ಹೊಸದಿಲ್ಲಿ: ಲಾಭದಾಯಕ ಹುದ್ದೆ ಹೊಂದಿರುವ ಕಾರಣಕ್ಕೆ ಅನರ್ಹತೆಯ ಶಿಕ್ಷೆ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕರು ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗಳನ್ನು ಸೋಮವಾರ ವಾಪಸ್ ಪಡೆದಿದ್ದಾರೆ.
20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್
ಕೋವಿಂದ್ ರವಿವಾರ ಅಂಕಿತ ಹಾಕಿದ್ದರಿಂದ, ಅರ್ಜಿಗಳು ನಿರರ್ಥಕವಾಗಿದ್ದವು. ಹೀಗಾಗಿ ಅರ್ಜಿಗಳನ್ನು ವಾಪಸ್ ಪಡೆದಿದ್ದು, ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ನ್ಯಾಯಾಲಯವೂ ಒಪ್ಪಿಗೆ ನೀಡಿದೆ.
ಮತ್ತೂಂದೆಡೆ, ಛತ್ತೀಸ್ ಗಢದದಲ್ಲಿ ಬಿಜೆಪಿಯ 11 ಶಾಸಕರೂ ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಅವರನ್ನೂ ಅನರ್ಹಗೊಳಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ಈ 11 ಶಾಸಕರು ಕೂಡ ಲಾಭದಾಯಕ ಹುದ್ದೆ ಹೊಂದಿದ್ದು, ಅವರನ್ನೂ ಅನರ್ಹಗೊಳಿಸುವಂತೆ ಇ.ಸಿ.ಶಿಫಾರಸು ಮಾಡಬೇಕು ಅದು ಆಗ್ರಹಿಸಿದೆ.