ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ- ಕಾಂಗ್ರೆಸ್ ಟ್ವೀಟ್ ವಾರ್ ಆರಂಭವಾಗಿದೆ. ರಾಜೀನಾಮೆ ವಿಚಾರವಾಗಿ ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ಬಿಜೆಪಿ ತಿರುಗೇಟು ನೀಡಿದೆ.
ನಮ್ಮ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ, ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಲು ರಾಜೀನಾಮೆ ನೀಡಿದ್ದೇನೆ ಎಂದು ಬಿಎಸ್‌ವೈ ಹೇಳಿದ್ದಾರೆ. ಆದರೆ ವಿಶ್ವದಾಖಲೆಯ ಅತಿ ದೀರ್ಘ ಅವಧಿಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರೆಯುತ್ತಿದ್ದಾರೆ. ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಿಕೊಳ್ಳಿ ಎಂದು ಬಿಜೆಪಿ ಟಾಂಗ್ ನೀಡಿದೆ.
ಪಕ್ಷ ನನಗೆ ತಾಯಿ ಸಮಾನವೆಂದು ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದರೆ ಬಿಎಸ್‌ವೈ ಅವರ ವಿದಾಯದಲ್ಲಿ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಭೀಷ್ಮ. ಪಕ್ಷದ ಏಳಿಗೆಗಾಗಿ ಶ್ರಮಿಸಿದ ಯಡಿಯೂರಪ್ಪ ಅವರು ಪಕ್ಷದ ಶಿಸ್ತಿಗೆ ಒಳಪಟ್ಟು ಸ್ವ-ಇಚ್ಛೆಯಿಂದ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸಿದ್ಧಾಂತ, ಆಂತರಿಕ ಶಿಸ್ತಿಗೆ ಒಳಪಟ್ಟು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಈ ವಿಚಾರದಲ್ಲಿ ಗಾಂಧಿ ಕುಟುಂಬದ ಗುಲಾಮರಿಂದ ಕಿವಿ ಮಾತು ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿ ಪಕ್ಷಕ್ಕಿಲ್ಲ ಎಂಬುದನ್ನು ಕಾಂಗ್ರೆಸ್ ಮನಗಾಣಬೇಕು ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಯಾರಾಗಬಹುದು ಸಿಎಂ: ದೆಹಲಿ ಮಟ್ಟದಲ್ಲಿ ಪ್ರಹ್ಲಾದ ಜೋಶಿ ಬಗ್ಗೆ ಒಲವು?
ವಿಪಕ್ಷ ನಾಯಕ ಸಿದ್ದರಾಮಯ್ಯ ನಂತಹ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ರಾಜ್ಯ ಕಂಡಿಲ್ಲ.ಅರ್ಕಾವತಿ ಡಿನೋಟಿಫಿಕೇಶನ್ ಅವ್ಯವಹಾರದ ಜತೆಗೆ ಹಿಂದು ಕಾರ್ಯಕರ್ತರ ಕಗ್ಗೊಲೆಗೆ ಕಾರಣನಾದ ನರ ರೂಪದ ರಾಕ್ಷಸ ಎಂದರೂ ತಪ್ಪಾಗಲಾರದು. ಗಾಂಧಿ ಕುಟುಂಬದ ಗುಲಾಮರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.