Advertisement

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

06:30 PM Jun 24, 2024 | Team Udayavani |

ವಿಜಯಪುರ : ಲೋಕಸಭೆ ಚುನಾವಣೆಯಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕುರಿತು ಹೈಕಮಾಂಡ್ ಗಮನಕ್ಕೆ ಬಂದಿದೆ. ಹೈಕಮಾಂಡ್ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಯಾವ ಯಾವ ಕ್ಷೇತ್ರದಲ್ಲಿ ಏನೇನಾಗಿದೆ, ಪಕ್ಷ ವಿರೋಧಿ ಚಟುವಟಿಕೆ ಎಲ್ಲಿ ನಡೆದಿದೆ ಎಂಬುದರ ಕುರಿತು ಹೈಕಮಾಂಡ್ ಗೆ ಮಾಹಿತಿ ರವಾನೆಯಾಗಿದೆ ಸೋಲಿನ ಕುರಿತು ಹಲವು ಕ್ಷೇತ್ರಗಳಿಂದಲೂ ದೂರು ಕೇಳಿ ಬಂದಿದ್ದು, ಸತ್ಯ ಸೋಧನಾ ಸಮಿತಿ ರಚಿಸಬೇಕು. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ ಎಂದರು.

ದಾವಣಗೆರೆ ಕ್ಷೇತ್ರದ ಸೋಲಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರಣ ಎಂದು ಹರಿಹರದ ಶಾಸಕರಾಗಿರುವ ಹರೀಶ ಮಾಡಿರುವುದು ಗಂಭೀರ ಆರೋಪ. ಪಕ್ಷದ ಓರ್ವ ಶಾಸಕರೇ ಆರೋಪ ಮಾಡುತ್ತಾರೆ ಎಂದರೆ ಸಾಮಾನ್ಯವಾಗಿ ಪರಿಗಣಿಸುವಂತಿಲ್ಲ ಎಂದರು.

ಯಾವ ಅಭ್ಯರ್ಥಿ ತೊಂದರೆ ಅನುಭವಿಸಿದ್ದಾರೆ ಎಂಬುದರ ಕುರಿತು ಸ್ವಯಂ ಅಭ್ಯರ್ಥಿಗಳೇ ಮಾಹಿತಿ ನೀಡಿದ್ದಾರೆ. ಎಲ್ಲೆಲ್ಲಿ ಸಂಪನ್ಮೂಲ ಹಾಗೂ ಇತರೆ ಸೌಲಭ್ಯಗಳ ಕೊರತೆ ಆಗಿದೆ ಎಂಬುದರ ಕುರಿತು ಸ್ಪರ್ಧಿಗಳೇ ಮಾಹಿತಿ ನೀಡಿದ್ದಾರೆ ಎಂದರು.

ತುಮಕೂರು ಕ್ಷೇತ್ರದಲ್ಲಿ ಸೋಮಣ್ಣ ಅವರನ್ನ ಸೋಲಿಸಲು ಬಿಜೆಪಿ ಮೂಲದಿಂದಲೇ ಅಪಾರ ಪ್ರಮಾಣದ ಹಣ ಹೋಗಿರುವ ಆರೋಪವಿದೆ. ಬೀದರ್ ನಲ್ಲಿ ಭಗವಂತ ಖೂಬಾ, ಕಲಬುರಗಿಯಲ್ಲಿ ಉಮೇಶ ಜಾಧವ್ ಇದೇ ರೀತಿಯ ಆರೋಪ ಮಾಡಿದ್ದಾರೆ, ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಪರಿಸ್ಥಿತಿಯೂ ಇದೇ ಎಂದಿದ್ದಾರೆ. ಹೀಗಾಗಿ ಸತ್ಯ ಶೋಧನಾ ಸಮಿತಿ ರಚನೆಯಾಗಲಿ ಎಂದು ಆಗ್ರಹಿಸಿದರು.

