ಕತಾರ್‌ನಲ್ಲಿ ವಿಶ್ವಕಪ್ ಕಾವೇರಿಸಿಕೊಂಡಿದೆ. ಮತ್ತೊಂದು ಕಡೆ ಪರವಿರೋಧ ಪ್ರತಿಭಟನೆಗಳೂ ಕಾವೇರಿಸಿಕೊಂಡಿವೆ.
ಪಕ್ಕಾ ಮುಸ್ಲಿಂ ಸಂಪ್ರದಾಯಸ್ಥ ದೇಶವಾದ ಕತಾರ್‌ನಲ್ಲಿ, ಸಲಿಂಗಿಗಳ ಪರವೂ ಗಲಾಟೆಯಾಗುತ್ತಿದೆ.
ಮತ್ತೊಂದು ಕಡೆ ಮಹಿಳಾ ಹಕ್ಕುಗಳನ್ನು ಬೆಂಬಲಿಸಿ ಇರಾನ್ ಪ್ರಜೆಗಳು ಘೋಷಣೆ ಕೂಗುತ್ತಿದ್ದಾರೆ. ಹಾಗೆಯೇ ತಮ್ಮ ಟೀಶರ್ಟ್‌ಗಳಲ್ಲಿ ಮಹಿಳೆಯರು, ಜೀವನ, ಸ್ವಾತಂತ್ರ್ಯ ಎಂಬ ಬರೆಹವನ್ನು ಹಾಕಿಕೊಂಡಿದ್ದಾರೆ. ಇದನ್ನು ವಿರೋಧಿಸಿ ಇರಾನ್ ಸರಕಾರದ ಪರ ಒಂದಷ್ಟು ಮಂದಿ ಉಗ್ರವಾಗಿಯೇ ಹೋರಾಡುತ್ತಿದ್ದಾರೆ.
ಘೋಷಣೆ ಕೂಗುತ್ತಿದ್ದ ಕೆಲ ಮಹಿಳೆಯರು ನಿಜಕ್ಕೂ ಹೆದರಿ ಹೋಗಿದ್ದರು. ಅವರನ್ನು ಸರಕಾರಿ ಪರ ಕೆಲವರು ಸುತ್ತುವರಿದು, ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ರೀತಿಯೇ ಹಾಗಿತ್ತು. ಇನ್ನು ಕೆಲವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾಗ ಕೆಲ ಪುರುಷರು ಇಸ್ಲಾಮಿಕ್ ಗಣರಾಜ್ಯವನ್ನು ಬೆಂಬಲಿಸಿ ಘೋಷಣೆ ಹಾಕಿದರು.
ಸೆಪ್ಟೆಂಬರ್‌ನಲ್ಲಿ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಮಹಿಳೆಯೊಬ್ಬರನ್ನು ಹಿಜಾಬ್ ಧರಿಸಲಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ಜೈಲಿನಲ್ಲಿ ಪೊಲೀಸರ ಹೊಡೆತದಿಂದ ಆಕೆ ಮೃತಪಟ್ಟಿದ್ದರು. ಅದಾದ ಅನಂತರ ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ಜೋರಾದ ಪ್ರತಿಭಟನೆ ನಡೆಯುತ್ತಿದೆ. ಸ್ವತಃ ಇರಾನ್ ಆಟಗಾರರು ತಮ್ಮ ಮೊದಲ ಪಂದ್ಯದಲ್ಲಿ ರಾಷ್ಟ್ರಗೀತೆಗೆ ದನಿಗೂಡಿಸಲು ನಿರಾಕರಿಸಿದ್ದರು. ಅವರು ನಾಗರಿಕ ಹಕ್ಕುಗಳ ದಮನವನ್ನು ನೇರವಾಗಿ ವಿರೋಧಿಸಿದ್ದಾರೆ.