ತರೀಕೆರೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣದ ಪ್ರದೇಶಗಳನ್ನು ಗುರುತಿಸಿ ಮತ್ತು ಹಿಂದುಳಿದ ಮತ್ತು ದಲಿತ ವರ್ಗದ ಜನರು ಇರುವ ಜಾಗದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಆದ್ಯತೆ ಮೇರೆಗೆ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಡಿ.ಎಸ್. ಸುರೇಶ್ ತಿಳಿಸಿದರು.
ತಾಲೂಕಿನ ಎಂ.ಸಿ. ಹಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ, ಕಟ್ಟೆಹೊಳೆ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, ಡಾ| ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೇಲೇನಹಳ್ಳಿ ರೈಲ್ವೆ ಅಂಡರ್‌ಪಾಸ್‌ನಿಂದ ಇಟ್ಟಿಗೆ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ 1.60 ಕೋಟಿ ರೂ. ಮಂಜೂರು ಮಾಡಿಸಿ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ 9 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಅಷ್ಟಲ್ಲದೆ ಶಾಂತಿಪುರ ಸಮೀಪದ ಭದ್ರಾ ಉಪಕಣಿವೆಯಿಂದ 3 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 15 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಪಿರಮೇನಹಳ್ಳಿ ರಸ್ತೆಗೆ 1 ಕೋಟಿ 60 ಲಕ್ಷ ರೂ., ಇಟ್ಟಿಗೆ ಗ್ರಾಮದ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 1 ಕೋಟಿ 80 ಲಕ್ಷ ರೂ. ನೀಡಲಾಗಿದೆ ಎಂದರು.
ಎಂ.ಸಿ. ಹಳ್ಳಿ ಗ್ರಾಪಂ ಸದಸ್ಯ ಕುಮಾರ್ ಮಾತನಾಡಿ, ನೆನೆಗುದಿಗೆ ಬಿದ್ದಿದ್ದ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಶಾಸಕ ಡಿ.ಎಸ್. ಸುರೇಶ್ ಅವರ ಅವ ಧಿಯಲ್ಲಿ ವೇಗ ಸಿಕ್ಕಿದೆ. ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಎಂ.ಸಿ. ಹಳ್ಳಿ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಬೇಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ದೀಪಾ ಜಯಣ್ಣ, ಸದಸ್ಯರಾದ ಎಚ್. ಆರ್. ಉಮೇಶ್, ಶೃತಿ, ದಿವ್ಯಾ, ಬಲರಾಮ, ಮಾಜಿ ಅಧ್ಯಕ್ಷರಾದ ಚರಣ್‌ಕುಮಾರ್, ಸುರೇಶ್, ತಾಪಂ ಮಾಜಿ ಸದಸ್ಯ ಕರಿಯಪ್ಪ, ರೈಲ್ವೆ ಸಲಹಾ ಸಮಿತಿ ಸದಸ್ಯ ಸೋಮಶೇಖರ್, ಮುಖಂಡರಾದ ಗುರುಮೂರ್ತಿ, ಅಣ್ಣೇಗೌಡ, ರವಿ, ಮಿರ್ಜಾ ಇಸ್ಮಾಯಿಲ್, ಗಿರಿಜಮ್ಮ, ಕೆಆರ್‌ಐಡಿಎಲ್ ಎಇಇ ಅಶ್ವಿನಿ, ಎಂಜಿನಿಯರ್ ಪುನೀತ್ ಹಾಗೂ ಇತರರು ಇದ್ದರು.