Advertisement

ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಮಾತ್ರವಲ್ಲ, ಪರಾಜಿತರು ಸಹ ಪಕ್ಷ ವಿರೋಧಿ ಚಟುವಟಿಕೆ ಕುರಿತು ದೂರಿದ್ದಾರೆ. ಹಾಗಂತ ಎಲ್ಲ ಕಡೆಗಳಲ್ಲೂ ಪಕ್ಷ ವಿರೋಧಿ ಚಟುವಟಿಕೆಯೇ ಕಾರಣವಲ್ಲ. ಕೆಲವು ಸಂಸದರು ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳದಿರುವುದು, ಕ್ಷೇತ್ರದ ಜನರ ಸಂಪರ್ಕ ಕಳೆಕೊಂಡುದು ಕೂಡ ಅವರ ಸೋಲಿಗೆ ಕಾರಣವಾಗಿದೆ. ಇಂಥಲ್ಲೆಲ್ಲ ಮೋದಿ ಅಥವಾ ಬಿಜೆಪಿ ಪಕ್ಷದ್ದೇನೂ ತಪ್ಪಿಲ್ಲ ಎಂದು ವಿಶ್ಲೇಷಿಸಿದರು.

ನನಗೂ ವೈರುಧ್ಯವಿತ್ತು
ವಿರೋಧಿ ಅಲೆ ಇದ್ದ ಕ್ಷೇತ್ರಗಳಲ್ಲಿ ಬೇರೆಯವರಿಗೆ ಬಿಟ್ಟು ಕೊಡಬೇಕಿತ್ತು. ವಿಜಯಪುರ ಕ್ಷೇತ್ರದಲ್ಲಿ ಹಾಲಿ ಸಂಸದ ರಮೇಶ ಜಿಗಜಿಣಗಿ ಮಧ್ಯೆ ನನಗೂ ರಾಜಕೀಯ ವೈರುಧ್ಯವಿತ್ತು. ಒಂದು ಕ್ಷೇತ್ರ ಕಳೆದುಕೊಂಡರೇ ಮೋದಿ ಅವರನ್ನೇ ಕಳೆದುಕೊಂಡಂತೆ ಎಂಬ ಕಾರಣಕ್ಕೆ ಪಕ್ಷ ಹಾಗೂ ದೇಶದ ವಿಚಾರ ಬಂದ ಕಾರಣ ಒಂದಾಗಿ ಕೆಲಸ ಮಾಡಿದ್ದೇವೆ ಎಂದರು.

ಭವಿಷ್ಯದಲ್ಲಿ ಇಂಥ ಕಾರಣಗಳಿಂದ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದ ಅವರು, ಖಚಿತವಾಗಿ ಬದಲಾವಣೆ ಆಗಲಿದ್ದು, ಎಲ್ಲವೂ ಸ್ವಚ್ಛವಾಗಲಿದೆ ಎಂದರು.

ಹಿಂದಿನ ಸರ್ಕಾರದ ಸಂದರ್ಭದಲ್ಲಿ ನಮ್ಮ ಪಕ್ಷಕ್ಕೆ ಭಾರಿ ಬಹುಮತ ಇತ್ತು. ಕಾಶ್ಮೀರದಲ್ಲಿನ ಸಂವಿಧಾನ 370ನೇ ಕಲಂ ತೆಗೆದೆ ಹಾಕಿದೆವು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಯ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತವಾಗಿ ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದರೂ ಪೂರ್ಣ ಬಹುಮತ ಇಲ್ಲ. 400 ಸ್ಥಾನ ಗೆಲ್ಲುವ ನಿರೀಕ್ಷೆ ಹುಸಿಯಾಗಿದ್ದು, ಇದೀಗ ಎನ್‍ಡಿಎ ಸರ್ಕಾರ ಅಸ್ತಿತ್ವದಲ್ಲಿದೆ. ಮಿತ್ರಪಕ್ಷಗಳೊಂದಿಗೆ ಚರ್ಚಿಸಿ, ಒಪ್ಪಿಗೆ ಪಡೆದ ಮೇಲೆಯೇ ನಿರ್ಣಯ ಕೈಗೊಳ್ಳಬೇಕಿರುವ ಅನಿವಾರ್ಯತೆ ಎದುರಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next