ಬೆಂಗಳೂರು: ರಾಜ್ಯ ಸರ್ಕಾರದಿಂದ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ಬಗ್ಗೆ ಸಂವಾದ ಒಂದರಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಣಿತರ ಜತೆ ಸಂವಾದ ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳಸಿದ್ದಪ್ಪ, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉತ್ತಮ ಮೂಲ ಸೌಕರ್ಯ ಕಲ್ಪಿಸಿದರೆ ಯಾರೂ ಖಾಸಗಿ ಶಾಲೆಗಳಿಗೆ ಹೋಗುವುದಿಲ್ಲ.
ಇಂಗ್ಲಿಷ್ ಕಲಿಯುವ ಸಲುವಾಗಿಯೇ ಯಾರೂ ಖಾಸಗಿ ಶಾಲೆಗೆ ಸೇರುತ್ತಿಲ್ಲ. ದಕ್ಷಿಣ ಕನ್ನಡ ಸೇರಿ ಕರಾವಳಿ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಅತ್ಯುತ್ತಮವಾಗಿ ನಡೆಯುತ್ತಿದ್ದು, ಖಾಸಗಿ ಶಾಲೆಗಳಿಂದ ಬಿಡಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ ಎಂದು ಹೇಳಿದರು. ಸಾಹಿತಿ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕನ್ನಡ ಕಲಿಕೆಯ ಜತೆಗೆ ಇಂಗ್ಲಿಷ್ ಕಲಿಕೆ ಇದೀಗ ಮುಖ್ಯವಾಗಿದೆ.
ನಮ್ಮ ಗ್ರಾಮದ ಶಾಲೆಯನ್ನು ನಾನು ದತ್ತು ತೆಗೆದುಕೊಂಡಾಂಗ 200 ವಿದ್ಯಾರ್ಥಿಗಳಿದ್ದರು. ಈಗ ಆ ಸಂಖ್ಯೆ 14 ವಿದ್ಯಾರ್ಥಿಗಳಿಗೆ ಇಳಿದಿದೆ. ಈ ಬಾರಿ 7 ವಿದ್ಯಾರ್ಥಿಗಳು ಏಳನೇ ತರಗತಿ ಪಾಸಾದರೆ ಶಾಲೆ ಮುಚ್ಚಬೇಕಾಗುತ್ತದೆ ಎಂದು ಹೇಳುವ ಮೂಲಕ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವ ಸರ್ಕಾರದ ನಿರ್ಧಾರವನ್ನು ಪರೋಕ್ಷವಾಗಿ ಬೆಂಬಲಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕನ್ನಡ ಉಳಿಯಬೇಕು ಎಂದು ಹೇಳುವವರಲ್ಲಿ ನಾನೇ ಮೊದಲಿಗ.
ಸರ್ಕಾರಿ ಶಾಲೆ, ಕಾಲೇಜು ಕಟ್ಟಡಗಳ ನಿರ್ಮಾಣ, ಮೂಲ ಸೌಕರ್ಯ ಅಭಿವೃದ್ಧಿಗಾಗಿಯೇ ಬಜೆಟ್‌ನಲ್ಲಿ 1200 ಕೋಟಿ ರೂ. ಮೀಸಲಿಟ್ಟಿದ್ದೇನೆ. ಆದರೆ, ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಗ್ರಾಮೀಣ ಹಾಗೂ ನಗರದ ಬಡ ಮಕ್ಕಳು ಹಿಂದೆ ಉಳಿಯಬಾರದು ಎಂಬ ಉದ್ದೇಶ ನನ್ನದು ಎಂದು ಹೇಳಿದರು. ಕನ್ನಡ ಮಾಧ್ಯಮವೂ ಇರಲಿದೆ. ಜತೆಗೆ ಆಂಗ್ಲ ಮಾಧ್ಯಮವೂ ಬರಲಿದೆ. ಯಾವ ಮಾಧ್ಯಮಕ್ಕೆ ಸೇರಿಸಬೇಕು ಎಂಬುದು ಪೋಷಕರ ಆಯ್ಕೆ. ಆ ವಿಚಾರದಲ್ಲಿ ಯಾವುದೇ ಬಲವಂತ ಇರುವುದಿಲ್ಲ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಕೃಷ್ಣಾ ಸದಾ ಮುಕ್ತ: ವಿಧಾನಸೌಧ ಹಾಗೂ ನಮ್ಮ ಗೃಹ ಕಚೇರಿ ಕೃಷ್ಣಾ ಸದಾ ತೆರೆದಿರುತ್ತದೆ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಯಾರು ಬೇಕಾದರೂ ಅಲ್ಲಿಗೆ ಬಂದು ನನ್ನನ್ನು ಭೇಟಿ ಮಾಡಬಹುದು. ಸಲಹೆ-ಸೂಚನೆ ನೀಡಬಹುದು. ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲೂ ಸಮ್ಮಿಶ್ರ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಫೆರಿಫೆರಲ್ ರಿಂಗ್ ರಸ್ತೆ, ಎಲಿವೇಟೆಡ್ ಕಾರಿಡಾರ್, ಸಬ್‌ಅರ್ಬನ್ ರೈಲು, ಮೆಟ್ರೋ ಮುಂದುವರಿದ ಹಂತ ಹೀಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿಗಳಾದ ಶಂಕರಲಿಂಗೇಗೌಡ, ಎಂ.ಆರ್.ಶ್ರೀನಿವಾಸಮೂರ್ತಿ, ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಭಗವಾನ್, ಎಫ್ಕೆಸಿಸಿಐನ ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಪಿ.ಸಿ.ರಾವ್, ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವಾ, ಕ್ರೀಡಾಪಟು ಇರ್ಫಾನ್ ಸೇಠ್ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಪತ್ರಕರ್ತ ರವೀಂದ್ರರೇಷ್ಮೆ ಸಂವಾದ ನಡೆಸಿಕೊಟ್ಟರು.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನವಾದರೂ ಯೋಜನಾ ಮಂಡಳಿಗೆ ಉಪಾಧ್ಯಕ್ಷರನ್ನು ನೇಮಿಸಿಲ್ಲ. ಉನ್ನತ ಶಿಕ್ಷಣಕ್ಕೆ ವೆಚ್ಚ ಮಾಡುತ್ತಿರುವ ಹಣದ ಬಳಕೆ ಮೇಲೆ ನಿಗಾ ವಹಿಸಬೇಕು. ಗುಣಮಟ್ಟದ ಶಿಕ್ಷಣ ಕಲ್ಪಿಸುವತ್ತ ಗಮನಹರಿಸಬೇಕು.
-ಡಾ.ಚಂದ್ರ ಪೂಜಾರಿ, ಆರ್ಥಿಕ ತಜ್ಞ