Advertisement

ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟನೆಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ

11:30 AM Aug 28, 2017 | Karthik A |

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2016ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಕನಿಷ್ಠ 18ರಿಂದ 35 ವರ್ಷ ಪ್ರಾಯದೊಳಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು.

Advertisement

ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿಟಿಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಠ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರ ಕುರಿತಂತೆ ನೇರವಾಗಿಯೇ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯ ಇರಬಾರದು. ಸೆ. 11 ಅರ್ಜಿ ಸಲ್ಲಿಸಲು ಕೊನೆಯ ದಿನ.

ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-02 ಅವರಿಗೆ ಕಳುಹಿಸಿಕೊಡಲು ಕೋರಿದೆ. ಹೆಚ್ಚಿನ ಮಾಹಿತಿಗೆ: 080-22484516, 22017704 ಸಂಪರ್ಕಿಸುವಂತೆ ಪ್ರಾಧಿಕಾರದ ಆಡಳಿತಾಧಿಕಾರಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next