ಬೀದರ: ಬಸವಕಲ್ಯಾಣದಲ್ಲಿ ನ.28 ಮತ್ತು 29ರಂದು ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ವತಿಯಿಂದ 41ನೇ ಶರಣ ಕಮ್ಮಟ-ಅನುಭವ ಮಂಟಪ ಉತ್ಸವ-2020, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಅಂತರ್ಜಾಲದ ಮೂಲಕ ನೇರ ಪ್ರವಾಸದ ವ್ಯವಸ್ಥೆ ಮಾಡಲಾಗಿದೆ ಎಂದು ಅನುಭವ ಮಂಟಪ ಅಧ್ಯಕ್ಷರಾದ ಡಾ| ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಫೆಸ್‌ಬುಕ್ ಮತ್ತು ಯುಟ್ಯೂಬ್ ನೇರ ಪ್ರಸಾರದ ವ್ಯವಸ್ಥೆ ಇರಲಿದೆ. ಸಮಾರಂಭದಲ್ಲಿ ಸಾನ್ನಿಧ್ಯ ವಹಿಸುವ ಸ್ವಾಮಿಜಿಗಳು ಮತ್ತು ಮುಖ್ಯ ಅತಿಥಿಗಳು ವಿಡಿಯೋ ಸಂದೇಶದ ಮೂಲಕವೇ ತಮ್ಮ ಅನುಭಾವ ನೀಡಲಿದ್ದಾರೆ. 28ರಂದು ಬೆ.10ಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಧ್ವಜಾರೋಹಣ ನೆರವೇರಿಸುವರು. ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೊಳ್ ವಚನ ಪಠಣ ಮತ್ತು ತಹಶೀಲ್ದಾರ್ ಸಾವಿತ್ರಿ ಸಲಗರ ಬಸವ ಗುರು ಪೂಜೆ ನಡೆಸಿಕೊಡುವರು ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆ.11ಕ್ಕೆ ಆರ್ಟ್ ಆಪ್ ಲಿವಿಂಗ್‌ನ ರವಿಶಂಕರ ಗುರೂಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ಕೇಂದ್ರ ಕಲ್ಲಿದ್ದಲು ಮತ್ತುಗಣಿ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡುವರು. ಡಾ| ಬಸವಲಿಂಗ ಪಟ್ಟದ್ದೇವರು ಆಶಯ ನುಡಿ ಹೇಳುವರು. ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಸಚಿವ ಜಗದೀಶ ಶೆಟ್ಟರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಂಎಲ್‌ಸಿ ಬಸವರಾಜ ಹೊರಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನೀಲ ರಗಟೆ ಗ್ರಂಥ ಲೋಕಾರ್ಪಣೆ ಮಾಡುವರು.
ಸಾಯಂಕಾಲ 6 ಕ್ಕೆ ಅನುಭವ ಮಂಟಪ: ಅಂದು-ಇಂದು ಮತ್ತು ಎಂದೆಂದೂ ಪ್ರಥಮ ಗೋಷ್ಠಿ ನಡೆಯಲಿದೆ. 29ರಂದು ಬೆ.11ಕ್ಕೆ ಕಲ್ಯಾಣ ರಾಜ್ಯ-ಶರಣ ಪರಿಕಲ್ಪನೆ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಸಾಯಂಕಾಲ 6ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಗದಗ ತೊಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಡಾ| ಗಂಗಾಂಬಿಕಾ ಅಕ್ಕ ಸಾನಿಧ್ಯ, ಸಿಎಂ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆ ವಹಿಸುವರು. ಉತ್ಸವದಲ್ಲಿ 5 ಕನ್ನಡ ಗ್ರಂಥ, 14 ಮರಾಠಿ ಮತ್ತು 1 ತೆಲಗು ಗ್ರಂಥಗಳು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರ ಮತ್ತು ಜಯರಾಜ ಖಂಡ್ರೆ ಸುದ್ದಿಗೋಷ್ಠಿದ್ದರು.
ಚುನಾವಣೆ ಮುನ್ನ “ಅನುಭವ ಮಂಟಪ’ಕ್ಕೆ ಶಂಕು : ಬಸವನುಯಾಯಿಗಳ ಕನಸಾಗಿರುವ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಉಪ ಚುನಾವಣೆ ಮೊದಲೇ ಸರ್ಕಾರದಿಂದ ಶಂಕು ಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಬಜೆಟ್‌ನಲ್ಲಿ 600 ಕೋಟಿ ರೂ. ಮೀಸಲಿಟ್ಟು, 100 ಕೋಟಿ ರೂ. ಬಿಡುಗಡೆ ಮಾಡಿದೆ. ಶಂಕು ಸ್ಥಾಪನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.