ಹುಬ್ಬಳ್ಳಿ: ವಿವಿಧ ಬಗೆಯ ಮಾಂಸ ಖಾದ್ಯಗಳಿಂದ ಹೆಸರುವಾಸಿಯಾಗಿರುವ ಸಾವಜಿ ಹೋಟೆಲ್‌ಗಳ ಊಟವನ್ನು ಬ್ರ್ಯಾಂಡ್ ಆಗಿ ಪರಿವರ್ತಿಸಲು ಎಸ್‌ಎಸ್‌ಕೆ ಸಾವಜಿ ಹೋಟೆಲ್‌ಗಳ ಮಾಲೀಕರ ಸಂಘ ನಿರ್ಧರಿಸಿದೆ. ಇದರೊಂದಿಗೆ ನಕಲಿ ಸಾವಜಿ ಹೋಟೆಲ್‌ಗಳ ಹಾವಳಿ ತಪ್ಪಿಸಲು ಲೋಗೋ ಹಾಗೂ ಮನೆ ಬಾಗಿಲಿಗೆ ಆಹಾರ ತಲುಪಿಸಲು ಆ್ಯಪ್ ಬಿಡುಗೆಗೊಳಿಸಲಾಯಿತು.
ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾವಜಿ ಹೋಟೆಲ್‌ಗಳು ಮಾಂಸ ಖಾದ್ಯಗಳಿಂದಾಗಿ ಹೆಚ್ಚು ಜನಪ್ರಿಯವಾಗಿವೆ. ಹೀಗಾಗಿ ಕೆಲವೆಡೆ ಸಾವಜಿ ಹೆಸರಿನಲ್ಲಿ ಹೋಟೆಲ್‌ಗಳನ್ನು ನಡೆಸುತ್ತಿದ್ದು, ಇದು ತಮ್ಮ ಸಾಂಪ್ರದಾಯಿಕ ಹಾಗೂ ಪುರಾತನ ಊಟದ ಶೈಲಿಗೆ ಕೆಟ್ಟು ಹೆಸರುವ ತರುವ ಕೆಲಸವಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಾವಜಿ ಹೋಟೆಲ್ ಮಾಲೀಕರ ಸಂಘ ಸ್ಥಾಪನೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಸಂಘದ ಸದಸ್ಯತ್ವ ಪಡೆದವರಿಗೆ ಅಧಿಕೃತಗೊಳಿಸುವ ಪತ್ರ ನೀಡಲಾಗುತ್ತಿದೆ. ಇದು ಅಸಲಿ ಸಾವಜಿ ಹೋಟೆಲ್ ಎಂದು ಗ್ರಾಹಕರು ಗುರುತಿಸಬೇಕು ಎನ್ನುವ ಕಾರಣದಿಂದ ಅವರ ಕುಲದೇವರಾದ
ಶ್ರೀ ಸಹಸ್ರಾರ್ಜುನರ ಚಿತ್ರವಿರುವ ಲೋಗೋ ವಿತರಿಸಲಾಯಿತು. ಸಾವಜಿ ಆಹಾರವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸಂಘದಿಂದಲೇ ಹೊಸ ಆ್ಯಪ್ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ರಾಮಚಂದ್ರ ಹಬೀಬ, ಸಾವಜಿ ಸಮಾಜದಲ್ಲಿ ಶಿಕ್ಷಣವಂತರು ಬಹಳ ಕಡಿಮೆ. ಹಿಂದಿನಿಂದಲೂ ಮಾಂಸ ಆಹಾರದ ಹೋಟೆಲ್‌ಗಳ ಮೂಲಕ ತಮ್ಮ ಜೀವನ ಕಂಡುಕೊಂಡಿದ್ದಾರೆ. ಹೀಗಾಗಿ ನಗರದಲ್ಲಿರುವ 80ಕ್ಕೂ ಹೆಚ್ಚು ಹೋಟೆಲ್‌ಗಳು ಸದಸ್ಯತ್ವ ಪಡೆದುಕೊಂಡಿವೆ. ಇದೇ ಮಾದರಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಸಂಘಟಿಸುವ ಕೆಲಸ ಕಾರ್ಯ ನಡೆಸುತ್ತಿದ್ದೇವೆ.
