ಬೆಂಗಳೂರು: ಒಂದೇ ಜಾಗದಲ್ಲಿ ಏಕಕಾಲಕ್ಕೆ ಮೀನು ಹಾಗೂ ತರಕಾರಿ ಬೆಳೆ ತೆಗೆಯುವ ದ್ವಿಗುಣ ಆದಾಯ ತರುವ “ಅಕ್ವಾಪೋನಿಕ್ಸ್ ಕೃಷಿ’ ಉತ್ತೇ ಜನಕ್ಕೆ ಒಳನಾಡ ಮೀನುಗಾರಿಕೆ ಮುಂದಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಸಣ್ಣ ಪ್ರಮಾ ಣದ ಅಕ್ವಾಪೋನಿಕ್ಸ್ ಕೃಷಿ ಟ್ರೆಂಡ್ ಶುರುವಾಗಿದೆ. ಅಕ್ವಾಪೋನಿಕ್ಸ್ ಕೃಷಿಯಲ್ಲಿ ಕಡಿಮೆ ಪ್ರದೇಶದಲ್ಲಿ ಮೀನಿನ ಜತೆಗೆ ತರಕಾರಿಯನ್ನು ಬೆಳೆಸಬಹುದು. ಸಾಂಪ್ರದಾಯಿಕವಾಗಿ ಹನಿ ನೀರಾವರಿ ಬಳಸಿ ಕೊಂಡು ಪಾಲಿ ಹೌಸ್ನಂತಹ ಕಡೆಯಲ್ಲಿ ಸೊಪ್ಪು ತರಕಾರಿ ಬೆಳೆಸಲು ಎಕರೆಗೆ 1 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಆದರೆ, ಅಕ್ವಾಪೋನಿಕ್ಸ್ ವಿಧಾನದಲ್ಲಿ ಕೇವಲ 20 ಸಾವಿರ ಲೀಟರ್ ನೀರು ಸಾಕು. ಹೊಲದ ಬೆಳೆಗೆ ಬೆಳೆ ಮುಗಿಯುವವರೆಗೂ ನೀರು ಕೊಡಬೇಕು. ಆದರೆ ಈ ಪದ್ಧತಿಯಲ್ಲಿ ಹಾಗಲ್ಲ. ಒಮ್ಮೆ ನೀರು ನೀಡಿದರೆ ಸಾಕು. ಶೇ.80 ರಿಂದ 90ರಷ್ಟು ನೀರಿನ ಪ್ರಮಾಣ ಉಳಿತಾಯವಾಗಲಿದೆ.
ಮೀನಿಗಷ್ಟೇ ಆಹಾರ!: ಅಕ್ವಾಪೋನಿಕ್ಸ್ ಪದ್ಧತಿ ಯಲ್ಲಿ ಮೀನಿಗಷ್ಟೇ ಆಹಾರ ನೀಡಿದರೆ ಸಾಕು. ಮೀನಿನ ತ್ಯಾಜ್ಯ ತರಕಾರಿ ಬೆಳೆಗೆ ಆಹಾರವಾಗಿದೆ. ಇದರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಸ್ಕರಣೆ ಗೊಂಡು ಪೈಪು ಮಾದರಿಯೊಳಗೆ ಹರಿಯುತ್ತಾ ಗಿಡಗಳಿಗೆ ಆಹಾರವಾಗಿ ಮಾರ್ಪಡುತ್ತದೆ. ಇಲ್ಲಿ ಗಿಡವು ತನಗೆ ಅಗತ್ಯವಿರುವ ತ್ಯಾಜ್ಯವನ್ನು ಹೀರಿ ಮರು ಸಂಸ್ಕರಿಸಿ ಉತ್ತಮ ನೀರನ್ನು ಪುನಃ ಮೀನಿನ ತೊಟ್ಟಿಗೆ ಸೇರಿಸುತ್ತದೆ. ಈ ಪ್ರಕ್ರಿಯೆ ವೃತ್ತಕಾರದಲ್ಲಿ ನಿರಂತರವಾಗಿ ಸಾಗುತ್ತದೆ. ಆದರೆ ಮೀನಿನ ತ್ಯಾಜ್ಯ ಕಡಿಮೆಯಿದ್ದು, ತರಕಾರಿ ಸಸಿಗಳು ಹೆಚ್ಚಿದ್ದಾಗ, ತರಕಾರಿ ಸಸಿಗಳಿಗೆ ಹೆಚ್ಚುವರಿ ಪೋಷಕಾಂಶದ ಅಗತ್ಯವಿದೆ.
ಅತ್ಯಂತ ವೇಗವಾಗಿ ಬೆಳೆ!: ಈ ಪದ್ಧತಿಯಲ್ಲಿ 24 ತಾಸು ಗಿಡಗಳಿಗೆ ಆಹಾರ ಸಿಕ್ಕಿ ಅವುಗಳ ಬೆಳವಣಿಗೆ ಮಣ್ಣಿನ ಕೃಷಿಯಲ್ಲಿನ ಬೆಳವಣಿಗೆಗಿಂತಲು ವೇಗದಾಯಕವಾಗಿರುತ್ತದೆ. ತೊಟ್ಟಿಯಲ್ಲಿ ಮೀನಿನ ಬೆಳವಣಿಗೆ ಆಗುವುದರಿಂದ ತರಕಾರಿ ಸೊಪ್ಪುಗಳ ಬೆಳೆಯಲು ರಾಸಾಯನಿಕ ಪದಾರ್ಥಗಳ ಸಂಪೂರ್ಣ ನಿರ್ಬಂಧವಿದೆ. ಜತೆಗೆ ಕೀಟ ಭಾದೆ ಹಾಗೂ ಕಳೆ ತೆಗೆಯುವ ಪ್ರಶ್ನೆಯೇ ಇಲ್ಲ. ಹಾಗಾಗಿ ಇದು ಸಂಪೂರ್ಣ ಸಾವಯವ ಆಧಾರಿತ ಕೃಷಿಯಾಗಿದೆ. ಪಾಲಕ್, ಲೆಟ್ಯೂಸ್, ಸ್ಟ್ರಾಬೆರಿಯಂತಹ ಸಸ್ಯಗಳನ್ನು ಬೆಳಸಬಹುದಾಗಿದೆ.
ಅಕ್ವಾಫೋನಿಕ್ ಕೃಷಿ ವಿಧಾನ ಹೇಗೆ?: ತೆಪ್ಪ ಕೃಷಿ ವಿಧಾನದಲ್ಲಿ ಮೀನು ಸಾಕಾಣಿಕೆಗೆ 1 ಅಡಿ ಎತ್ತರದ ತೊಟ್ಟಿ ನಿರ್ಮಿಸಿ, ನೀರು ತುಂಬಿಸಬೇಕು. ಇದರ ಮೇಲ್ಮೈಯಲ್ಲಿ ಸ್ಟೈರೋ ಪೋಮ್ ಶೀಟ್ ಹಾಕಬೇಕು. ಇದರಲ್ಲಿ ರಂಧ್ರಗಳಲ್ಲಿ ಪ್ಲಾಸ್ಟಿಕ್ ಮಡಕೆ ಇಡ ಬೇಕು. ಸಸಿಗಳು ಮಡಕೆಯಿಂದ ಹೊರಚಾಚಿ ನೀರಿನಲ್ಲಿ ನೇತಾಡುವ ಬೇರುಗಳು ಪೋಷಕಾಂಶಗಳನ್ನು ನೀರಿನಿಂದ ಹೀರಿಕೊಂಡು ಬೆಳೆಯುತ್ತದೆ. ಇನ್ನೂ ಆಳವಾದ ತೇಲುವ ತಾಂತ್ರಿಕತೆ ವಿಧಾನದಲ್ಲಿ ಸಂಪ್ನಿಂದ ಬಂದ ನೀರು ಕೊಳವೆ ಮೂಲಕ ಹಾದು ಹೋಗುತ್ತದೆ. ಈ ಕೊಳವೆಯಲ್ಲಿ ರಂಧ್ರಗಳಲ್ಲಿ ಪ್ಲಾಸ್ಟಿಕ್ ಮಡಕೆಗಳನ್ನು ಇಡಲಾಗುತ್ತದೆ. ಇಲ್ಲಿ ಬೇಕಾದ ಪೋಷಕಾಂಶ ಹೀರಿಕೊಂಡು ಶುದ್ಧ ನೀರು ಮತ್ತೆ ತೊಟ್ಟಿಗೆ ಬಿಡಲಾಗುತ್ತದೆ.
ಈ ವಿಧಾನದಲ್ಲಿ ಗಿಡ ಬೆಳೆಸಲು ಮಣ್ಣು ಬೇಕಾಗಿಲ್ಲ. ಮಣ್ಣಿನ ಸಂಪರ್ಕವೇ ಇಲ್ಲದೆ ಬೀಜ ಮೊಳಕೆಯೊಡೆದು ಗಿಡ ಬೆಳೆದು ಫಸಲು ನೀಡುವುದು ವಿಶೇಷ. ಇಲ್ಲಿ ಅತ್ಯಂತವಾಗಿ ವೇಗವಾಗಿ ಫಸಲು ಕೈ ಸೇರಲಿದೆ.
-ಡಾ. ವೆಂಕಟಪ್ಪ, ಸಹಾಯಕ ಪ್ರಾಧ್ಯಾಪಕರು, ಜಿಕೆವಿ
– ತೃಪ್ತಿ ಕುಮ್ರಗೋಡು