Advertisement

ಕೋಟ್ಯಂತರ ರೂ. ಆಸ್ತಿ ಬಯಲು​​​​​​​

06:55 AM Oct 07, 2018 | |

ಬೆಂಗಳೂರು: ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಮತ್ತು ಬಿಡಿಎ ಎಂಜಿನಿಯರ್‌ ಎನ್‌.ಜಿ.ಗೌಡಯ್ಯ ಅವರ ಮನೆಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರಕಾರ ಆರೋಪಿತ ಅಧಿಕಾರಿಗಳು ಶೇಕಡ ಪ್ರಮಾಣದಲ್ಲಿ ಆದಾಯಕ್ಕೂ ಮೀರಿ ಆಸ್ತಿಗಳಿಸಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ 

Advertisement

ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಐಜಿಪಿ ಚಂದ್ರಶೇಖರ್‌ ಹೇಳಿದ್ದಾರೆ. ಭ್ರಷ್ಟ ಅಧಿಕಾರಿಗಳ ಮೇಲಿನ ದಾಳಿ ಬಳಿಕ ಶನಿವಾರ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್‌, ಸ್ವಾಮಿ ಮತ್ತು ಗೌಡಯ್ಯ ಅಕ್ರಮವಾಗಿ ಸಂಪಾದಿಸಿರುವ ಆಸ್ತಿ ಹಾಗೂ ನಗದು ಬಗ್ಗೆ ಸಾರ್ವಜನಿಕರೇ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಆರೋಪಿತ ಅಧಿಕಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, ಶನಿವಾರ ಸಂಜೆವರೆಗೂ ಪರಿಶೀಲಿಸಲಾಯಿತು. ವಿದೇಶಿ ಕರೆನ್ಸಿ ಸೇರಿ ಕೋಟ್ಯಂತರ ರೂ. ನಗದು ಸಿಕ್ಕಿರುವುದರಿಂದ  ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಇಬ್ಬರು ಅಧಿಕಾರಿಗಳ ಮನೆಗಳಲ್ಲಿ ಪತ್ತೆಯಾದ ಆಸ್ತಿ ಮತ್ತು ನಗದು ಪ್ರಮಾಣ ಲೆಕ್ಕಪರಿಶೋಧನೆ ವೇಳೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ ಸ್ವಾಮಿ ಮನೆಯಲ್ಲಿ 11 ನಿವೇಶನಗಳು, ವಿವಿಧೆಡೆ 14 ಎಕರೆ ಕೃಷಿ ಜಮೀನುಗಳ ದಾಖಲೆಗಳು, 7.5ಕೆ.ಜಿ.ಬೆಳ್ಳಿ ಪತ್ತೆಯಾಗಿದೆ. ಗೌಡಯ್ಯನ ಮನೆಯಲ್ಲಿ 18 ಕೆ.ಜಿ. 200 ಗ್ರಾಂ ಚಿನ್ನ, 77 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿದ್ದ 15 ಲಕ್ಷ ರೂ. ಠೇವಣಿ ಹಣ ಸಿಕ್ಕಿದೆ. ಅಧಿಕಾರಿಗಳ ಮನೆಯಲ್ಲಿ ಸಿಕ್ಕ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ ಎಂದು ವಿವರಿಸಿದರು.

ಆರೋಪಿತ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಒಂದು ವೇಳೆ ತಪ್ಪು ಮಾಹಿತಿ ಕೊಟ್ಟರೆ ತಾಂತ್ರಿಕವಾಗಿಯೂ ವಿಚಾರಣೆ ನಡೆಸಲಾಗುವುದು. ಸ್ವಾಮಿ ಹಾಗೂ ಇವರ ಸಹೋದರಿ ಮನೆಯಿಂದ ಎಸೆದ ದಾಖಲೆ ಮತ್ತು ನಗದು ಇರುವ ಬ್ಯಾಗ್‌ಗಳನ್ನು ಕೊಂಡೊಯ್ಯಲು ಬಂದಿದ್ದ ಆಟೋ ಚಾಲಕನನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರೆ, ಇಬ್ಬರು ಅಧಿಕಾರಿಗಳನ್ನು ಏಕಾಏಕಿ ಬಂಧಿಸಲು ಸಾಧ್ಯವಿಲ್ಲ. ಒಮ್ಮೆ ಅವಕಾಶ ಕೊಡುತ್ತೇವೆ. ಸಿಕ್ಕ ನಗದು, ದಾಖಲೆಗಳ ಬಗ್ಗೆ ಸೂಕ್ತ ದಾಖಲೆ ನೀಡುವಂತೆ ಹೇಳುತ್ತವೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಅದು ಕೂಡ ಐಪಿಸಿ ಸೆಕ್ಷನ್‌ ಅಡಿ ಅಪರಾಧವಾಗುತ್ತದೆ. ವಿಚಾರಣೆ ವೇಳೆ ಅವರು ಸ್ಪಷ್ಟ ಮಾಹಿತಿ ನೀಡದಿದ್ದರೆ ಬಂಧಿಸಲಾಗುವುದು ಎಂದು ಹೇಳಿದರು.

