Advertisement

ಮೆಚ್ಚುಗೆ ಪಡೆದ ದಕ್ಷಾಧ್ವರ

09:33 AM Jul 14, 2017 | |

ಅಜಪುರ ಯಕ್ಷಗಾನ ಸಂಘ (ರಿ.), ಬ್ರಹ್ಮಾವರ ತನ್ನ ಅರುವತ್ತರ ಸಂಭ್ರಮಾಚರಣೆಯ ಪ್ರಯುಕ್ತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ, ಸಂಘದ ಬಾಲ ಕಲಾವಿದರಿಂದ ಯಕ್ಷಗಾನ ಮತ್ತು ಸಂಘದ ಸದಸ್ಯರಿಂದ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆ ಪ್ರಯುಕ್ತ ಬ್ರಹ್ಮಾವರ ಮಹಾಲಿಂಗೇಶ್ವರ ದೇವಾಲಯದ ಉಮಾಮಹೇಶ್ವರ ರಂಗ ಮಂಟಪದಲ್ಲಿ ದಕ್ಷಾಧ್ವರ ಎನ್ನುವ ಅಖ್ಯಾನವನ್ನು ಪ್ರದರ್ಶಿಸಿದರು. ದೇವೇಂದ್ರನು ಮಹಾಸತ್ರವನ್ನು ನಡೆಸಬೇಕೆಂದು ತೀರ್ಮಾನಿಸಿ, ಸುಧರ್ಮ ಸಭೆಗೆ ಈಶ್ವರನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡುತ್ತಾನೆ. ಹೀಗೆ ಸಭೆಯು ನಡೆಯುತ್ತಿರುವ ಸಂದರ್ಭ ಅಲ್ಲಿಗೆ ದಕ್ಷ ಪ್ರಜಾಪತಿಯ ಆಗಮನವಾಗುತ್ತದೆ. ಸಭಾಸದರೆಲ್ಲರೂ ಎದ್ದು ನಿಂತು ಆತನಿಗೆ ಗೌರವವನ್ನು ನೀಡುತ್ತಾರೆ. ಆದರೆ ದಕ್ಷಪ್ರಜಾಪತಿಯ ಅಳಿಯನಾಗಿದ್ದರೂ ಏಳುವುದು ತಾನು ಕುಳಿತಿರುವ ಸ್ಥಾನಕ್ಕೆ ಅಗೌರವವೆಂದು ತಿಳಿದು ಈಶ್ವರನು ಏಳದಿರಲು, ಇದನ್ನು ಅಪಮಾನವೆಂದು ತಿಳಿದ ದಕ್ಷನು ಈಶ್ವರನನ್ನು ತುಚ್ಛಿàಕರಿಸಿ ಮಾತನಾಡಿ ಸಭೆಯಿಂದ ಹಾಗೇ ಹೊರಟು ಹೋಗುತ್ತಾನೆ. ಅನಂತರ ಲೋಕದವರನ್ನೆಲ್ಲ ಆಹ್ವಾನಿಸಿ ನಿರೀಶ್ವರ ಮಹಾಯಾಗವೊಂದನ್ನು ಮಾಡಲು ಇಚ್ಛಿಸುತ್ತಾನೆ. ಬ್ರಾಹ್ಮಣರಿಂದ ಈ ವಿಚಾರ ತಿಳಿದ ದಾಕ್ಷಾಯಿಣಿಯು ಪತಿ ಸಹಿತ ಅಲ್ಲಿಗೆ ಹೋಗಲು ಬಯಸಿದಾಗ ಈಶ್ವರನು ಒಪ್ಪದಿರಲು, ತಾನೊಬ್ಬಳೇ ಯಾಗಕ್ಕೆ ಹೋಗುತ್ತಾಳೆ. ಅಲ್ಲಿ ತನ್ನ ಬರುವಿಕೆಯನ್ನು ಯಾರೊಬ್ಬರೂ ಲೆಕ್ಕಿಸದಿರುವುದನ್ನು ಕಂಡು ಅಪಮಾನಿತಳಾದರೂ ಸುಮ್ಮನಿರುತ್ತಾಳೆ. ಆದರೆ ಯಜ್ಞದ ಕೊನೆಯಲ್ಲಿ ಅಷ್ಟ ದಿಕಾ³ಲಕರಿಗೆ ಹವಿಸ್ಸನ್ನು ಸಮರ್ಪಿಸುವ ಸಂದರ್ಭ ತನ್ನ ಪತಿಗೆ ಹವಿರ್ಭಾಗವನ್ನು ನೀಡದ್ದರಿಂದ ಕನಲಿ ಕೆಂಡವಾಗುತ್ತಾಳೆ. ಹಾಗೆಯೇ ಪತಿಯ ಮಾತನ್ನು ತಿರಸ್ಕರಿಸಿ ಬಂದ ತಾನು ಹಿಂದಿರುಗಿ ಹೋಗುವುದು ಸರಿಯಲ್ಲವೆಂದು ತೀರ್ಮಾನಿಸಿ, ತನ್ನಲ್ಲಿರುವ ಯೋಗಾಗ್ನಿಯಿಂದ ತನ್ನ ದೇಹವನ್ನು ದಹಿಸಿಕೊಳ್ಳುತ್ತಾಳೆ. ವಿಷಯ ತಿಳಿದ ಈಶ್ವರನು ವೀರಭದ್ರನಿಂದ ದಕ್ಷನನ್ನು ಕೊಲ್ಲಿಸುತ್ತಾನೆ. ಇತ್ತ ಯಾಗವು ಅಪೂರ್ಣವಾಗಲು ವಿಪತ್ತುಗಳು ಸಂಭವಿಸಬಹುದೆಂದು ದೇವತೆಗಳು ಬೇಡಿಕೊಳ್ಳಲು ಈಶನು ದಕ್ಷನ ಮುಂಡಕ್ಕೆ ಆಡಿನ ರುಂಡವನ್ನು ಜೋಡಿಸಿ ಯಾಗವನ್ನು ಪೂರ್ತಿಗೊಳಿಸುತ್ತಾನೆ ಎಂಬಲ್ಲಿಗೆ  ಈ ಆಖ್ಯಾನವು ಮುಗಿಯುತ್ತದೆ. 

