ಹುಣಸೂರು: ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಮತ ಹೊಂದಿದ್ದರೂ ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರು ಕೈಕೊಟ್ಟಿದ್ದರಿಂದ ಜೆಡಿಎಸ್ ಬೆಂಬಲಿತ ಎಸ್.ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಲಿತಾ ಚೌಡನಾಯ್ಕ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತರಾದರು.
ಒಟ್ಟು 17 ಸದಸ್ಯರ ಪೈಕಿ ಮೂವರು ನಾಮ ನಿರ್ದೇಶಿತರು ಸೇರಿದಂತೆ 9 ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಜೆಡಿಎಸ್‌ನ 8 ಮಂದಿ ಬೆಂಬಲಿತರಿದ್ದರು. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಚಿಲ್ಕಂದ ಕ್ಷೇತ್ರದ ಎಸ್.ಕುಮಾರ್ 9 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹನಗೋಡು ಕ್ಷೇತ್ರದ ಶಿವಣ್ಣ 8 ಮತ ಪಡೆದು ಸೋತರು. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಲಿತಾ ಚೌಡನಾಯ್ಕ 9 ಮತ ಪಡೆದು ಆಯ್ಕೆಯಾದರು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಧರ್ಮಾಪುರ ಕ್ಷೇತ್ರದ ಬಸವರಾಜಪ್ಪ 8 ಮತಗಳಿಸಿ ಸೋತರು. ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 9 ಸಂಖ್ಯಾಬಲವಿರುವ ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯಲಿದೆಯೆಂದು ನಿರೀಕ್ಷಿಸಲಾಗಿತ್ತು. ಆದರೆ ಜೆಡಿಎಸ್‌ನ ತಂತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋತು ಪಕ್ಷ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
ಕಾಂಗ್ರೆಸ್‌ನಲ್ಲೂ ಪೈಪೋಟಿ: ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಸಬಾ ಕ್ಷೇತ್ರದ ಮಹದೇವ್, ಹನಗೋಡು ಕ್ಷೇತ್ರದ ಶಿವಣ್ಣ, ಮರದೂರು ಕ್ಷೇತ್ರದ ಮಂಜುನಾಥ್ ನಡುವೆ ತೀವ್ರ ಪೈಪೋಟಿ ಇತ್ತು. ಮೂವರು ತಮಗೆ ಮೊದಲೇ ಅವಕಾಶ ಕಲ್ಪಿಸಬೇಕೆಂದು ಪಟ್ಟುಹಿಡಿದಿದ್ದರು. ಗುರುವಾರ ಬೆಳಿಗ್ಗೆ ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ಪಕ್ಷದ ಮುಖಂಡರು ಶಿವಣ್ಣಗೆ ಮೊದಲ ಅವಧಿ ನಂತರ ಮಹದೇವ್‌ಗೆ ಆನಂತರ ಮಂಜುನಾಥ್‌ಗೆ ಅಧಿಕಾರವೆಂದು ತೀರ್ಮಾನಿಸಿದ್ದರು. ಆದರೆ ಚುನಾವಣಾ ಫಲಿತಾಂಶವೇ ಉಲ್ಟವಾಗಿ ಉಪಾಧ್ಯಕ್ಷ ಸ್ಥಾನ ಮಾತ್ರ ಗಟ್ಟಿಯಾಯಿತು.
ಫಲಿಸಿದ ಜಿಟಿಡಿ ತಂತ್ರಗಾರಿಕೆ: ಕಾಂಗ್ರೆಸಿನಲ್ಲಿ ಆಕಾಂಕ್ಷಿಗಳ ಅಧಿಕಾರ ದಾಹವನ್ನರಿತ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಮಾಡಿದ ತಂತ್ರ ಫಲ ನೀಡಿ, ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಒಲಿಯುವಂತೆ ಮಾಡಿತು. ತಹಶೀಲ್ದಾರ್ ಎಸ್.ಪಿ.ಮೋಹನ್ ಚುನಾವಣಾಧಿಕಾರಿಯಾಗಿದ್ದರು. ಎಪಿಎಂಸಿ ಕಾರ್ಯದರ್ಶಿ ಹಂಪಣ್ಣ ಹಾಜರಿದ್ದರು.
ಪಟಾಕಿ ಸಿಡಿಸಿ ಸಂಭ್ರಮ: ನೂತನ ವರಿಷ್ಠರನ್ನು ಅವರವರ ಪಕ್ಷದ ಸದಸ್ಯರು ಅಭಿನಂದಿಸಿದರು. ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ವೃತ್ತ ನಿರೀಕ್ಷಕ ಧರ್ಮೇಂದ್ರ, ಪಿಎಸ್‌ಐ ಪುಟ್ಟಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.
ಯಕ್ಷಪ್ರಶ್ನೆ
ಅಡ್ಡಮತದಾನ ಮಾಡಿದ ಸದಸ್ಯರು ಯಾರು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕಾಗಿ ತಾಲೂಕಿನ ಪ್ರಸಿದ್ಧ ಯಾತ್ರಸ್ಥಳವಾದ ಕಪ್ಪಡಿಗೆ ಸದಸ್ಯರನ್ನು ಕರೆದುಕೊಂಡು ಹೋಗಿ ಕಪ್ಪಡಿಯಲ್ಲಿ ಪ್ರಮಾಣ ಮಾಡಿಸಲು ಕಾಂಗ್ರೆಸ್ ಸದ್ಯಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಿದೆ.