Advertisement

Indian Navy ಈಗ ಅಂಜದೀಪ್‌ ಶಕ್ತಿ: ಚೆನ್ನೈಯ ಕಟ್ಟು ಪಲ್ಲಿಯಲ್ಲಿ ಲೋಕಾರ್ಪಣೆ

01:31 AM Jun 15, 2023 | Team Udayavani |

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈಯ ಕಟ್ಟುಪಲ್ಲಿ ಬಂದರಿನಲ್ಲಿ ಬುಧವಾರ ಜಲಾಂತರ್ಗಾಮಿ ನಿರೋಧಕ ನೌಕೆ “ಅಂಜದೀಪ್‌’ ಲೋಕಾರ್ಪಣೆಗೊಂಡಿದ್ದು, ಇದಕ್ಕೆ ಕರ್ನಾಟಕದ ಕಾರವಾರದಲ್ಲಿರುವ “ಅಂಜದೀಪ್‌’ ದ್ವೀಪದ ಹೆಸರನ್ನು ಇಡಲಾಗಿದೆ. ವ್ಯೂಹಾತ್ಮಕವಾಗಿ ಈ ದ್ವೀಪವು ಮಹತ್ತರವಾಗಿದ್ದು, ಪ್ರಸ್ತುತ ಈ ದ್ವೀಪವು ಭಾರತೀಯ ನೌಕಾ ಸೇನೆಯ ಸುಪರ್ದಿಯಲ್ಲಿದೆ. ಈ ನೌಕೆಯನ್ನು ಕೋಲ್ಕತಾದ ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ ಮತ್ತು ಎಂಜಿ ನಿಯರ್ (ಜಿಆರ್‌ಎಸ್‌ಇ) ನಿರ್ಮಿಸಿದೆ.

Advertisement

2019ರ ಎಪ್ರಿಲ್‌ನಲ್ಲಿ ಎಂಟು ನೌಕೆಗಳ ನಿರ್ಮಾಣಕ್ಕೆ ರಕ್ಷಣ ಸಚಿವಾಲಯ ಮತ್ತು ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ ಮತ್ತು ಎಂಜಿನಿಯರ್ ನಡುವೆ ಒಪ್ಪಂದವಾಗಿದೆ. ಈ ಪೈಕಿ “ಅಂಜದೀಪ್‌’ ಮೂರನೆಯದ್ದು.

ಜಲಾಂತರ್ಗಾಮಿ ನಿಗ್ರ ಹ ಕಾರ್ಯಾಚರಣೆಗೆ ಬಳಕೆ
ಪ್ರಸ್ತುತ ಇರುವ “ಅಭಯ್‌’ ವರ್ಗದ ಜಲಾಂತರ್ಗಾಮಿ ನಿರೋಧಕ ನೌಕೆಗಳ ಬದಲಿಯಾಗಿ ಜಿಆರ್‌ಎಸ್‌ಇ ನಿರ್ಮಿಸಿರುವ “ಅರ್ನಾಲ’ ವರ್ಗದ ನೌಕೆಗಳು ಕಾರ್ಯಾಚರಿಸಲಿವೆ. ಇದು ಕಡಲಿನಲ್ಲಿ ಜಲಾಂತರ್ಗಾಮಿ ನಿಗ್ರಹ ಕಾರ್ಯಾಚರಣೆ, ಕಡಿಮೆ ತೀವ್ರತೆಯ ಕಾರ್ಯಾಚರಣೆಗಳನ್ನು ನಡೆಸಲಿವೆ. ಜತೆಗೆ ಕಣ್ಗಾವಲಿಗೂ ಬಳಸಲಾಗುತ್ತದೆ. ಈ ನೌಕೆಗಳನ್ನು ಶೇ.80ರಷ್ಟು ದೇಶೀಯವಾಗಿ ನಿರ್ಮಿಸಲಾಗಿದೆ.

