ಹಳೇಬೀಡು: ತರಳಬಾಳು ಹುಣ್ಣಿಮೆಯ ಮಹೋತ್ಸವದ ಏಂಟನೇ ದಿನವಾದ ಶನಿವಾರದಂದು ರಣಘಟ್ಟ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ತರಳಬಾಳು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆ ನಡೆಸಿದರು.
ಪಟ್ಟಣದ ರಾಜನಶಿರಿಯೂರು ವೃತ್ತದಿಂದ “ನಮ್ಮ ನಡಿಗೆ ದ್ವಾರಸಮುದ್ರದ ಕಡೆಗೆ’ಎಂಬ ಘೋಷ ವಾಕ್ಯದೊಂದಿದೆ ನೂರಾರು ಮುಖಂಡರು ಮತ್ತು ಸಾವಿರಾರು ಮಂದಿ ಸಾರ್ವಜನಿಕರು ಸೇರಿ ಪಾದಯಾತ್ರೆ ನಡೆಸಿ ದ್ವಾರಸಮುದ್ರಕೆರೆಗೆ ಬಾಗಿನ ಅರ್ಪಿಸಿದರು.
ಇಂಜಿನಿಯರ್ ಜೊತೆ ಚರ್ಚೆ: ದಶಕಗಳಿಂದ ಈ ಭಾಗದ ಜನತೆಗೆ ರಣಘಟ್ಟ ನೀರಾವರಿ ಯೋಜನೆಗೆ ಹೋರಾಟ ನಡೆಸಿದ್ದನ್ನು ಮನಗಂಡ ತರಳಬಾಳು ಶ್ರೀಗಳು ಅದಕ್ಕೆ ಸಂಬಂಧಿಸಿದ ನೀಲನಕ್ಷೆ ತರಿಸಿಕೊಂಡು ಸಂಬಂಧಪಟ್ಟ ಇಂಜಿನಿಯರ್ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದರು. ರಣಘಟ್ಟ ಒಡ್ಡಿನ ಮೂಲಕವೇ ಹಳೇಬೀಡು, ಮಾದೀಹಳ್ಳಿ, ಜಾವಗಲ್ ಕೆರೆಗಳಿಗೆ ನೀರು ಹರಿಸಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಎಂಜಿನಿಯರ್ ಜೊತೆ ಚರ್ಚೆ ನಡೆಸಿದ್ದು, ಈ ಭಾಗದ ಜನರಿಗೆ ಮತ್ತೂಷ್ಟು ಆಶಾಭಾವನೆ ಮೂಡಿಸಿದೆ.