ತೀರ್ಥಹಳ್ಳಿ : ಕುಡಿಯುವ ನೀರಿನ ಸಮಸ್ಯೆ ಇದ್ದರೂ ಜನರಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಜೆಜೆಎಂ ಯೋಜನೆಯಡಿ 5 ತಿಂಗಳ ಹಿಂದೆ ಬೋರ್‌ವೆಲ್ ತೆರೆಯಲಾಗಿದ್ದು ಮೋಟರ್ ಅಳವಡಿಸಿಲ್ಲ. ಅಧಿಕಾರಿಗಳು ಮೈಚಳಿಬಿಟ್ಟು ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗ್ರಾಮೀಣ ಕುಡಿಯುವ ಸರಬರಾಜು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕಳಪೆ ಕಾಮಗಾರಿ ಸಾಭೀತಾದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅರಣ್ಯ ಇಲಾಖೆ ನೈಸರ್ಗಿಕ ಸಸಿಗಳನ್ನು ನೆಟ್ಟು ಸಂರಕ್ಷಣೆಗೆ ನಿಗಾವಹಿಸಬೇಕು. ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ನಿರ್ವಹಿಸಿದ ಪ್ರತಿಯೊಂದು ಕಾಮಗಾರಿ, ನೆಡುತೋಪು ಬೆಳವಣಿಗೆ ಪರಿಶೀಲನೆ ಮಾಡಲಾಗುತ್ತದೆ. ವಿದ್ಯುತ್ ಸರಬರಾಜಿಗೆ ಅನುಕೂಲವಾಗುವಂತೆ ಮರಗಳ ತೆರವಿಗೆ ಅವಕಾಶ ನೀಡಬೇಕು ಎಂದು ಸೂಚನೆ ನೀಡಿದರು.
ಕಳೆದ ವರ್ಷದ ಮೇಘಸ್ಪೋಟದ ಸಂದರ್ಭ 52 ಕೆರೆಗಳಿಗೆ ತೀವ್ರ ಹಾನಿಯಾಗಿದೆ. ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ ಸಭೆಯ ಗಮನ ಸೆಳೆದರು. ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು 2 ಕೆರೆಗಳಿಗೆ ಮಾತ್ರ ತಡೆಗೋಡೆ, ದುರಸ್ಥಿಗೆ ಹಣ ಬಿಡುಗಡೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಇಇ ಅಣ್ಣಪ್ಪ ಉತ್ತರಿಸಿದರು.
ಗುತ್ತಿಗೆ ನಿಯಮದಡಿ ನೇಮಕಗೊಂಡ ಭೂ ಸರ್ವೆ ಸಿಬ್ಬಂದಿಗಳು ಲಂಚಕ್ಕಾಗಿ ರೈತರಿಗೆ ವಿಪರೀತ ತೊಂದರೆ ಕೊಡುತ್ತಿದ್ದಾರೆ. ಗುಂಟೆ ಲೆಕ್ಕದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ತಿಳಿದು ಬಂದಿದೆ. ರೈತರನ್ನು ಮೂರನೇ ದರ್ಜೆಯವರಂತೆ ಕಂಡರೆ ಪರಿಣಾಮ ನೆಟ್ಟಗಿರುವುದಿಲ್ಲ. ಭೂ ಸರ್ವೆ ಕಚೇರಿಯಲ್ಲಿ ವಸೂಲಿ ನಡೆದಿರುವುದು ತಿಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದರು.
ಕೇಂದ್ರ ಸರ್ಕಾರದ ₹20 ಕೋಟಿ ವೆಚ್ಚದಲ್ಲಿ 50 ಹಾಸಿಗೆಯ ತಾಯಿಮಗು ಆಸ್ಪತ್ರೆ ಮಂಜೂರಾಗಿದೆ. ಪ್ರಸೂತಿ, ಮಕ್ಕಳು, ಅರವಳಿಕೆ ತಜ್ಞ ವೈದ್ಯರು, 10 ಜನ ಆರೋಗ್ಯ ಸಿಬ್ಬಂದಿಗಳು ಹೆಚ್ಚುವರು ನೇಮಕಗೊಳ್ಳಲಿದ್ದಾರೆ. ಜೆಸಿ ಆಸ್ಪತ್ರೆಯ ಆವರಣದಲ್ಲಿ ಸುಸಜ್ಜಿತ ಪ್ರಯೋಗಾಲಯ ಕಾಮಗಾರಿ ಚಾಲನೆಯಲ್ಲಿದೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಅಮೃತ್ ಅತ್ರೇಶ್, ಇಓ ಶೈಲಾ ಎನ್, ಡಿವೈಎಸ್‌ಪಿ ಗಜಾನನ ಸುತಾರ್ ಇದ್ದರು.