ನವಿಮುಂಬಯಿ: ಅಪೋಲೊ ಸಾರಥಿ ಸಪೋರ್ಟ್ ಗ್ರೂಪ್ ವತಿಯಿಂದ ವರ್ಲ್ಡ್ ಕ್ಯಾನ್ಸರ್ ಸರ್‌ವೈವರ್ ಡೇ ದಿನದ ಪ್ರಯುಕ್ತ ಜೂ. 2ರಂದು ಅಪೋಲೋ ಆಸ್ಪತ್ರೆಯಲ್ಲಿ ಕಾರ್ಯಕ್ರಮ ನಡೆಯಿತು.
ಕ್ಯಾನ್ಸರ್ ಪೀಡಿತರು ಹೆಚ್ಚಾಗಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದನ್ನು ಮನಗಂಡು ಅಪೋಲೋ ಸಾರಥಿ ಸಪೋರ್ಟ್ ಗ್ರೂಪ್‌ನ ಸದಸ್ಯರು ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬುವ ಉದ್ದೇಶದಿಂದ ಕ್ಯಾನ್ಸರ್‌ನಿಂದ ಮುಕ್ತಗೊಂಡವರೊಂದಿಗೆ ನೇರ ಸಂವಾದ ಮತ್ತು ಕ್ಯಾನ್ಸರ್ ಪೀಡಿತರ ಮಾನಸಿಕ ತೊಳಲಾಟವನ್ನು ಚಿತ್ರಕಲೆಯ ಮೂಲಕ ಪ್ರಚುರಪಡಿಸುವ ಕಾರ್ಯಕ್ರಮವನ್ನು ಈ ಸಂದರ್ಭ ಹಮ್ಮಿಕೊಂಡಿತ್ತು.
ಕ್ಯಾನ್ಸರ್ ಪೀಡಿತರಾಗಿ ಅದರಿಂದ ಸಂಪೂರ್ಣವಾಗಿ ಮುಕ್ತಗೊಂಡವರು ಪ್ರಸ್ತುತ ಅನುಸರಿಸುತ್ತಿರುವ ಜೀವನ ಶೈಲಿಯ ಬಗ್ಗೆ ತಿಳಿಸಲಾಯಿತು. ಆರ್ಟ್ ಥೆರಪಿ ಮತ್ತು ಎಕ್ಸ್ ಪ್ರಸಿವ್ ಥೆರಪಿಯಿಂದ ಕ್ಯಾನ್ಸರ್‌ನಿಂದ ಹೇಗೆ ಹೊರಗಡೆ ಬರಬಹುದು ಎಂಬುದರ ಬಗ್ಗೆ ಇದೇ ಸಂದರ್ಭದಲ್ಲಿ ಮನನ ಮಾಡಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಯಾನ್ಸರ್ ಪೀಡಿತರಾಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಜಿತ್ ಮೋಹಂತೆ ಅವರು, ಕಳೆದ ಹಲವಾರು ವರ್ಷಗಳಿಂದ ಕ್ಯಾನ್ಸರ್‌ನೊಂದಿಗೆ ಹೋರಾಟ ಮಾಡುತ್ತಿದ್ದೇನೆ. ಎಕ್ಸ್‌ಪ್ರೆಸಿವ್ ಆರ್ಟ್ ಥೆರಪಿಯಿಂದ ಗುಂಪಾಗಿ ತಮ್ಮೊಳಗಿನ ನೋವನ್ನು ಕಳೆಯಲು ಸಾಧ್ಯವಿದೆ. ಇದರಿಂದ ನನಗೆ ಬಹಳಷ್ಟು ಅನುಕೂಲವಾಗುತ್ತಿದೆ. ಇದರಿಂದ ಬದುಕಲು ನಮಗೆ ಸ್ಫೂರ್ತಿ ದೊರೆಯುವುದರೊಂದಿಗೆ ಮುಂದೆ ನಮಗೆ ಭವಿಷ್ಯವಿದೆ ಎಂಬುದನ್ನು ತೋರಿಸಿಕೊಡುತ್ತದೆ ಎಂದು ನುಡಿದರು.
ಮುಂಬಯಿ, ನವಿಮುಂಬಯಿ ಸೇರಿದಂತೆ ವಿವಿಧೆಡೆಗಳಿಂದ ಕ್ಯಾನ್ಸರ್ ಪೀಡಿತರು ಆಗಮಿಸಿ ಇದರ ಅನುಕೂಲವನ್ನು ಪಡೆದುಕೊಂಡರು. ಅಪೋಲೊ ಸಾರಥಿ ಸಪೋರ್ಟ್ ಗ್ರೂಪ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.