ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ರಾಷ್ಟ್ರೀಯ ಹುಲಿ ಗಣತಿ ಕಾರ್ಯದಲ್ಲಿ ಗುರುವಾರ ಟ್ರ್ಯಾನ್ಸಾಕ್ಟ್ ಲೆನ್ ಸೆನ್ಸಸ್(ಸೀಳುದಾರಿ ಗಣತಿ) ಪ್ರಾರಂಭವಾಗಿದ್ದು, ಮುಂದಿನ ಎರಡು ದಿನಗಳ ಕಾಲ ಅಭಯಾರಣ್ಯದಲ್ಲಿ ವಾಸಿಸುವ ಸಸ್ಯಹಾರಿ ಪ್ರಾಣಿಗಳು ಹಾಗೂ ವನಸಂಪತ್ತಿನ ಗಣತಿ ಕಾರ್ಯವನ್ನು ಅರಣ್ಯ ಸಿಬ್ಬಂದಿಗಳು ಮತ್ತು ಸ್ವಯಂಸೇವಕರು ನಡೆಸಲಿದ್ದಾರೆ.
ಹುಲಿ ಪ್ರತ್ಯಕ್ಷ: ಕಳೆದ ಮೂರು ದಿನಗಳಿಂದ ಅಭಯಾರಣ್ಯದಲ್ಲಿ ಮಾಂಸಹಾರಿ ಪ್ರಾಣಿಗಳ ಗಣತಿಕಾರ್ಯ ಯಶಸ್ವಿಯಾಗಿ ನಡೆಯಿತು, ಮೂರನೇ ದಿನ ಬುಧವಾರ ಹುಣಸೂರು ವಲಯದಲ್ಲಿ ಎರಡು, ಡಿ.ಬಿ.ಕುಪ್ಪೆಯಲ್ಲಿ ಹಾಗೂ ಅಂತರ ಸಂತೆವಲಯದಲ್ಲೂ ತಲಾ ಒಂದು ಹುಲಿ ಗಣತಿಕಾರರ ಮುಂದೆ ಪ್ರತ್ಯಕ್ಷವಾಗಿದ್ದರೆ, ಗುರುವಾರ ಅಂತರ ಸಂತೆ ವಲಯದಲ್ಲಿ ತಾಯಿ ಹಾಗೂ ಮೂರು ಹುಲಿ ಮರಿಗಳು ಹಾಗೂ ಡಿ.ಬಿ.ಕುಪ್ಪೆಯಲ್ಲಿ 3 ಚಿರತೆ ಕಾಣಿಸಿವೆ.
ಮೂರು ದಿನಗಳ ಕಾಲ ಅರಣ್ಯವ್ಯಾಪ್ತಿಯಲ್ಲಿ 30 ಸ್ವಯಂಸೇವಕರು, 24 ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅರಣ್ಯ ಸಿಬ್ಬಂದಿಗಳು ಇದೇ ಮೊದಲ ಬಾರಿಗೆ ಇಲಾಖೆ ಅಭಿವೃದ್ಧಿ ಪಡಿಸಿರುವ ಇಕೋಲಾಜಿಕಲ್ ಆ್ಯಪ್ ಮೂಲಕ ಹುಲಿ ಗಣತಿಯನ್ನು ಅತ್ಯಂತ ನಿಖರತೆಯಿಂದ ಹಾಗೂ ಯಶಸ್ವಿಯಾಗಿ ಮುಗಿಸಿದ್ದಾರೆ.
ಟ್ರ್ಯಾನ್ಸಾಕ್ಟ್ ಲೆನ್ ಗಣತಿ ಏಕೆ? : ಹುಲಿ ಗಣತಿಯೆಂದರೆ ಕಾಡಿನಲ್ಲಿ ಕೇವಲ ಹುಲಿ ಮಾತ್ರ ಇರುವುದಿಲ್ಲ. ಹುಲಿಯೊಂದಿಗೆ ಹುಲಿಯ ಆಹಾರ ಜಿಂಕೆಯಾದರೆ, ಜಿಂಕೆ ಹೇಗಿವೆ. ಜಿಂಕೆಜೀವಿಸಲು ಸಸ್ಯಪ್ರಬೇಧ ಹೇಗಿದೆ. ಇವೆಲ್ಲವೂ ಇಡೀ ಅಭಯಾರಣ್ಯದಲ್ಲಿ ಆಹಾರ ಸರಪಳಿ ಮತ್ತು ಪರಿಸರ ಸಮತೋಲನವನ್ನು ಅರಿತುಕೊಳ್ಳಲು ಇಂತಹ ಗಣತಿ ಕಾರ್ಯ ಮಾಡಲಾಗುತ್ತದೆ.
