Advertisement

ಎಪಿಎಂಸಿ ಓಕೆ, ಸೌಕರ್ಯ ಕೊರತೆ ಯಾಕೆ?

11:42 AM Oct 18, 2019 | Suhan S |

ಧಾರವಾಡ: ಇಲ್ಲಿಯ ಮುರುಘಾ ಮಠದ ಹಿಂಬದಿಯ ಹೊಸ ಎಪಿಎಂಸಿ ಪ್ರಾಂಗಣಕ್ಕೆ ಹೋಲ್‌ ಸೆಲ್‌ ಕಾಯಿಪಲ್ಲೆ ಮಾರುಕಟ್ಟೆ ಸ್ಥಳಾಂತರಗೊಂಡ ಬಳಿಕ ವ್ಯಾಪಾಸ್ಥರು, ರೈತರಷ್ಟೇ ಅಲ್ಲದೇ ಈ ಭಾಗದ ಗ್ರಾಹಕರೂ ಫುಲ್‌ ಖುಷಿಯಲ್ಲಿದ್ದಾರೆ.

Advertisement

ಆದರೆ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಇನ್ನೂ ಮೂಲಸೌಕರ್ಯಗಳು ಲಭಿಸಿದ ಕಾರಣ ಸ್ವಲ್ಪ ಮಂಕು ಕವಿಯುವಂತಾಗಿದೆ. ಕಳೆದ ಏಳು ದಶಕಗಳ ಇತಿಹಾಸವಿದ್ದ ನೆಹರೂ ಮಾರುಕಟ್ಟೆಯಲ್ಲಿದ್ದ ಹೋಲ್‌ಸೆಲ್‌ ಕಾಯಿಪಲ್ಲೆ ಮಾರುಕಟ್ಟೆ ಸೆ. 30ರಂದು ಹೊಸ ಎಪಿಎಂಸಿಗೆ ಸ್ಥಳಾಂತರಗೊಂಡಿದೆ. ಕಳೆದ 18 ದಿನಗಳಿಂದ ಪ್ರತಿನಿತ್ಯ ಬೆಳಗ್ಗೆ ವ್ಯಾಪಾರ ಜೋರಾಗಿ ನಡೆದಿದ್ದು, ರೈತರಿಗೂ ಅನುಕೂಲ ಆಗಿದೆ. ಆದರೆ ಎಪಿಎಂಸಿ ಆಡಳಿತ ಮಂಡಳಿ ನೀಡಿದ್ದ ಮೂಲಸೌಕರ್ಯ ಕಲ್ಪಿಸುವ ಭರವಸೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರದೇ ಇರುವುದು ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಕೊಂಚ ಬೇಸರ ಉಂಟು ಮಾಡಿದೆ.

ವಿದ್ಯುತ್‌ ಸಂಪರ್ಕ-ಕಿಟ್‌ ನೀಡಿಲ್ಲ: ವ್ಯಾಪಾರಸ್ಥರಿಗೆ ನೀಡಿದ್ದ 93 ನಿವೇಶನಗಳಲ್ಲಿ ಶೇ.90 ಜಾಗದಲ್ಲಿ ಮಳಿಗೆ ನಿರ್ಮಿಸಿಕೊಂಡಿದ್ದು, ಇನ್ನೂ ಕೆಲ ನಿವೇಶನಗಳಲ್ಲಿ ಮಳಿಗೆಗಳ ನಿರ್ಮಾಣ ಅಂತಿಮ ಹಂತದಲ್ಲಿವೆ. ಸದ್ಯ ಪೂರ್ಣಗೊಂಡ ಮಳಿಗೆಗಳಲ್ಲಿ ವ್ಯಾಪಾರ ಚಟುವಟಿಕೆ ಆರಂಭಿಸಿದ್ದು, ಕೆಲ ಅಂಗಡಿಗಳಿಗೆ ವಿದ್ಯುತ್‌ ಸಂಪರ್ಕ ನೀಡಿ ಮೀಟರ್‌ ಅಳವಡಿಸಲಾಗಿದೆ. ಈ ಪೈಕಿ ಇನ್ನೂ ಕೆಲವೊಂದಿಷ್ಟು ಮಳಿಗೆಗಳಿಗೆ ವಿದ್ಯುತ್‌ ಸಂಪರ್ಕ ಹಾಗೂ ಮೀಟರ್‌ ಅಳವಡಿಕೆ ಕಾರ್ಯ ಆಗಿಲ್ಲ. ಇದರಿಂದ ವ್ಯಾಪಾರ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಎಪಿಎಂಸಿಯಿಂದ ಕೊಡಲು ನಿರ್ಧರಿಸಿದ್ದ ಕಿಟ್‌ಗಳು ಸಹ ವ್ಯಾಪಾರಸ್ಥರ ಕೈ ಸೇರಿಲ್ಲ.

ಆರಂಭಿಸಿಲ್ಲ ನೀರಿನ ಘಟಕ: ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ನೀರಿನ ಟ್ಯಾಂಕ್‌ ಹಾಗೂ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ ಇವೆರಡೂ ಈವರೆಗೂ ಆರಂಭವೇ ಆಗಿಲ್ಲ. ಎಪಿಎಂಸಿ ಆಡಳಿತ ಮಂಡಳಿ ಇತ್ತ ಲಕ್ಷ್ಯ ವಹಿಸದೇ ಇರುವುದು ವ್ಯಾಪಾರಸ್ಥರ ಕೆಂಗಣ್ಣಿಗೆ ಕಾರಣವಾಗಿದೆ.

