ಮಡಿಕೇರಿ: ಮನೆಯೊಂದು ದೋಣಿಯಂತೆ ಜಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಆ ಮನೆಗೆ ಹೊಂದಿಕೊಂಡಿರುವ ಮತ್ತೂಂದು ಮನೆಯವರ ಆತಂಕ ಇನ್ನೂ ಕಡಿಮೆಯಾಗಿಲ್ಲ.
ಮಡಿಕೇರಿ ನಗರದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕಾನ್ವೆಂಟ್ ರಸ್ತೆಯ ಮುತ್ತಪ್ಪ ಟೆಂಪಲ್ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ರಸ್ತೆಗೆ ತಾಗಿಕೊಂಡಿರುವ ಮನೆಯೊಂದರ ಹಿಂಬದಿಯ ಗುಡ್ಡ ಕುಸಿದ ಪರಿಣಾಮ ಮನೆ ಪೂರ್ಣವಾಗಿ ಸುಮಾರು 50 ಮೀಟರ್ ಜಾರಿ ಕೆಳಗೆ ಹೋಗಿದೆ. ಆದರೆ, ಘಟನೆ ಸಂಭವಿಸಿ ವಾರ ಕಳೆದರೂ ಪಕ್ಕದಲ್ಲಿರುವ ಕುಟುಂಬದವರ ಆತಂಕ ತಗ್ಗಿಲ್ಲ.
ಒಂದು ಮನೆ ಸಂಪೂರ್ಣ ಜಾರಿ ಕೆಳಗೆ ಬಿದ್ದಿದ್ದು, ಇನ್ನೊಂದು ಮನೆ ಅರ್ಧ ಮಾತ್ರ ಕುಸಿದು, ಇನ್ನರ್ಧ ಯಾವಾಗ ಬೇಕಾದರೂ ಬೀಳಬಹುದಾದ ಸ್ಥಿತಿಯಲ್ಲಿದೆ.ಅದರ ಕೆಳಭಾಗದಲ್ಲೇ ರಝಾಕ್ ಎಂಬುವರ ಮನೆಯಿದೆ. 15 ದಿನದ ಮಗು ಸೇರಿ 6 ಮಕ್ಕಳಿದ್ದಾರೆ.
ಮನೆಗೆ ಹೋಗಲು ಸರಿಯಾದ ರಸ್ತೆಯೂ ಇಲ್ಲ. ಪಕ್ಕದಲ್ಲಿ ಇನ್ನೊಂದು ಮನೆ ಇದೆ. ಅದರಲ್ಲಿ ತಾಯಿ ಮಗಳು ಸೇರಿ ಮೂವರು ವಾಸವಾಗಿದ್ದಾರೆ. ಇವರ್ಯಾರೂ ಈಗ ನೆಮ್ಮದಿಯಿಂದ ಇಲ್ಲ.
“ಮನೆ ಕುಸಿದು ಅವಶೇಷಗಳು ಹಾಗೇ ಬಿದ್ದಿವೆ.ಇನ್ನೊಂದು ಮನೆ ಅರ್ಧ ಕುಸಿದು ನಿಂತಿವೆ. ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ವಾಸವಾಗಿದ್ದೇವೆ. ಮೇಲಿದ್ದ ಮನೆ ಕುಸಿದು ನಮ್ಮ ಮನೆ ಮೇಲೆಯೇ ಬೀಳುವ ಸ್ಥಿತಿಯಲ್ಲಿದೆ’ ಎಂದು ರಝಾಕ್ ನೋವು ತೋಡಿಕೊಂಡರು. ಮನೆಯಲ್ಲಿ 15 ದಿನದ ಹಸುಗೂಸು ಸೇರಿ ಆರು ಮಕ್ಕಳಿದ್ದಾರೆ. ಸದಾ ಎಲ್ಲರ ಮೇಲೂ ಕಣ್ಣಿಡಲು ಸಾಧ್ಯವಿಲ್ಲ. ಈ ಹಿಂದೆ ಮನೆ ಕುಸಿದ ಸಂದರ್ಭದಲ್ಲಿ ಜೀವಭಯದಿಂದ ಓಡಿದ್ದೇವೆ. ಮತ್ತೆ ಮಳೆ ಸುರಿದರೆ ಮನೆಯ ಮೇಲೆ ನೇರ ಹಾನಿಯಾಗಲಿದೆ. ನಗರಸಭೆ ಅಧಿಕಾರಿಗಳು ಸಹಿತವಾಗಿ ಎಲ್ಲರೂ ಬಂದು ಪರಿಶೀಲಿಸಿ ಹೋಗಿದ್ದಾರೆ.
ಆದರೆ, ಸುರಕ್ಷತೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.ರಝಾಕ್ ಅವರು ಕತಾರ್‌ನಲ್ಲಿ ಸರ್ಕಾರಿ ಶಾಲೆಯ
ಕಾರು ಚಾಲಕ. ಕಳೆದ ತಿಂಗಳಷ್ಟೇ ಕುಟುಂಬದವರನ್ನು ನೋಡಲು ಬಂದಿದ್ದರು. ಆ.28 ರಂದು ಅವರು ಮರಳಿ ಕತಾರ್‌ಗೆ ಹೋಗಬೇಕಿದೆ. ಆದರೆ, ಇಂತಹ ಸಂದರ್ಭದಲ್ಲಿ ಕುಟುಂಬದವರನ್ನು ಬಿಟ್ಟು ಹೋಗುವುದು ಹೇಗೆ ಎಂಬ ಚಿಂತೆ ಅವರದು.