ಶಿಕ್ಷಣ ಮರಚೀಕೆಯಾಗಿ ಪರಿಣಮಿಸಿದೆ ಎಂಬುದಕ್ಕೆ ತಾಲೂಕಿನ ವಡವಿ ಗ್ರಾಮದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಸಾಕ್ಷಿ ಎಂಬಂತಾಗಿದೆ.

ಗುತ್ತಿಗೆದಾರ ನಿಯಮಾನುಸಾರ 20 ಕೋಟಿ ರೂ. ವೆಚ್ಚದಲ್ಲಿ ಸಕಲ ಸೌಲಭ್ಯವುಳ್ಳ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾರ್ಯ 18 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ಶಾಲೆ ಆರಂಭಕ್ಕೆ ಅನುಕೂಲ ಮಾಡಬೇಕಿತ್ತು. ಆದರೆ ಭೂಮಿಪೂಜೆ ಬಳಿಕ ಎದುರಾದ ಕೋವಿಡ್‌ ಸಂಕಷ್ಟ ಕಟ್ಟಡ ಕಾರ್ಯಕ್ಕೆ ಅಡ್ಡಿವುಂಟಾಯಿತು. ನಾಲ್ಕು ವರ್ಷ ಪ್ರಯಾಸದ ಬಳಿಕ ಕಟ್ಟಡ ನಿರ್ಮಾಣ ಪೂರ್ಣಗೊಂಡು ಸುಣ್ಣ, ಬಣ್ಣ ಲೇಪನ ಮಾಡಲಾಗಿದೆ. ಆದರೆ ವಿದ್ಯುತ್‌ ಸಂಪರ್ಕ ಹಾಗೂ ಶೌಚಗೃಹ, ನೀರು ಪೂರೈಕೆ, ಕಾಂಪೌಂಡ್‌, ಇತ್ಯಾದಿಗಳ ಕೆಲಸಗಳ ನಿಧಾನಗತಿ ಕಂಡು ಯಾವಾಗ ಈ ಶಾಲೆ ಆರಂಭಕ್ಕೆ ಶುಭ ಮೊಹೂರ್ತ ಒದಗಿ ಬಂದು ಮಕ್ಕಳು ಗ್ರಾಮದಲ್ಲಿ ಶಿಕ್ಷಣ ಪಡೆಯುತ್ತಾರೆ ಎಂಬುದು ತಿಳಿಯದಂತಾಗಿದೆ.

ಮತ್ತೊಂದೆಡೆ ಗ್ರಾಮದಿಂದ ಶಾಲೆ ಎರಡು ಕಿ.ಮೀ. ಅಂತರದಲ್ಲಿದ್ದು, ಶಾಲೆಗೆ ಸಂಚರಿಸಲು ಕಚ್ಚಾರಸ್ತೆ, ಮಳೆಗಾಲದಲ್ಲಿ ಸಂಚರಿಸುವುದು ಹರಸಾಹಸದ ಕೆಲಸ. ಅದಕ್ಕೆ ಮಕ್ಕಳು ಅನುಭವಿಸುವ ಸಂಕಷ್ಟ ನಿವಾರಣೆಗೆ ಶಾಸಕರು ಇಚ್ಛಾಶಕ್ತಿ ತೋರಿ ಸುಸ್ಸಜ್ಜಿತ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಳೀಯರ ಆಗ್ರಹ: ಇನ್ನಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿ ತೋರಿ ಮಕ್ಕಳ ಶಿಕ್ಷಣ ಹಿತದೃಷ್ಟಿಯಿಂದ ಶೀಘ್ರ ವಸತಿ ಶಾಲೆ ಆರಂಭಕ್ಕೆ ಕ್ರಮ ಕೈಗೊಂಡು ಗ್ರಾಮಸ್ಥರ ಬಹುದಿನಗಳ ಕನಸು ನನಸಾಗಿಸಲು ಇಚ್ಛಾಶಕ್ತಿ ತೋರಬೇಕೆಂಬುದು ವಡವಿ ಗ್ರಾಪಂ ಸದಸ್ಯ ಪರಸರಡ್ಡಿ ಅಳವಂಡಿ, ರಮೇಶ ಗುಳೇದ,  ಉಮೇಶಗೌಡ ಪಾಟೀಲ, ಅಡಿವೆಪ್ಪ ಗುಡಗೇರಿ ಅವರ ಆಗ್ರಹವಾಗಿದೆ.

Advertisement

18 ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯಬೇಕಾಗಿತ್ತು, ಆದರೆ 2020ರಲ್ಲಿ ಕೊರೊನಾ ಸಂಕಷ್ಟ ಎದುರಾದ ಕಾರಣ ಕೆಲಸ
ಸ್ಥಗಿತಗೊಂಡು ಕಾಲಹರಣವಾಯಿತು. ಅಳಿದುಳಿದ ಕೆಲಸ ತ್ವರಿತಗತಿಯಲ್ಲಿ ಮುಗಿಸಿ 2 ತಿಂಗಳಲ್ಲಿ ಕಟ್ಟಡ ಹಸ್ತಾಂತರ ಮಾಡಿ ಮುಂದಿನ ಕ್ರಮಕ್ಕೆ ಅವಕಾಶ ನೀಡದಿರಲು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ. ಆದಾಗ್ಯೂ ತಾವು ಪದೇ ಪದೆ ಸ್ಥಳಕ್ಕೆ ಭೇಟಿ ನೀಡಿ ಇನ್ನುಳಿದ ಕೆಲಸ ಕಾರ್ಯಗಳ ಬಗ್ಗೆ ನಿಗಾ ವಹಿಸಿ, ಶೀಘ್ರದಲ್ಲಿ ಕಟ್ಟಡ ಉದ್ಘಾಟನೆಗೆ ಕ್ರಮ ಕೈಗೊಳ್ಳುವೆ.
ಮಹೇಶ ಪೋತದ್ದಾರ,
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಗದಗ

ಅನೇಕ ಸಲ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿ, ಶೀಘ್ರ ಗತಿಯಲ್ಲಿ ಕಟ್ಟಡದಲ್ಲಿನ ಉಳಿದ ಕೆಲಸ ಕಾರ್ಯ ಮುಗಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಲ್ಲದೇ ಒಂದು ತಿಂಗಳಲ್ಲಿ ಎಲ್ಲ ಕೆಲಸ ಪೂರೈಸಿ ಇಲಾಖೆಗೆ ಹಸ್ತಾಂತರ ಮಾಡದಿದ್ದರೆ. ಲಕ್ಷ್ಮೇಶ್ವರದಲ್ಲಿನ ಕಟ್ಟಡದ ಬಾಡಿಗೆ ನೀನೇ ಭರಿಸಬೇಕಾಗುತ್ತದೆ ಎಂದು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಹೆಚ್ಚಿನ ಮುತವರ್ಜಿ ವಹಿಸಿ ಕಟ್ಟಡ ಲೋಕಾರ್ಪಣೆಗೆ ಶ್ರಮ ವಹಿಸುವೆ.
ಡಾ| ಚಂದ್ರು ಲಮಾಣಿ, ಶಾಸಕ

*ಜಿ.ಬಿ.ಹೆಸರೂರ

Advertisement

Udayavani is now on Telegram. Click here to join our channel and stay updated with the latest news.

Next