ಪ್ರತ್ಯೇಕ ಶೌಚಾಲಯ ನಿರ್ಮಿಸಿ ಕೊಡುವ ಕೆಲಸವೂ ಸಾಗಿಲ್ಲ. ತಾತ್ಕಾಲಿಕವಾಗಿ ಆಡಳಿತ ಮಂಡಳಿ ಕಚೇರಿ ಬಳಿಯ ಎರಡೂ ಶೌಚಾಲಯ ಬಳಕೆಗೆ ಅವಕಾಶ ನೀಡುವುದಾಗಿ ಹೇಳಿದ್ದ ಎಪಿಎಂಸಿ ಅವುಗಳಿಗೆ ಬೀಗ ಜಡಿದಿದೆ!

Advertisement

ಕ್ಯಾಂಟೀನ್‌ ವ್ಯವಸ್ಥೆ ಇಲ್ಲ: ಇಡೀ ಮಾರುಕಟ್ಟೆ ಪ್ರಾಂಗಣದಲ್ಲಿ ಎರಡು ಕ್ಯಾಂಟೀನ್‌ಗಳಿವೆ. ಆದರೆ ನಿರ್ವಹಣೆ ಇಲ್ಲದೆ ಇವರೆಡೂ ಹಾಳಾಗುತ್ತಿವೆ. ಹೀಗಾಗಿ ಮಾರುಕಟ್ಟೆ ರಸ್ತೆಗಳಲ್ಲಿ ಡಬ್ಟಾ ಅಂಗಡಿಗಳು ತಲೆ ಎತ್ತಿವೆ. ರೈತರಿಗೆ ಈ ಡಬ್ಟಾ ಅಂಗಡಿಗಳೇ ಉಪಹಾರ, ಚಹಾ ಕೇಂದ್ರಗಳಾಗಿದ್ದು, ಇದಕ್ಕೆ ಕಡಿವಾಣ ಹಾಕಿ ಕ್ಯಾಂಟೀನ್‌ ವ್ಯವಸ್ಥೆ ಪುನರ್‌ ಆರಂಭಿಸಲು ಎಪಿಎಂಸಿ ಆಡಳಿತ ಮಂಡಳಿ ಲಕ್ಷ್ಯ ವಹಿಸಬೇಕಿದೆ.

ಹಂದಿಗಳ ಕಾಟ: ಎಪಿಎಂಸಿ ಆವರಣದಲ್ಲಿ ಹಂದಿಗಳು ವ್ಯಾಪಾರಸ್ಥರು ಮತ್ತು ಗ್ರಾಹಕರು ಪೀಡಿಸುತ್ತಲೇ ಇವೆ. ಇಲ್ಲಿ ಯಾರು ಹಂದಿಗಳನ್ನು ಬಿಟ್ಟು ಹೋಗುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಒಣ ಹಾಕಿದ ಧಾನ್ಯಗಳನ್ನು ಹಂದಿಗಳಿಂದ ರಕ್ಷಿಸಲು ಹೆಚ್ಚಿನ ಹಣ ಕೊಟ್ಟು ಆಳುಗಳನ್ನು ಕಾಯಲು ನಿಲ್ಲಿಸುವ ಸ್ಥಿತಿ ವ್ಯಾಪಾರಸ್ಥರದ್ದಾಗಿದೆ.

ಕಾಲಮಿತಿ ನಿಗದಿ ಒಳಿತು : ಬೆಳಗ್ಗೆಯಿಂದ 6ರಿಂದ 9 ಗಂಟೆವರೆಗೆ ಹೋಲ್‌ಸೆಲ್‌ ಕಾಯಿಪಲ್ಲೆ ಮಾರುಕಟ್ಟೆಯ ವ್ಯಾಪಾರಕ್ಕೆ ಕಾಲಮಿತಿ ನಿಗದಿ ಮಾಡಬೇಕೆಂಬ ಅಭಿಪ್ರಾಯ ವ್ಯಾಪಾರಸ್ಥರು ಹಾಗೂ ರೈತರಿಂದ ಕೇಳಿ ಬಂದಿದೆ. ಈ ಮಾರುಕಟ್ಟೆ ಬೆಳಗ್ಗೆ ಹೊತ್ತಿನಲ್ಲಿ ಮುಗಿದರೆ ರೈತರಿಗೂ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ. ಆದರೆ ಹೊಸ ಮಾರುಕಟ್ಟೆಯಲ್ಲಿ 12 ಗಂಟೆವರೆಗೂ ವ್ಯಾಪಾರ ಆಗುತ್ತಲಿದ್ದು, ಇದಕ್ಕೆ ಕಡಿವಾಣ ಹಾಕಿ ಕಾಲಮಿತಿಯನ್ನು ಎಪಿಎಂಸಿ ಆಡಳಿತ ಮಂಡಳಿ ಮಾಡಬೇಕಿದೆ.

 

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next