“ಅಂಜದೀಪ್‌’ ನೌಕೆಯ ಲೋಕಾರ್ಪಣೆ ಸಮಾರಂಭದಲ್ಲಿ ವೈಸ್‌ ಅಡ್ಮಿರಲ್‌, ಸ್ಟ್ರಾéಟಜಿಕ್‌ ಫೋರ್ಸಸ್‌ ಕಮಾಂಡ್‌ನ‌ ಕಮಾಂಡರ್‌ ಇನ್‌ ಚೀಫ್ ಆರ್‌.ಬಿ.ಪಂಡಿತ್‌ ಉಪಸ್ಥಿತರಿದ್ದರು.

ಐತಿಹಾಸಿಕ ಮಹತ್ವದ “ಅಂಜದೀಪ್‌’
“ಅಂಜದೀಪ್‌’ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರ್ಗಾ ಗ್ರಾಮದ ಸಮೀಪ ಅರಬಿ ಸಮುದ್ರದಲ್ಲಿರುವ ಒಂದು ದ್ವೀಪ. 15ನೇ ಶತಮಾನದ ಅಂತ್ಯದಲ್ಲಿ ಇಲ್ಲಿಗೆ ಪೋರ್ಚುಗೀಸ್‌ ಅನ್ವೇಷಕ ವಾಸ್ಕೋಡಗಾಮ ಕಾಲಿಟ್ಟು, ಕೆಲವು ದಿನ ನೆಲೆಸಿ ಬಳಿಕ ಗೋವಾಕ್ಕೆ ತೆರಳಿದ್ದ. ಇದು ಬಳಿಕ ಪೋರ್ಚುಗೀಸರ ನೆಲೆಯಾಗಿತ್ತು. ಭಾರತೀಯ ನೌಕಾಪಡೆಯು ಪೋರ್ಚುಗೀಸರ ವಿರುದ್ಧ ಯುದ್ಧ ಮಾಡಿ ಈ “ಅಂಜದೀಪ್‌’ ದ್ವೀಪವನ್ನು ವಶಕ್ಕೆ ತೆಗೆದುಕೊಂಡಿತು. ಈ ವೇಳೆ ನೌಕಾ ಸೇನೆಯ 8 ಯೋಧರು ಹುತಾತ್ಮರಾಗಿದ್ದರು. ಹುತಾತ್ಮರ ಹೆಸರಿರುವ ಶಿಲೆಯನ್ನು ಈ ದ್ವೀಪದಲ್ಲಿ ಸ್ಥಾಪಿಸಲಾಗಿದೆ.

Advertisement

ನೌಕಾ ಸೇನೆಯ ನೆಲೆಯಾಗುವ ಮುನ್ನ ಮೀನುಗಾರರು “ಅಂಜದೀಪ್‌’ ಸುತ್ತಮುತ್ತ ಮೀನುಗಾರಿಕೆ ನಡೆಸಿ, ಈ ದ್ವೀಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇಲ್ಲಿ ಚರ್ಚ್‌ ಕೂಡ ಇದ್ದು, ವರ್ಷಕ್ಕೊಮ್ಮೆ ಪೆಸ್ತ(ಕ್ರಿಸ್ತನ ಪ್ರಾರ್ಥನೆ)ಯೂ ನಡೆಯುತ್ತಿತ್ತು. 1998-99ರ ಅವಧಿಯಲ್ಲಿ ಈ ದ್ವೀಪದಲ್ಲಿ ಕೊನೆಯ ಪೆಸ್ತ ಜಾತ್ರೆ ನಡೆಯಿತು. ಅಲ್ಲದೆ ಇದೊಂದು ಪ್ರವಾಸಿ ತಾಣವೂ ಆಗಿತ್ತು. ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವುದರಿಂದ ಬಳಿಕ ಈ ದ್ವೀಪವನ್ನು ಭಾರತೀಯ ನೌಕಾ ಸೇನೆ ತನ್ನ ವಶಕ್ಕೆ ಪಡೆಯಿತು. ಇದು ಈಗ ನಿರ್ಬಂಧಿತ ಪ್ರದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next