ಬೀದರ: ಅಗ್ನಿಪಥ್ ಯೋಜನೆ ಹಿಂಪಡೆಯಬೇಕು ಮತ್ತು ಅಗ್ನಿವೀರರಿಗೆ ಅಪಮಾನ ಮಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ ವಿಜಯವರ್ಗಿ ಕ್ಷಮೆಯಾಚನೆ ಹಾಗೂ ಕೇಂದ್ರ ಸಚಿವ ಜಿ. ಕಿಶನರೆಡ್ಡಿಯವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ಸಂಚಾಲಕ ಬಾಬುರಾವ ಹೊನ್ನಾ ನೇತೃತ್ವದಲ್ಲಿ ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾಧಿ ಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ಬಳಿಕ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಅಧಿಕಾರಿಗೆ ಸಲ್ಲಿಸಿದರು. ಅಗ್ನಿಪಥ್ ಯೋಜನೆ ಹಿಂತೆಗೆದುಕೊಳ್ಳಬೇಕು. ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ ಕೊಡುವುದಾಗಿ ಹೇಳಿ ಅವಮಾನಿಸಿದ ಬಿಜೆಪಿ ನಾಯಕ ಕೈಲಾಸ ವಿಜಯವರ್ಗಿ ಅವರ ಮೇಲೆ ಕೇಸ್ ದಾಖಲಿಸಬೇಕು. ಕೇಂದ್ರ ಸಚಿವ ಜಿ. ಕಿಶನರೆಡ್ಡಿ ಅವರು ಅಗ್ನಿವೀರರ ಸೇವೆಯಿಂದ ಹೊರ ಬಂದ ಬಳಿಕ ಅವರಿಗೆ ವಾಹನ ಚಾಲನೆ, ಎಲೆಕ್ಟ್ರೀಷಿಯನ್, ಫ್ಲಂಬರಿಂಗ್ ಹಾಗೂ ಕ್ಷೌರಿಕರ ತರಬೇತಿ ನೀಡಲಾಗುವುದೆಂದು ಹೇಳಿ ಅಗ್ನಿವೀರರನ್ನು ಅವಮಾನಿಸಿದ್ದಾರೆ. ಹಾಗಾಗಿ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಾರುತಿ ಬೌದ್ಧೆ, ವಹೀದ್ ಲಖನ್, ರಾಜಕುಮಾರ ಮೂಲಭಾರತಿ, ಅಲಿ ಅಹಮ್ಮದ್ ಖಾನ್, ಶೇಖ್ ಅನ್ಸಾರ್ ಮತ್ತಿತರರು ಭಾಗವಹಿಸಿದ್ದರು.