ಹೊಸದಿಲ್ಲಿ : ‘ಭಾರತ ಮತ್ತು ಪಾಕಿಸ್ಥಾನ ನಡುವೆ ಶಾಂತಿ ಏರ್ಪಡಬೇಕೆಂಬ ಬಗ್ಗೆ ಇಸ್ಲಾಮಾಬಾದ್‌ನಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಬಂದಲ್ಲಿ ಅದನ್ನು ಹೊಸದಿಲ್ಲಿ ಗಂಭೀರವಾಗಿ ಪರಿಗಣಿಸುತ್ತದೆ’ ಎಂದು ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
‘ಕಾಶ್ಮೀರ ಸಹಿತ ಭಾರತದೊಂದಿಗಿನ ಎಲ್ಲ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸುವುದಕ್ಕೆ ಪಾಕ್ ಸೇನೆ ಒಲವು ತೋರಿದೆ ‘ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಇಂದು ಸೋಮವಾರ ಇಲ್ಲಿ ನಡೆದ ವಿಚಾರ ಸಂಕಿರಣವೊಂದರ ಪಾರ್ಶ್ವದಲ್ಲಿ ಪತ್ರಕರ್ತರಿಗೆ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
‘ಮುಸ್ಲಿಮರ ಪವಿತ್ರ ರಮ್ಜಾನ್ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಯಾವುದೇ ಸೇನಾ ಕಾರ್ಯಾಚರಣೆ ನಡೆಸದಿರುವ ಭಾರತ ಸರಕಾರದ ನಿರ್ಧಾರವನ್ನು ದೇಶದ ಸೇನೆ ಸಂಪೂರ್ಣವಾಗಿ ಗೌರವಿಸುವುದೆಂದು’ ಸಚಿವೆ ಸೀತಾರಾಮನ್ ಹೇಳಿದರು
ಭಾರತದೊಂದಿಗಿನ ಶಾಂತಿ ಮಾತುಕತೆಗೆ ಪಾಕ್ ಸೇನೆಯ ಬೆಂಬಲ ಇರುವುದಿಲ್ಲ ಎಂಬ ಈ ವರೆಗಿನ ಸಾಮಾನ್ಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಈಚೆಗೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಕಾಶ್ಮೀರ ಸಹಿತ ಭಾರತದೊಂದಿಗಿನ ಯಾವುದೇ ವಿವಾದವನ್ನು ಶಾಂತಿಯುತವಾಗಿ ಮಾತುಕತೆ ಮೂಲಕ ಬಗೆಹರಿಸುವುದನ್ನು ಪಾಕ್ ಸೇನೆ ಬಯಸುತ್ತದೆ ಎಂದು ಹೇಳಿದ್ದರು.
ಆ ನೆಲೆಯಲ್ಲಿ ಸಚಿವೆ ಸೀತಾರಾಮನ್ ಅವರು “ಶಾಂತಿ ಕುರಿತಾಗಿ ಪಾಕಿಸ್ಥಾನದಿಂದ ವ್ಯಕ್ತವಾಗುವ ಯಾವುದೇ ಧನಾತ್ಮಕ ಪ್ರತಿಕ್ರಿಯೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿ ಉಭಯ ದೇಶಗಳ ನಡುವೆ ಶಾಂತಿ ಏರ್ಪಡುವುದಕ್ಕೆ ಶ್ರಮಿಸುವುದು’ ಎಂದು ಹೇಳಿದರು.
ಭಾರತದ ಸೇನಾ ಪಡೆ, ನೌಕಾ ಪಡೆ ಮತ್ತು ವಾಯು ಪಡೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ ಅಥವಾ ಎಐ) ಬಳಸುವ ಅಗತ್ಯಕ್ಕೆ ಸೀತಾರಾಮನ್ ಈ ಸಂದರ್ಭದಲ್ಲಿ ಒತ್ತು ನೀಡಿದರು.