Advertisement
ಬಿಜೆಪಿ ಟಿಕೆಟ್ ಪ್ರಕ್ರಿಯೆ ಅಂತಿಮ ಗೊಳಿಸಲು ಮಂಗಳವಾರ ಹಾಗೂ ಬುಧವಾರ ರಾಜ್ಯ ಕೋರ್ ಕಮಿಟಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳ ಅಭ್ಯರ್ಥಿ ಹೆಸರು ಅಖೈರುಗೊಳಿಸಲಾಗುತ್ತದೆ. ಆದರೆ ಇದಕ್ಕೆ ವರಿಷ್ಠರ ಒಪ್ಪಿಗೆಯ ಮುದ್ರೆ ಲಭಿಸುವ ಸಾಧ್ಯತೆ ಕಡಿಮೆ. ಎ. 8ರಂದು ದಿಲ್ಲಿಯಲ್ಲಿ ಸಂಸದೀಯ ಮಂಡಳಿ ಸಭೆಗೆ ದಿನಾಂಕ ನಿಗದಿ ಯಾಗಿದ್ದು, ಅದೇ ದಿನ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
Related Articles
ಬೆಂಗಳೂರು ಹೊರತುಪಡಿಸಿ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ-ಚಿಕ್ಕೋಡಿಯಲ್ಲೇ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಭಾರಿ ಸಮಸ್ಯೆ ಸೃಷ್ಟಿಯಾಗಿತ್ತು. ತಮ್ಮ ಬೆಂಬಲಿಗರ ಜತೆಗೆ ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂಗು ತೂರಿಸುತ್ತಿರುವುದು ಆ ಭಾಗದ ನಾಯಕರಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿತ್ತು. ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಮಧ್ಯಸ್ಥಿಕೆಯಲ್ಲಿ ಇದು ಬಗೆಹರಿದಿದೆ ಎಂದು ಹೇಳಲಾಗಿದೆ. ನಗರದಲ್ಲಿ ಸೋಮವಾರ ನಡೆದ ಸಭೆಯ ಅನಂತರ ಪ್ರಹ್ಲಾದ ಜೋಷಿ ಅವರೊಂದಿಗೆ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ಅವರು, ತಮ್ಮ ನಡುವೆ ಇದ್ದ ಮನಸ್ತಾಪ ಮತ್ತು ಭಿನ್ನಾಭಿಪ್ರಾಯ ಬಗೆಹರಿದಿದೆ ಎಂಬ ಸಂ¨ ೇಶವನ್ನು ರಾಜ್ಯದ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಕಾರ್ಯಕರ್ತರಿಗೆ ನೀಡಿದರು.
Advertisement
25 ಕ್ಷೇತ್ರ-ಬಂಡಾಯದ ಬಿಸಿ?ಈ ಮಧ್ಯೆ ಟಿಕೆಟ್ ವಂಚಿತ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳಿಂದ ಸುಮಾರು 25 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಾಗಬಹುದೆಂದು ಪಕ್ಷದ ರಾಜ್ಯ ಘಟಕ ನಿರೀಕ್ಷಿಸಿದೆ. ಅಸಮಾಧಾನ ಶಮನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ತೆರೆಮರೆಯಲ್ಲೇ ಸಿದ್ಧತೆ ನಡೆಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಆದಂತೆ ಬಂಡಾಯ ಅಭ್ಯರ್ಥಿಗಳೇ ಅಧಿಕೃತ ಅಭ್ಯರ್ಥಿಯ ಸೋಲು ನಿರ್ಧರಿಸದಂತೆ ಜಾಗ್ರತೆ ವಹಿಸಿ ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಎ. 15ರ ಬಳಿಕ ಶಾ ಠಿಕಾಣಿ
ಎ. 15ರ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸುಮಾರು 20 ದಿನಗಳ ಕಾಲ ಬೆಂಗಳೂರಿನಲ್ಲೇ ನೆಲೆಸಲಿರುವ ಅವರು ಪಕ್ಷದ ತಂತ್ರಗಾರಿಕೆ, ಪ್ರಚಾರ, ಭಿನ್ನಮತ ಶಮನ ಕಾರ್ಯ ನಡೆಸುತ್ತಾರೆಂದು ಬಿಜೆಪಿ ಮೂಲಗಳು ತಿಳಿಸಿವೆ. ಶಿಗ್ಗಾವಿಯಿಂದಲೇ ಸ್ಪರ್ಧೆ: ಬೊಮ್ಮಾಯಿ
ತವರು ಕ್ಷೇತ್ರ ಶಿಗ್ಗಾವಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ರೀತಿ ಬೊಮ್ಮಾಯಿ ಕೂಡ ಕ್ಷೇತ್ರ ಬದಲಾಯಿಸುತ್ತಾರೆ ಎಂಬ ವದಂತಿಗೆ ಸೋಮವಾರ ತೆರೆ ಎಳೆದಿದ್ದಾರೆ. ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೊಮ್ಮಾಯಿ ದಾವಣಗೆರೆ ಉತ್ತರ, ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಪೂರ್ಣ ವಿರಾಮ ನೀಡಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿದ ಹಾಲಾಡಿ
ಕುಂದಾಪುರ: ದಿಢೀರ್ ಬೆಳವಣಿಗೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣ ಸ್ಪರ್ಧಾ ಕಣದಿಂದ ಹಿಂದೆ ಸರಿ ಯುವ ನಿರ್ಧಾರ ಪ್ರಕಟಿಸಿದ್ದಾರೆ. ರವಿವಾರ ಬೆಂಗಳೂರಿ ನಲ್ಲಿ ನಡೆದ ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕುಂದಾಪುರ ಕ್ಷೇತ್ರದ ಕುರಿತಾದ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆದಿದೆ. ಅಲ್ಲಿಂದ ಊರಿಗೆ ಬಂದ ಬಳಿಕ ನಡೆದ ಬೆಳವಣಿಗೆಯಲ್ಲಿ 4 ಬಾರಿ ಬಿಜೆಪಿಯಿಂದ, ಒಮ್ಮೆ ಪಕ್ಷೇತರನಾಗಿ ಸ್ಪರ್ಧಿಸಿ ವಿಜಯದ ಸರಪಳಿ ಕಡಿಯದ ಹಾಲಿ ಶಾಸಕರು ಸೋಮವಾರ ಆಪ್ತರ ಸಭೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತವಾಗಿ ಒಟ್ಟು 5 ಅವಧಿಗೆ ಆಯ್ಕೆ ಮಾಡಿದ ಕ್ಷೇತ್ರದ ಎಲ್ಲ ಜಾತಿ, ಧರ್ಮದ ಮತದಾರ ಬಾಂಧವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಛೆಯಿಂದ ಸ್ಪರ್ಧಿಸದೆ ಇರಲು ನಿಶ್ಚಯಿಸಿರುತ್ತೇನೆ. ಈ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಎಲ್ಲ ಮತಬಾಂಧವರೂ ಸಹಕಾರ ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹಾಲಾಡಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.