Advertisement

ಸಹಾಯಕ ಪ್ರಾಧ್ಯಾಪಕರ ನೇಮಕ: ಅಕ್ರಮಕ್ಕೆ ಕಡಿವಾಣ ಹಾಕಲು ಸಹಾಯವಾಣಿ

12:51 PM Mar 08, 2022 | Team Udayavani |

ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯು ಯಾವುದೇ ಅಕ್ರಮಗಳಿಲ್ಲದೆ, ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ, ಈ ಬಗ್ಗೆ ಹರಿದಾಡುತ್ತಿರುವ ಅನಪೇಕ್ಷಿತ ವದಂತಿಗಳಿಗೆ ಕಡಿವಾಣ ಹಾಕಿ, ಕಠಿಣ ಕ್ರಮ ಜರುಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯವಾಣಿಯನ್ನು ಆರಂಭಿಸಿದೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ, ಅಭ್ಯರ್ಥಿಗಳಿಗೆ ಯಾವುದಾದರೂ ಆಮಿಷ ಒಡ್ಡಲು ಯಾರಾದರೂ ಪ್ರಯತ್ನಿಸುತ್ತಿದ್ದರೆ ಅಥವಾ ವದಂತಿಗಳನ್ನು ಹರಡುತ್ತಿರುವವರು ಕಂಡುಬಂದರೆ ಮೊಬೈಲ್ ಸಂಖ್ಯೆ 9901581708ಕ್ಕೆ ನೇರವಾಗಿ ಕಚೇರಿ ಸಮಯದಲ್ಲಿ ಕರೆ ಮಾಡಬಹುದು. ಇಲ್ಲವೇ ವಾಟ್ಸಾಪ್ ಮೂಲಕ ತಿಳಿಸಬಹುದು. ಈ ಮಾಹಿತಿಯನ್ನು ಗೌಪ್ಯವಾಗಿಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ಸರಕಾರಿ ನಿಯಮಗಳಿಗೆ ಅನುಗುಣವಾಗಿ, ಪ್ರತಿಭೆಯನ್ನು ಆಧರಿಸಿ ನಡೆಯುತ್ತಿದೆ. ಈ ಬಗ್ಗೆ ಅಭ್ಯರ್ಥಿಗಳು ವದಂತಿಗಳನ್ನು ನಂಬಿ, ಮೋಸ ಹೋಗಬಾರದು. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕಾಗಲಿ, ಅವ್ಯವಹಾರಕ್ಕಾಗಲಿ ಕಿಂಚಿತ್ತೂ ಆಸ್ಪದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲಿಖಿತ ಪರೀಕೆಯಲ್ಲಿ‌ ತೆಗೆದುಕೊಂಡ ಒಟ್ಟು ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಪಾರರ್ದಶಕವಾಗಿ ನಡೆಸಬೇಕು ‌ಎನ್ನುವ ಕಾರಣಕ್ಕೆ ಸಂದರ್ಶನ ಕೂಡ ಇಟ್ಟಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:ಮಹಿಳಾ ದಿನಾಚರಣೆ ವಿಶೇಷ: ಸಾವಯವ ಕೃಷಿ ಸಾಧಕಿ ಲಕ್ಷ್ಮೀ ಶಿರಮಗೊಂಡ

Advertisement

ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಈಗಾಗಲೇ ಘೋಷಿಸಿರುವಂತೆ ಮಾರ್ಚ್ 12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಬರಲಿರುವವರು ಸೂಚಿತ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದುವರೆಗೂ ಪ್ರವೇಶ ಪತ್ರವನ್ನು ಡೌನ್-ಲೋಡ್ ಮಾಡಿಕೊಳ್ಳದೆ ಇರುವ ಅಭ್ಯರ್ಥಿಗಳು ಪ್ರಾಧಿಕಾರದ ಜಾಲತಾಣದ ಮೂಲಕ ಪ್ರವೇಶಪತ್ರವನ್ನು ತೆಗೆದುಕೊಳ್ಳಬೇಕು.

ಪರೀಕ್ಷೆಯು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next