ಇದೇ ಮೇ. 29 ರಂದು ನಟ ರೆಬಲ್‌ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಈ ಬಾರಿ ಅಂಬರೀಶ್ ಹುಟ್ಟುಹಬ್ಬಕ್ಕೆ ಅವರ ಸಿನಿಮಾ ಕೆರಿಯರ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದಾದ “ಅಂತ’ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಹೌದು, 1981ರಲ್ಲಿ ಬಿಡುಗಡೆಯಾಗಿದ್ದ “ಅಂತ’ ಸಿನಿಮಾ ನಟ ಅಂಬರೀಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ “ರೆಬಲ್‌ಸ್ಟಾರ್’ ಆಗಿ ಪರಿಚಯಿಸಿದ್ದು, ಬಹುತೇಕರಿಗೆ ಗೊತ್ತೇ ಇದೆ. ಈಗ ಅದೇ “ಅಂತ’ ಸಿನಿಮಾ ಸುಮಾರು 42 ವರ್ಷಗಳ ನಂತರ ಹೊಸ ರೂಪದಲ್ಲಿ ಆಧುನಿಕ ಸ್ಪರ್ಶ ಪಡೆದುಕೊಂಡು ಮತ್ತೆ ಬಿಡುಗಡೆಯಾಗುತ್ತಿದೆ.
“1981 ಇಸವಿಯಲ್ಲಿ “ಅಂತ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಅಂದು ಅಭಿನಯಿಸಿದ್ದ ಬಹುತೇಕ ಕಲಾವಿದರು, ತಂತ್ರಜ್ಞರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಕೊಡುಗೆಯನ್ನು ಈ ಸಿನಿಮಾದಲ್ಲಿ ಮರೆಯುವಂತಿಲ್ಲ. ಆರಂಭದಲ್ಲಿ “ಅಂತ’ ಸಿನಿಮಾವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ ಸಿಂಗ್ ಮೂಲಕ ಈ ಕಥೆ ನನಗೆ ದೊರಕಿತು. ಕೊನೆಗೆ “ಪರಿಮಳ ಆರ್ಟ್ಸ್’ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡಿದರು. ಮೊದಲಿಗೆ ಸಿನಿಮಾಕ್ಕೆ ಅಂಬರೀಶ್ ನಾಯಕ ಎಂದು ತೀರ್ಮಾನಿಸಲಾಯಿತು. ಆದರೆ ಈ ವಿಷಯ ಗೊತ್ತಾಗುತ್ತಿದ್ದಂತೆ, ಸಿನಿಮಾ ಪಂಡಿತರು ಎನಿಸಿಕೊಂಡವರು ಸಿನಿಮಾದ ಬಗ್ಗೆ ಸಾಕಷ್ಟು ಕುಹುಕದ ಮಾತುಗಳನ್ನಾಡಿದರು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾ ಮಾಡಿದೆವು. ಆನಂತರ ಸಿನಿಮಾ ಬಿಡುಗಡೆಯಾಗಿ ದಾಖಲೆಯನ್ನೇ ಬರೆಯಿತು. ಪ್ರೇಕ್ಷಕರು ಮೆಚ್ಚಿಕೊಂಡರು. ಆನಂತರ ನಡೆದಿದ್ದು ಇತಿಹಾಸ…’ ಇದು “ಅಂತ’ ಸಿನಿಮಾದ ನಿರ್ದೇಶಕ ಎಸ್. ವಿ ರಾಜೇಂದ್ರ ಸಿಂಗ್ ಬಾಬು ಅವರ ಮಾತು.
ಈ ಬಾರಿ ನಟ ಅಂಬರೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ “ಅಂತ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಬಾಬು, “ಅಂತ’ ಸಿನಿಮಾದ ಅಂದಿನ ಕೆಲ ವಿಷಯಗಳನ್ನು ಮೆಲುಕು ಹಾಕಿದರು. “”ಅಂತ’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಮೈಸೂರಿನಲ್ಲಿ ಸುಮಾರು 18 ಸೆಟ್‌ಗಳನ್ನು ಹಾಕಿ ಚಿತ್ರೀಕರಿಸಿದ್ದೆವು. ಆಗಿನ ಕಾಲಕ್ಕೆ ಸುಮಾರು 20 ಲಕ್ಷ ರೂ. ಬಜೆಟ್‌ನಲ್ಲಿ ತಯಾರಾದ ಸಿನಿಮಾ ಸುಮಾರು 40 ಲಕ್ಷ ರೂ. ಗೂ ಅಧಿಕ ಕಲೆಕ್ಷನ್ ಮಾಡಿತ್ತು. “ಅಂತ’ ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ಹಿಂದಿಯಲ್ಲಿ ಜಿತೇಂದ್ರ ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಲ್ಲೂ ದಾಖಲೆ ಬರೆಯಿತು. ರಜಿನಿಕಾಂತ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸುವ ಆಸೆ ಹೊಂದಿದ್ದರು. ಅಂಬರೀಶ್ ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್, ಸಂಗೀತ ನಿರ್ದೇಶಕ ಜಿ. ಕೆ ವೆಂಕಟೇಶ್ ಹೀಗೆ ಈ ಸಿನಿಮಾದಲ್ಲಿ ಕೆಲಸ ಮಾಡಿದ ಅದೆಷ್ಟೋ ಕಲಾವಿದರು ಮತ್ತು ತಂತ್ರಜ್ಞರು ಇಂದು ನಮ್ಮೊಂದಿಗಿಲ್ಲ. ಆದರೆ ಸಿನಿಮಾದ ಯಶಸ್ಸಿಗೆ ಪ್ರತಿಯೊಬ್ಬರದ್ದೂ ಕೊಡುಗೆ ಇದೆ. ನನಗೆ ತಿಳಿದಿರುವ ಪ್ರಕಾರ “ಅಂತ’ ಸಿನಿಮಾದ ಸ್ಪೂರ್ತಿಯಿಂದ ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳು ಬಂದಿವೆ. ನನ್ನ ಪ್ರಕಾರ ಕಥೆ ಸಿನಿಮಾದ ನಿಜವಾದ ಹೀರೋ. ಆ ಕಥೆ ಚೆನ್ನಾಗಿದ್ದರೆ ಸಿನಿಮಾದ ಯಶಸ್ಸು ಖಂಡಿತ. “ಅಂತ’ ಕೂಡ ಅಂಥದ್ದೇ ಸಿನಿಮಾ. ಸಿನಿಮಾದ ಒಳ್ಳೆಯ ಕಥೆ, ಕಲಾವಿದರ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಯಿತು. ಇಂಥ ಅದ್ಭುತ ಸಿನಿಮಾ ಇದೇ ಮೇ 26ಕ್ಕೆ ಹೊಸ ತಂತ್ರಜ್ಞಾನದಲ್ಲಿ ಮತ್ತೆ ರೀ ರಿಲೀಸ್ ಆಗುತ್ತಿದೆ’ ಎಂಬುದು ಬಾಬು ಅವರ ಮಾತು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ವೇಣು, “ಮೇ 29 ರಂದು ಅಂಬರೀಶ್ ಅವರ 71ನೇ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಮೇ 26 ರಂದು “ಅಂತ’ ಚಿತ್ರವನ್ನು 71ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಜಯಣ್ಣ ಫಿಲಂಸ್ ಮೂಲಕ “ಅಂತ’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೊಸ ತಂತ್ರಜ್ಞಾನದಲ್ಲಿ ಕಲರಿಂಗ್, ಸೌಂಡಿಂಗ್ ಎಲ್ಲವನ್ನೂ ಬದಲಾವಣೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.