ನವದೆಹಲಿ: ಐದನೇ ಭಾರತ-ಯುಎಸ್ 2+2 ಸಚಿವರ ಸಂವಾದದಲ್ಲಿ ಭಾಗವಹಿಸಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಶುಕ್ರವಾರ ಬೆಳಗ್ಗೆ ದೆಹಲಿಗೆ ಆಗಮಿಸಿದರು.
ಶುಕ್ರವಾರ 2+2 ಸಂವಾದ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಗುರುವಾರ ದೆಹಲಿಗೆ ಆಗಮಿಸಿದ್ದು, ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸ್ವಾಗತಿಸಿದರು.
ಅಮೆರಿಕದ ಉನ್ನತ ರಾಜತಾಂತ್ರಿಕರನ್ನು ಸ್ವಾಗತಿಸಿದ ವಿದೇಶಾಂಗ ಸಚಿವಾಲಯ, “ಈ ಭೇಟಿಯು ಭಾರತ-ಯುಎಸ್ ಸಂಬಂಧಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ” ಎಂದು ಹೇಳಿದೆ.
ಈ ಕುರಿತು ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ‘ಭಾರತ ಹಾಗೂ ಅಮೆರಿಕ ನಡುವೆ ಸಚಿವರ 2+2 ಮಾತುಕತೆಗೆ ದೆಹಲಿಗೆ ಬಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಅವರಿಗೆ ಸ್ವಾಗತ’ ಎಂದು ಪೋಸ್ಟ್ ಮಾಡಿದ್ದಾರೆ.
2+2 ಸಂವಾದವು ವೇಗವಾಗಿ ವಿಸ್ತರಿಸುತ್ತಿರುವ ಭಾರತ-ಯುಎಸ್ ಕಾರ್ಯತಂತ್ರದ ಸಂಬಂಧಗಳ ಸಮಗ್ರ ವಿಮರ್ಶೆಯನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಜೊತೆಗೆ ರಕ್ಷಣೆ ಮತ್ತು ಭದ್ರತಾ ಸಹಕಾರ, ಇಂಡೋ-ಪೆಸಿಫಿಕ್ ಕಾರ್ಯತಂತ್ರಗಳು, ಜನರಿಂದ ಜನರ ನಡುವಿನ ಸಂಬಂಧಗಳು ಒಳಗೊಂಡಂತೆ ಹಲವಾರು ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ ಎಂದು ಹೇಳಿದ್ದಾರೆ.