Advertisement

ಇಲ್ಲಿ ಶಿವನಾಗಿ ಶಶಾಂಕ ಪಟೇಲ್‌ ಅವರು ಪಾತ್ರದ ಗಂಭೀರತೆಯನ್ನು ಸ್ಪಷ್ಟ ಮಾತು ಮತ್ತು ಅಭಿನಯದೊಂದಿಗೆ ಅನಾವರಣಗೊಳಿಸಿದರೆ, ಪ್ರತೀಶ್‌ ಕುಮಾರ್‌ ಅವರು ದಾಕ್ಷಾಯಿಣಿಯ ಮನದ ನೋವು, ಹತಾಶೆ ಮತ್ತು ಕೋಪಾಗ್ನಿಯನ್ನು ಅದ್ಭುತವಾಗಿ ಅಭಿವ್ಯಕ್ತಿಗೊಳಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ದಕ್ಷನಾಗಿ ಗಣೇಶ್‌ ಬ್ರಹ್ಮಾವರ, ಅಗ್ನಿಯಾಗಿ ಶುಭಕರ, ವಾಯುವಾಗಿ ಈಶ್ವರ ಮಟಪಾಡಿ, ದೇವೇಂದ್ರನಾಗಿ ಶ್ರೀಧರ್‌ ಶೆಟ್ಟಿಗಾರ್‌, ವೃದ್ಧ ಬ್ರಾಹ್ಮಣನಾಗಿ ಪ್ರಭಾಕರ್‌ ಆಚಾರ್‌, ವೀರಭದ‌Åನಾಗಿ ದಯಾನಂದ ನಾಯಕ್‌ ಸುಂಕೇರಿ, ಭೃಗು ಮುನಿಯಾಗಿ ವಿನೋದ್‌ ಕುಮಾರ್‌ ಮೊದಲಾದ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್‌ ಕೆದ್ಲಾಯರು, ಮದ್ದಲೆಯಲ್ಲಿ  ಶಶಿಕುಮಾರ್‌ ಆಚಾರ್ಯ, ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ, ಶಿರಿಯಾರ ಸಹಕರಿಸಿದ್ದರು. ಕೃಷ್ಣ ಸ್ವಾಮಿ ಜೋಯಿಸರ ನಿರ್ದೇಶನದಲ್ಲಿ ಮೂಡಿಬಂದ ಈ ಯಕ್ಷಗಾನ ಒಟ್ಟಿನಲ್ಲಿ ಸೊಗಸಾಗಿ ಮೂಡಿ ಬಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
                  
ಕೆ. ದಿನಮಣಿ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next