ತಿ.ನರಸೀಪುರ: ವಾರದೊಳಗೆ ಬಿಜೆಪಿಯ ಮಂಡಲ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗುವುದು. ಸಾಂಸ್ಥಿಕ ಚುನಾವಣೆಯ ಬದಲು ಒಮ್ಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳೋಣ ಎಂದು ಪಕ್ಷದ ಸಾಂಸ್ಥಿಕ ಚುನಾವಣೆಯ ಅಧಿಕಾರಿ ಗೋಪಾಲರಾವ್ ಹೇಳಿದರು.
ಪಟ್ಟಣದಲ್ಲಿ ನಡೆದ ಪಕ್ಷದ ಸಾಂಸ್ಥಿಕ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿದ ಅವರು, ಮಂಡಲ ಇಲ್ಲವೇ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಶೇ.50 ರಷ್ಟು ಬೂತ್ ಸಮಿತಿಯನ್ನು ಕಡ್ಡಾಯವಾಗಿ ರಚನೆ ಮಾಡಿರಬೇಕು ಎಂದರು.
ಪಕ್ಷದ ಸಂಘಟನೆಯಲ್ಲಿ ಬೂತ್ ಸಮಿತಿ ಮುಖ್ಯವಾಗಿದ್ದು, ಬೂತ್ ಸಮಿತಿಯಲ್ಲಿದ್ದವರೇ ಕ್ಷೇತ್ರದಿಂದ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆಯುತ್ತಾರೆ. ಹೀಗಾಗಿ ಬಿಜೆಪಿ ಮುಖಂಡರು ಬೂತ್ ಸಮಿತಿ ರಚನೆಗೆ ಆದ್ಯತೆ ನೀಡಬೇಕು. ಸಾಂಸ್ಥಿಕ ಚುನಾವಣೆ ನಡೆಸುವ ಬದಲು ಒಂದೆಡೆ ಸಭೆಯನ್ನು ಸೇರಿ, ಪದಾಧಿಕಾರಿಗಳ ಆಯ್ಕೆಯನ್ನು ಮಾಡಿಕೊಳ್ಳೋಣ. ವಾರದೊಳಗೆ ಪದಾಧಿಕಾರಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ಜಿಲ್ಲಾ ಸಮಿತಿ ಹಾಗೂ ರಾಜ್ಯ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರೋಣ. ಕೂಡಲೇ ಬೂತ್ ಸಮಿತಿ ರಚನೆ ಮಾಡಿ, ಪದಾಧಿಕಾರಿಗಳ ಪಟ್ಟಿ ತಯಾರಿಸಲು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಪುರಸಭೆ ಸದಸ್ಯ ಎಸ್.ಕೆ.ಕಿರಣ, ಗ್ರಾಪಂ ಅಧ್ಯಕ್ಷ ಎನ್.ಮರಿಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಎಂ.ಜಯಣ್ಣ, ಜಿಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್, ತಾಪಂ ಮಾಜಿ ಸದಸ್ಯ ಕೆ.ಜಿ.ವೀರಣ್ಣ, ಬಸವರಾಜು, ಮುಖಂಡರಾದ ಎನ್.ಲೋಕೇಶ್, ಕುಮಾರ, ರಾಮಸ್ವಾಮಿ, ಸೋಮಶೇಖರಪ್ಪ, ಹೆಗ್ಗೂರು ರಂಗರಾಜು, ಬಿ.ಎಂ.ವಿಜಯಕುಮಾರ್, ನಾಗಲಗೆರೆ ಶಿವಕುಮಾರ್ ಇತರರಿದ್ದರು.