ಸಸ್ಯಹಾರಿ ಗಣತಿ ನಡೆಯುವುದು ಹೇಗೆ?: ಸಸ್ಯಾಹಾರಿ ಪ್ರಾಣಿಗಳು ಮತ್ತು ವಿವಿಧ ಸಸ್ಯಪ್ರಭೇದಗಳನ್ನು ಗುರುತಿಸುವ ಕಾರ್ಯ ಪ್ರತಿದಿನ ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ಸಸ್ಯಹಾರಿಗಳ ಗಣತಿ ನಡೆಯುತ್ತದೆ. ಏಕೆಂದರೆ ಬೆಳಗಿನ ಜಾವದ ಸಮಯದಲ್ಲೇ ಸಸ್ಯಾಹಾರಿ ಪ್ರಾಣಿಗಳು ಅತ್ಯಂತ ಚಟುವಟಿಕೆಯಿಂದ ಇರುವ ಕಾಲವಾಗಿದೆ. ಸಸ್ಯಹಾರಿ ಪ್ರಾಣಿಗಳ ಗಣತಿಕಾರರು ಇಲಾಖೆ ನಿರ್ಮಿಸಿರುವ ಟ್ರ್ಯಾನ್ಸಾಕ್ಟ್ ಲೆನ್(ಸೀಳುದಾರಿ)ನಲ್ಲಿ ಸಾಗಬೇಕು.
ಪ್ರತಿ ಆಂಟಿ ಪೌಚಿಂಗ್ ಕ್ಯಾಂಪ್‌ವಾÂಪ್ತಿಯಲ್ಲಿ 2 ಕಿ.ಮೀ.ಉದ್ದದ ನೇರಮಾರ್ಗ ನಿರ್ಮಿಸಲಾಗಿರುತ್ತದೆ. ಇದರಲ್ಲಿ ಪ್ರತಿ 400 ಮೀಟರಿಗೆ ಒಂದು ವೃತ್ತವನ್ನು ಗುರುತಿಸಲಾಗಿರುತ್ತದೆ. ಮೂವರ ತಂಡದಲ್ಲಿ ಮೊದಲನೆಯವರು ದಿಕ್ಕು ಗುರುತಿಸಿಕೊಂಡು ಮುನ್ನಡೆದರೆ, ಅವರ ಹಿಂಬದಿಯ ಎರಡನೇ ಗಣತಿಕಾರ ಸುತ್ತಮುತ್ತಲ ಪರಿಸರ ಗಮನಿಸುತ್ತಾ ಪ್ರಾಣಿಗಳನ್ನು ಗುರುತಿಸುತ್ತಾರೆ.
ಎರಡನೆಯವರು ತಿಳಿಸಿದ ಪ್ರಾಣಿಗಳನ್ನು ಮೂರನೆಯವರು ಆ್ಯಪ್‌ಗೆ ಅಪ್‌ಲೋಡ್ ಮಾಡುವ ಕಾರ್ಯ ನಡೆಸುತ್ತಾರೆ. ಈ ಆ್ಯಪ್‌ನಲ್ಲಿ ಆ ಭೂಭಾಗದ ಹಾಗೂ ಪ್ರಾಣಿಯ ಭಾವಚಿತ್ರ ಸೆರೆಹಿಡಿಯುವ ಅವಕಾಶವನ್ನೂ ನೀಡಲಾಗಿದೆ. ಗಣತಿ ಕಾರ್ಯದ ವೇಳೆ ಕಾಡಿನ ಗಡಿಭಾಗದ ಹುಲ್ಲುಗಾವಲು, ಲಾಂಟೇನದಂತಹ ಕಳೆ ಬೆಳೆದಿರುವ ಪ್ರದೇಶ ಹಾಗೂ ಮಾನವನಿಂದಾಗುತ್ತಿರುವ ತೊಂದರೆಗಳು, ಸಮಸ್ಯೆಗಳನ್ನು ಗುರುತಿಸುವ ಕಾರ್ಯನಡೆಯುತ್ತದೆ.
* ಸಂಪತ್ ಕುಮಾರ್