ಓಸ್ಲೊ: ಅಣ್ವಸ್ತ್ರಗಳ ವಿರುದ್ಧ ಹೋರಾಟ ನಡೆಸುತ್ತಿರುವ ಜಿನೇವಾ ಮೂಲದ ‘ಪರಮಾಣು ಶಸ್ತ್ರಾಸ್ತ್ರ ನಿಗ್ರಹ ಅಂತಾರಾಷ್ಟ್ರೀಯ ಅಭಿಯಾನ’ (ಐಸಿಎಎನ್) ಸಂಸ್ಥೆಯ ಸಾಮಾಜಿಕ ಕಾಳಜಿ ಗುರುತಿಸಿ ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಪ್ರತಿಷ್ಠಿತ ಪ್ರಶಸ್ತಿ 7.2 ಕೋಟಿ ಬಹುಮಾನ ಮೊತ್ತ ಹೊಂದಿದೆ.
ಅಣ್ವಸ್ತ್ರಗಳ ನಿರ್ಮೂಲನೆ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಪರಿಣಾಮಕಾರಿ ಅಭಿಯಾನ ನಡೆಸಿ, ಈಗಾಗಲೇ ಅಣ್ವಸ್ತ್ರಗಳನ್ನು ಹೊಂದಿರುವ ವಿಶ್ವದ ಅನೇಕ ರಾಷ್ಟ್ರಗಳ ಮನವೊಲಿಸುವಲ್ಲಿ ಐಕ್ಯಾನ್ ಮಹತ್ವದ ಪಾತ್ರ ವಹಿಸಿದೆ. ಈಗಾಗಲೇ ಅನೇಕ ರಾಷ್ಟ್ರಗಳೂ ಇದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನು ಪರಿಗಣಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶುಕ್ರವಾರ ನಾರ್ವೆಯ ನೊಬೆಲ್ ಸಮಿತಿ ಮುಖ್ಯಸ್ಥೆ ಬೆರಿಟ್ ರಿಯೀಸ್ ಆ್ಯಂಡರ್‌ಸೆನ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಪ್ರಸ್ತುತ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಮೂಲಕ ಅಮೆರಿಕವನ್ನು ನಿಯಂತ್ರಿಸುವ ಬೆದರಿಕೆ ಹಾಕುತ್ತಿರುವ ಉತ್ತರ ಕೊರಿಯಾ ಬಗ್ಗೆ ಪ್ರತಿಕ್ರಿಯಿಸಿರುವ ನೊಬೆಲ್ ಸಮಿತಿ ಮುಖ್ಯಸ್ಥೆ, “ನಾವು ಉತ್ತರ ಕೊರಿಯಾ ಹಾಗೂ ಅಮೆರಿಕದ ಜತೆ ಹೇಳುವುದಿಷ್ಟೆ. ಉಭಯ ರಾಷ್ಟ್ರಗಳು ಸಂಧಾನ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಈ ಪ್ರಶಸ್ತಿ ಮುಖೇನವೇ ಸಲಹೆ ನೀಡುತ್ತೇವೆ. ಅಣ್ವಸ್ತ್ರ ಹೊಂದಿರುವ ಉತ್ತರ ಕೊರಿಯಾ, ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್, ಲಂಡನ್, ಇಸ್ರೇಲ್‌ಗಳಿಗೆ ಪ್ರಶಸ್ತಿ ಮೂ ಲಕವೇ ನೇರ ಸಂದೇಶ ನೀಡಿದ್ದೇವೆ. ಭಾರತ ಮತ್ತು ಪಾಕಿಸ್ಥಾನ ನಾಗರಿಕ ಹತ್ಯೆಗೆ ಮುಂದಾಗುವುದನ್ನು ಒಪ್ಪಿಕೊಳ್ಳಲಿಕ್ಕಿಲ್ಲ’ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಕ್ಯಾನ್ ಸಿಇಒ ಬೀಟ್ರಿಸ್ ಫಿನ್, “ಅಣ್ವಸ್ತ್ರಗಳನ್ನು ಹೊಂದಿರುವ ಎಲ್ಲಾ ದೇಶಗಳಿಗೆ ಈ ಪ್ರಶಸ್ತಿ ಪರಿಣಾಮಕಾರಿ ಸಂದೇಶ ರವಾನಿಸಿದೆ. ಭದ್ರತೆ ದೃಷ್ಟಿಯಿಂದ ಅಣ್ವಸ್ತ್ರ ಹೊಂದಿರುವ ಬೆಳವಣಿಗೆ ಒಳ್ಳೆಯದಲ್ಲ. ಅದನ್ನು ಒಪ್ಪಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ಕ್ಷಮಾಪಣೆಯೂ ಇಲ್ಲ. ಭದ್ರತೆ ಹೆಸರಲ್ಲಿ ಸಹಸ್ರಾರು ನಾಗರಿಕ ಹತ್ಯೆಗೂ ಕಾರಣವಾಗಬಾರದು. ಹಾಗಾಗಿ ಭದ್ರತೆಗಾಗಿ ಅಣ್ವಸ್ತ್ರ ಹೊಂದುವುದು ಸೂಕ್ತವಲ್ಲ” ಎಂದಿದ್ದಾರೆ.