Advertisement

ಕೇಂದ್ರ ಸರ್ಕಾರದಿಂದ ಕಾರ್ಮಿಕ ವಿರೋಧಿ ಧೋರಣೆ

09:43 PM Jul 13, 2019 | Lakshmi GovindaRaj |

ಹಾಸನ: ಸ್ವಾತಂತ್ರ್ಯ ಪೂರ್ವ ಹಾಗೂ ಆನಂತರವೂ ದೇಶದಲ್ಲಿದ್ದ ಕಾರ್ಮಿಕರ ಪರವಾದ ಕಾನೂನುಗಳನ್ನು ರದ್ದುಗೊಳಿಸಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರಯತ್ನಿಸುತ್ತಿದ್ದು, ಕಾರ್ಪೊರೆಟ್‌ ಕಂಪನಿಗಳಿಗೆ ತೆರಿಗೆ ವಿನಾಯಿತಿ, ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ನೀಡುವ ಮೂಲಕ ದೇಶದ ದುಡಿಯುವ ಜನರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ.ಕೆ ನಾಯರ್‌ ಅವರು ಆರೋಪಿಸಿದರು.

Advertisement

ವಿಚಾರ ಸಂಕಿರಣ: ಹಾಸನದಲ್ಲಿ ಆ. 7,8,9,10 ರಂದು ನಾಲ್ಕು ದಿನಗಳ ಕಾಲ ನಡೆಯಲಿರುವ ಸಿಐಟಿಯುನ ಅಖೀಲ ಭಾರತ ಜನರಲ್‌ ಕೌನ್ಸಿಲ್‌ ಸಭೆಯ ಪೂರ್ವಭಾವಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಕಾರ್ಮಿಕ ಕಾನೂನುಗಳ ಬದಲಾವಣೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ ಪೂರ್ವದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲು 1919ರಲ್ಲಿ ಐಎಲ್‌ಒ ಸ್ಥಾಪನೆ ಮಾಡಲಾಯಿತು. ಆ ಮುಖಾಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರಿಗೆ ಹಕ್ಕುಗಳನ್ನು ನೀಡಲು ತೀರ್ಮಾನ ಮಾಡಲಾಯಿತು. ಈ ವಿಚಾರದಲ್ಲಿ ಹೆಚ್ಚು ಶ್ರಮ ಹಾಕಿದವರಲ್ಲಿ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಕಾರ್ಮಿಕ ಆಯೋಗ ರಚನೆ: 1930ರಲ್ಲಿ ಲೇಬರ್‌ ಕಮಿಷನ್‌ ಸ್ಥಾಪನೆಯಾಯಿತು. ಈ ಆಯೋಗವು ಕಾರ್ಮಿಕರ ಸಮಸ್ಯೆ, ಹಕ್ಕುಗಳು, ಕೂಲಿ, ಭತ್ಯೆ ಇವುಗಳನ್ನು ಕುರಿತ ವಸ್ತುನಿಷ್ಟ ಅಧ್ಯನ ನಡೆಸಿ ವರದಿ ನೀಡುವಂತೆ ಕೇಳಿತು. ನಂತರದಲ್ಲಿ ವರದಿಯ ಆಧಾರದ ಮೇಲೆ 1931ರಲ್ಲಿ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಜಾರಿಗೆ ತರಲಾಯಿತು. ಲಿಂಗ್‌ ವೇಜಸ್‌, ಫೇರೆಜ್‌, ಮಿನಿಮಮ್‌ ವೇಜಸ್‌, ಕಾನೂನುಗಳನ್ನು ಜಾರಿಗೆ ತರಲಾಯಿತು. ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದಿಂದಾಗಿ ಈ ಕಾನೂನುಗಳನ್ನು ಜಾರಿಗೆ ಬಂದವು ಎಂದು ವಿವರಿಸಿದರು.

ಕಾರ್ಮಿಕ ವಿರೋಧಿ ನೀತಿ: ಸ್ವಾತಂತ್ರಾ ನಂತರ 1965ರಲ್ಲಿ ಬೋನಸ್‌ ಆಕ್ಟ್ ಜಾರಿಯಾಯಿತು. 1971 ರಲ್ಲಿ ರವೀಂದ್ರ ವರ್ಮ ಸಮಿತಿಯ ಶಿಫಾರಸಿನಂತೆ 4 ಕೋಡ್‌ಗಳನ್ನು ಜಾರಿಗೆ ತಂದಿತು ಅದರಲ್ಲಿ ಪ್ರಮುಖವಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಬಹಳ ಪ್ರಮುಖವಾದದ್ದು ಎಂದ ಅವರು, ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಹಲವು ಮಹತ್ವದ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿ ಕಾರ್ಮಿಕ ಪರವಾದ ಕಾಯ್ದೆಗಳನ್ನು ಜಾರಿಗೊಳಿಸುವ ದಿಟ್ಟ ಪ್ರಯತ್ನ ಮಾಡಿದ್ದರು. ಆದರೆ ಇತ್ತೀಚಿನ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ದೂರಿದರು.

