ಅಮ್ಮ ಮಗಳಲ್ಲಿ ಕೇಳ್ಳೋ ಈ ನೂರು ಪ್ರಶ್ನೆಗಳು ಅನುಮಾನವಲ್ಲ. ಜಸ್ಟ್ ಅಮ್ಮನ ಆತಂಕ ಅಷ್ಟೆ. ಅಮ್ಮ ಅನುಮಾನದ ಪ್ರಾಣಿಯಲ್ಲ. ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಮಗಳು ಹಾದಿ ತಪ್ಪಬಾರದು ಅಂತ ಆಶಿಸುವ ಒಬ್ಬ ನಿಜವಾದ ಮಮತಾಮಯಿ ಅಷ್ಟೆ.
ಹರೆಯಕ್ಕೆ ಕಾಲಿಟ್ಟ ಅದೆಷ್ಟೋ ಹುಡುಗ, ಹುಡುಗಿಯರ ಪಾಲಿಗೆ ಅಮ್ಮ ವಿಲನ್ ಆಗಿ ಬಿಡ್ತಾಳೆ. ಏನೇ ಮಾತನಾಡಿದ್ರೂ ಪ್ರಶ್ನೆ ಮೇಲೆ ಪ್ರಶ್ನೆ ಕೇಳುವ ಅಮ್ಮ ಯಾಕಿಗೆ ಕಾಡ್ತಾಳೆ ಅಂತ ಅನಿಸೋದೆ ಹೆಚ್ಚು. ಫೋನ್‌ನಲ್ಲಿ ಮಾತನಾಡಿದಾಗ ಕಿವಿ ಕೊಡುವ ಅಮ್ಮ, ಮನೆಯಿಂದ ಹೊರ ಹೋದಾಗ ನೂರು ಸಾರಿ ಎಚ್ಚರಿಸುತ್ತಾಳೆ. ಅಮ್ಮನಿಗೆ ನನ್ಮೆàಲೆ ಯಾಕಿಷ್ಟು ಅನುಮಾನ ಅಂತ ಬೇಸರವಾಗದೆ ಇರಲ್ಲ. ಆದ್ರೆ ಅಮ್ಮನಿಗಿರುವ ಆತಂಕ ಅದೆಷ್ಟೋ ಮಂದಿಗೆ ಅರ್ಥವಾಗುವುದಿಲ್ಲ.
ಮಗಳು ಕಾಲೇಜು ಮೆಟ್ಟಿಲು ಹತ್ತಿದ ನಂತರವಂತೂ ಅಮ್ಮನಲ್ಲಿ ಇನ್ನಿಲ್ಲದ ಚಡಪಡಿಕೆ. ಸುಮ್ ಸುಮ್ನೆ ನಗೋದು, ಹುಡುಗರಲ್ಲಿ ಮಾತನಾಡೋದು ಮಾಡ್ಬೇಡ. ಓದು, ಮನೆ ಇಷ್ಟೇ ಇದ್ರೆ ಸಾಕು ಅಂತ ಸಾರಿ ಸಾರಿ ಹೇಳುವ ಅಮ್ಮ ಅನುಮಾನದ ಗುಮ್ಮನಂತೆ ಕಾಣತೊಡಗುತ್ತಾಳೆ. ಎಷ್ಟು ಸಾರಿ ಹೇಳಿದ್ದನ್ನೇ ಹೇಳ್ತೀಯಾ, ಸುಮ್ನಿರು ನಾನೇನು ಚಿಕ್ಕ ಹುಡುಗಿಯಲ್ಲ ಅಂತ ಮಗಳು ಹುಸಿ ಕೋಪ ತೋರಿದ್ರೂ, ಅಮ್ಮನಿಗೆ ಹುಸಿ ನಗು., ಆತಂಕ…
ಮಗಳು ಹೈ ಹೀಲ್ಡ್ ಚಪ್ಪಲಿ ತುಳಿದು ಗೇಟ್ ದಾಟಿ ಹೊರಟು ಹೋದ್ರೂ, ಅಮ್ಮ ಮೌನಿ. ಮಗಳು ಹಾದಿ ತಪ್ಪುತ್ತಾಳೇನೋ ಅನ್ನೋದು ಅಮ್ಮನ ಆತಂಕ. ಮಗಳು ಕಾಲೇಜಿನಿಂದ ಮರಳಿ ಬಂದ ಕೂಡಲೇ ಸಿಐಡಿಯಂತೆ ಅಮ್ಮನ ತನಿಖೆ ಶುರುವಾಗುತ್ತದೆ. ಮತ್ತೆ ಬ್ಯಾಗ್ ಚೆಕ್ಕಿಂಗ್. ಮಗಳು ಅತ್ತ ಹೋದ ಕೂಡಲೇ ಮಗಳ ಬ್ಯಾಗ್‌ನಲ್ಲಿ ಏನಾದ್ರೂ ಸಿಗುತ್ತೋ ಅಂತ ತಡಕಾಡುತ್ತಾಳೆ. ಮೊಬೈಲ್ ನೋಡಿದರೂ ಪಾಸ್‌ವರ್ಡ್ ಗೊತ್ತಾಗದೆ ಪರದಾಡುತ್ತಾಳೆ. ಮಗಳು ವರಾಂಡದಿಂದ ಹೊರಬಂದು ಫೋನ್‌ನಲ್ಲಿ ಪಿಸು ಪಿಸು ಮಾತನಾಡಿದರೆ ಅಮ್ಮನಲ್ಲಿ ನೂರು ಪ್ರಶ್ನೆಗಳು. ಮಗಳು ಫ್ರೆಂಡ್ ಕಾಲ್ ಮಾಡಿದು ಅಂತ ಹೇಳಿದ್ರೂ ಹೌದಾ ಅನ್ನುವ ಅಮ್ಮನ ಆತಂಕ ಕೊನೆಯಾಗಲ್ಲ. ಸಂಡೇ ಸ್ಪೆಷಲ್ ಕ್ಲಾಸ್ ಅಂತ ಹೇಳಿ ಮನೆಯಿಂದ ಹೊರಟಾಗಲಂತೂ ಅರಿಯಲಾಗದ ಆತಂಕ.