500 ಕರೆ, 70 ಇ-ಮೇಲ್‌
ಇಬ್ಬರು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರೇ ಎಸಿಬಿಗೆ ಕರೆ ಮತ್ತು ಇ-ಮೇಲ್‌ ಮೂಲಕ ದೂರು ನೀಡುತ್ತಿದ್ದರು. ಸುಮಾರು 500ಕ್ಕೂ ಹೆಚ್ಚು ಕರೆಗಳು ಹಾಗೂ 70 ಇ-ಮೇಲ್‌ಗ‌ಳ ಮೂಲಕ ದೂರು ನೀಡಿದ್ದರು. ಕೆಲವೊಂದು ಆಸ್ತಿಗಳ ಬಗ್ಗೆ ಸಾರ್ವಜನಿಕರೇ ಸ್ಪಷ್ಟ ಮಾಹಿತಿ ನೀಡಿದ್ದರು. ಹೀಗಾಗಿ ದಾಳಿಯ ಯಶಸ್ಸು ನಮಗಿಂತ ಸಾರ್ವಜನಿಕರಿಗೇ ಸಲ್ಲಬೇಕು. ಉತ್ತಮ ಮಾಹಿತಿ ಕೊಟ್ಟ  ಸಾರ್ವನಿಜನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶನಿವಾರ ಕೂಡ ಕರೆಗಳು ಬರುತ್ತಿದ್ದು, ಪರಿಶೀಲನೆ ನಡೆಸಲಾಗಿದೆ. ಇಬ್ಬರು ಅಧಿಕಾರಿಗಳು ಬೆಂಗಳೂರು ನಗರ, ಹೊರವಲಯ ಹಾಗೂ ನೆರೆ ಜಿಲ್ಲೆಗಳಲ್ಲಿ ಬೇನಾಮಿ ಆಸ್ತಿ ಸಂಪಾದಿಸಿರುವ ಮಾಹಿತಿ ಇದೆ ಎಂದರು.

Advertisement

ಎಸಿಬಿಗೆ ಅಭಿನಂದನೆ
ಕೆಐಎಡಿಬಿಯಲ್ಲಿ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದರು. ಇನ್ನು ಗೌಡಯ್ಯ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡುವ ವಿಚಾರದಲ್ಲಿ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಇವರ ದೌರ್ಜನ್ಯದಿಂದ ನೊಂದಿದ್ದ ಸಾರ್ವಜನಿಕರೇ ಇವರ ಬಗ್ಗೆ ಮಾಹಿತಿ ಕಲೆ ಹಾಕಿ ಎಸಿಬಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಎಸಿಬಿಯ ಸಹಾಯವಾಣಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ಹಿಡಿದ ನಿಮಗೆ ಧನ್ಯವಾದಗಳು ಎಂದು ಸಾರ್ವಜನಿಕರು ನಿಟ್ಟುಸಿರುವ ಬಿಡುತ್ತಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಸಹಾಯವಾಣಿ
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ಸಂಸ್ಥೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯ. ಹೀಗಾಗಿ ಎಸಿಬಿ ಸಹಾಯವಾಣಿ 1064 ಮತ್ತು 080-22342100 ಅಥವಾ 9480806300ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಹಾಗೆಯೇ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ anticorruptionbureau.karnataka2016  ಮತ್ತು ಟ್ವಿಟರ್‌ @acbkarnataka ಎಂಬ ಹೆಸರಿನಲ್ಲಿ ಖತೆಗಳನ್ನು ತೆರೆಯಲಾಗಿದ್ದು, ಈ ಮೂಲಕವೂ ವೈಯಕ್ತಿಕವಾಗಿ ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು  ಎಂದು ಎಸಿಬಿ ಅಧಿಕಾರಿಗಳು ಹೇಳಿದರು.

ಹೆಚ್ಚುವರಿಯಾಗಿ ಪತ್ತೆಯಾದ ನಗದು, ದಾಖಲೆಗಳು
ಸ್ವಾಮಿ ಮನೆಯಲ್ಲಿ 11 ನಿವೇಶನಗಳು, ವಿವಿಧೆಡೆ 14 ಎಕರೆ ಕೃಷಿ ಜಮೀನುಗಳ ದಾಖಲೆಗಳು, 7.5ಕೆ.ಜಿ.ಬೆಳ್ಳಿ ಪತ್ತೆಯಾಗಿದ್ದು, ಗೌಡಯ್ಯನ ಮನೆಯಲ್ಲಿ 18 ಕೆ.ಜಿ. 200 ಗ್ರಾಂ ಚಿನ್ನ, 77 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿದ್ದ 15 ಲಕ್ಷ ರೂ. ಠೇವಣಿ ಹಣ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next