ಲೋಗೋ ಕೃತಿ ಸ್ವಾಮ್ಯ ಕಾಯ್ದೆ ಅಡಿಯಲ್ಲಿ ತರಲಾಗುತ್ತಿದ್ದು, ಅದನ್ನು ಸದಸ್ಯರಲ್ಲದವರು ಬಳಸಲು ಅವಕಾಶ ಇರುವುದಿಲ್ಲ. ಮೊದಲ ಹಂತದಲ್ಲಿ ನಕಲಿ ಸಾವಜಿ ಹೋಟೆಲ್ ಮಾಲೀಕರಿಗೆ ಹೆಸರು ತೆಗೆಯುವಂತೆ ಮನವಿ ಮಾಡಲಾಗುತ್ತದೆ. ನಂತರದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದರು. ಆ್ಯಪ್ ಸಿದ್ಧಪಡಿಸಿದ ಗೋವಿಂದ ಬಾಕಳೆ ಮಾತನಾಡಿ, ಈಗಾಗಲೇ ಚಾಲ್ತಿಯಲ್ಲಿರುವ ಕೆಲ ಕಂಪನಿಗಳ ರೀತಿಯಲ್ಲಿ ಪ್ರತ್ಯೇಕವಾಗಿ ಸಾವಜಿ ಹೋಟೆಲ್ ಖಾದ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗಲಿದೆ.
ಇದಕ್ಕಾಗಿ ಒಂದಿಷ್ಟು ಡೆಲಿವರಿ ಬಾಯ್ಸ ಕೆಲಸ ಮಾಡಲಿದ್ದಾರೆ. ಪ್ಲೇ ಸ್ಟೋರ್‌ನಲ್ಲಿ “ಸಾವ್ಜಿ ಫೂಡಿ’ ಹೆಸರಿನ ಆ್ಯಪ್ ಡೌನ್ ಮಾಡಿಕೊಂಡು ಬಳಸಬಹುದಾಗಿದೆ. ಸಂಘದ ಸದಸ್ಯತ್ವ ಪಡೆದ ಹೋಟೆಲ್‌ಗಳು ಈ ಆ್ಯಪ್ ಅಡಿಯಲ್ಲಿ ಬರಲಿವೆ. ಪ್ರತಿಯೊಂದು ಹೋಟೆಲ್ ವಿಶೇಷತೆ. ದರ ವಿವರ ಇರಲಿದೆ. ಗ್ರಾಹಕರ ಬೇಡಿಕೆ ಹೋಟೆಲ್ ಹೊರತುಪಡಿಸಿ ಇತರೆ ಹೋಟೆಲ್‌ಗಳಿಂದ ಆಹಾರ ತೆಗೆದುಕೊಂಡು ಹೋಗಲು ಸಾಧ್ಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಸಂಘದ ಶ್ರೀಕಾಂತ ನಾಕೋಡ, ಗೋವಿಂದ ಮಿಸ್ಕನ್, ಗಣಪತಸಾ ಮಿಸ್ಕಿನ, ಸಂತೋಷ ಭಾಂಡಗೆ, ರಮೇಶ ಧೋಂಗಡಿ, ತುಳಜರಾಮ ಕಟಾರೆ, ಗಣಪತಿ ಪವಾರ, ಅರುಣ ಬಾಕಳೆ, ಗೋಲಸಾ ಖೊಡೆ, ಅಮೃತ ಕಲಬುರ್ಗಿ, ನಾಗೂಸಾ ಬಾಕಳೆ ಇನ್ನಿತರರಿದ್ದರು.