Advertisement

ಅಖೀಲ ಭಾರತ ವಿಮಾ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಸುರೇಶ್‌ ಮಾತನಾಡಿ, 1951ರ ಕೈಗಾರಿಕಾ ನೀತಿ ಜಾರಿಯಾದ ಮೇಲೆ ಸುಮಾರು 17 ಕ್ಷೇತ್ರಗಳನ್ನು ಸಾರ್ವಜನಿಕ ಕ್ಷೇತ್ರಗಳೆಂದು ಗುರುತಿಸಲಾಗಿತ್ತು. ಈ ಕ್ಷೇತ್ರಗಳು ಸಾರ್ವಜನಿಕರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದವು ಆದರೆ 1991ರಲ್ಲಿ ಕಾಂಗ್ರೆಸ್‌ ಪಕ್ಷವು ಕೈಗಾರಿಕಾ ನೀತಿಗಳನ್ನು ಪುನಃ ವಿಮರ್ಶಿಸಿ ತಿದ್ದುಪಡಿ ಮಾಡಲು ನಿರ್ಧರಿಸಿತು. ಇದಾದ ಬಳಿಕ ಕೇವಲ 3 ಸಾರ್ವಜನಿಕ ಕ್ಷೇತ್ರಗಳು ಮಾತ್ರ ಉಳಿದುಕೊಂಡವು. ಇನ್ನುಳಿದ ಕ್ಷೇತ್ರಗಳು ಖಾಸಗೀಕರಣಕ್ಕ ಬಲಿಯಾದವು ಎಂದರು.

ಹೊಸ ಕೈಗಾರಿಕಾ ನೀತಿ ಮಾರಕ: ದೇಶದಲ್ಲಿರುವ ನೂರು ಜನ ಶ್ರೀಮಂತರ ಆಸ್ತಿ ದುಪ್ಪಟ್ಟಾಗಲು ಹೊಸ ಕೈಗಾರಿಕಾ ನೀತಿಗಳೇ ಕಾರಣವಾಗಿವೆ. ಜೊತೆಗೆ ದೇಶಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ನೀಡಲಾಗಿದೆ. ಪ್ರಸ್ತುತ ನರೇಂದ್ರ ಮೋದಿ ಸರ್ಕಾರವು ಖಾಸಗೀ ಕಂಪನಿಗಳಿಗೆ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಅತ್ಯುತ್ತಮ ಟೆಲಿಫೋನ್‌ ಸಂಸ್ಥೆಯಾಗಿದ್ದ ಬಿಎಸ್ಸೆನ್ನೆಲ್‌ನ್ನು ಇಂದು ಮುಚ್ಚುವ ಹಂತಕ್ಕೆ ಕೇಂದ್ರ ಸರ್ಕಾತ ತಂದು ನಿಲ್ಲಿಸಿದೆ. ಸುಮಾರು 45 ಸಾವಿರ ನೌಕರರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಖಾಸಗೀ ಕಂಪನಿಗಳಿಗೆ ಉತ್ತೇಜನ ಕೊಡುತ್ತಿರುವ ಕೇಂದ್ರ ಸರ್ಕಾರವೀಗ ರೈಲ್ವೆ ಸೇವೆಯನ್ನೂ ಖಾಸಗೀಕರಣ ಮಾಡಲು ಹೊರಟಿದೆ. ಆ ಮೂಲಕ ದೇಶದ ಸಾರ್ವಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ. ಖಾಸಗೀ ಒಡೆತನದ ಕಂಪನಿಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿವೆ. ಆದರೆ ಕಾರ್ಮಿಕರ ವೇತನ ಮಾತ್ರ ಜಾಸ್ತಿಯಾಗಲಿಲ್ಲ.

ಕೆಲಸದ ಭದ್ರತೆ ಇಲ್ಲವಾಗಿದೆ ಇದಕ್ಕೆಲ್ಲಾ ಮುಖ್ಯ ಕಾರಣ ಆಳುವ ಪಕ್ಷಗಳ ಉದಾರೀಕರಣ ಖಾಸಗೀಕರಣ ನೀತಿ ಎಂದು ಹೇಳಿದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಸನದಲ್ಲಿ ಆ.7ರಿಂದ 10ರವರೆಗೆ ನಡೆಯುತ್ತಿರುವ ಸಿಐಟಿಯುನ ಅಖೀಲ ಭಾರತ ಜನರಲ್‌ ಕೌನ್ಸಿಲ್‌ ಸಭೆಯು ಮಹತ್ವದ್ದಾಗಿದ್ದು, ಕಾರ್ಮಿಕ ವಲಯವನ್ನು, ಕೈಗಾರಿಕಾ ವಲಯವನ್ನು ರಕ್ಷಿಸುವ ಪ್ರಯತ್ನವನ್ನುಯಶಸ್ವಿಗೊಳಿಸಬೇಕಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಎನ್‌ಪಿಎಸ್‌ ನೌಕರರ ಮುಖಂಡ ವೇಣುಗೋಪಾಲ್‌, ಕೆಎಸ್‌ಆರ್‌ಟಿಸಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌ ಮಂಜುನಾಥ್‌, ಬ್ಯಾಂಕ್‌ ನೌಕರರ ಸಂಘದ ಪರಮಶಿವಯ್ಯ, ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ವಿ.ಸುಕುಮಾರ್‌ ಉಪಸ್ಥಿತರಿದ್ದರು. ಅಖೀಲ ಭಾರತ ವಿಮಾ ನೌಕರರ ಸಂಘದ ವಿಜಯ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು, ಸರ್ಕಾರಿ ನೌಕರರ ಒಕ್ಕೂಟದ ಮುಖಂಡ ಡಿ.ಟಿ ಶಿವಣ್ಣ ಅವರು ಕಾರ್ಯಕ್ರಮ ನಿರೂಪಿಸಿದರು, ಮಂಜುನಾಥ್‌ ಸ್ವಾಗತಿಸಿದರು, ವಿಜಯಪ್ರಕಾಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next