ಸಿಲಬಸ್ ಕಂಪ್ಲೀಟ್ ಮಾಡೋಕೆ ಎಕ್ಸ್‌ಟ್ರಾ ಕ್ಲಾಸ್ ಮಾಡ್ತಾರೆ ಅಂತ ಮಗಳು ಎಷ್ಟು ಸಾರಿ ಹೇಳಿದರೂ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿರಲ್ಲ ಅಮ್ಮ. ಮಗಳು ಅಮ್ಮ, ಅಮ್ಮ ಅಂತ ಹಿಂದೆ ಕಾಡ್ತಾ ದಿನದ ಘಟನೆಯನ್ನೆಲ್ಲಾ ವಿವರಿಸಿದ್ರೂ ಅದೇನೋ ಅನುಮಾನ. ಹರೆಯದ ಹುಮ್ಮಸ್ಸಿನಲ್ಲಿ, ಸ್ನೇಹಿತರ ಸಹವಾಸದಿಂದ ಮಗಳು ಎಲ್ಲಿ ದಾರಿ ತಪ್ಪುತ್ತಾಳ್ಳೋ ಅನ್ನೋ ಭಯ.
ಮಗಳು ಕನ್ನಡಿ ಮುಂದೆ ನಿಂತು ಗಂಟೆಗಟ್ಟಲೆ, ಮೇಕಪ್ ಮಾಡಿ ಫ್ರೆಂಡ್ ಮದ್ವೆಗೆ ಹೊರಟಾಗ “ಚೆನ್ನಾಗಿ ಕಾಣಿ¤ದ್ದೀಯಾ’ ಅನ್ನೋದು ಅಪ್ಪನ ಕಾಂಪ್ಲಿಮೆಂಟ್. “ಬೇಗ್ ಬಂದು ಬಿಡು’ ಅನ್ನೋದು ಅಮ್ಮನ ಯಾವತ್ತಿನ ಡೈಲಾಗ್. ಗಂಟೆಗಟ್ಟಲೆ ರೂಮು ಸೇರಿ ಫೋನ್‌ನಲ್ಲಿ ಮಾತನಾಡುವ ಮಗಳ ಬಗ್ಗೆ ಪ್ರತಿಯೊಬ್ಬ ಅಮ್ಮನಿಗೂ ಆ ಭಯ ಇದ್ದೇ ಇರುತ್ತದೆ.
ಮಗಳು ಯಾವುದೋ ಹುಡುಗನ ಪ್ರೀತಿಯ ಬಲೆಯಲ್ಲಿ ಬಿದ್ದು, ಮುಂದೊಂದು ದಿನ ಮನೆಯವರನ್ನೇ ಧಿಕ್ಕರಿಸುತ್ತಾಳೆ ಅನ್ನೋ ಹೆದರಿಕೆ ಅಮ್ಮನನ್ನು ಕಾಡುತ್ತಿರುತ್ತದೆ. ಪಕ್ಕದ್ಮನೆಯವ್ರು “ಆಚೆ ಮನೆ ಪದ್ಮಾ ಮಗಳು ಎರಡು ದಿನದ ಹಿಂದೆ ಓಡಿ ಹೋದಳಂತೆ’ ಅನ್ನೋವಾಗಲಂತೂ ಅಮ್ಮನ ಆತಂಕ ದುಪ್ಪಟ್ಟಾಗಿ ಬಿಡುತ್ತದೆ. ಮುದ್ದು ಮಗಳು ಅಮ್ಮನ ಮಗಳಾಗಿಯೇ ಉಳಿದಿದ್ದಾಳೆ ಅಂತ ಗೊತ್ತಾಗೋದು, ನಾಳೆ ನಮ್ಮ ಪುಟ್ಟಿನ ನೋಡೋಕೆ ಹುಡುಗನ ಕಡೆಯವರು ಬರ್ತಿದ್ದಾರೆ ಕಣೇ ಅನ್ನೋ ಅಪ್ಪನ ಮಾತಿಗೆ ಮಗಳು ನಾಚಿ ನೀರಾದಾಗಲೇ.
ವಿನುತಾ ಪೆರ್ಲ