Advertisement

Chennapattana: ಒಕ್ಕಲಿಗರ ಸಾಮ್ರಾಜ್ಯದ ಅಧಿಪತ್ಯಕ್ಕೆ ಮತ್ತೊಂದು ಸುತ್ತಿನ ಸಮರವೇ?

12:04 PM Jun 20, 2024 | Team Udayavani |

ರಾಮನಗರ: ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್‌ ಚನ್ನಪಟ್ಟಣ ಕ್ಷೇತ್ರದಲ್ಲಿ ಕಣಕ್ಕಿಳಿಯಲು “ಸಜ್ಜಾಗಿರುವುದು’ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಒಕ್ಕಲಿಗ ಸಮುದಾಯದ ಅಧಿಪತ್ಯಕ್ಕಾಗಿ ಮತ್ತೊಂದು ಸುತ್ತಿನ ಸಮರಕ್ಕೆ ಕಣ ಸಿದ್ಧವಾಗಿದೆ.

Advertisement

“ಐ ಲವ್‌ ಚನ್ನಪಟ್ಟಣ, ಐ ಲೈಕ್‌ ಚನ್ನಪಟ್ಟಣ’ ಎಂದು ಹೇಳಿ ಟೆಂಪಲ್‌ ರನ್‌ ಆರಂಭಿಸುವ ಮೂಲಕ ರಾಜಕೀಯ ವಲಯದಲ್ಲಿ ಡಿ.ಕೆ.ಶಿವಕುಮಾರ್‌ ಸಂಚಲನ ಮೂಡಿಸಿದ್ದಾರೆ. ಶಾಸಕರಾಗಿದ್ದರೂ ಪಕ್ಕದ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಮುಂದಾಗುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಈ ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿಯ ಈ ನಡೆ ಹಿಂದೆ ಯಾವೆಲ್ಲಾ ಲೆಕ್ಕಾಚಾರಗಳಿವೆ ಎಂಬ ಚರ್ಚೆ ಪ್ರಾರಂಭವಾಗಿದೆ.

ಈ ಕ್ಷೇತ್ರದಿಂದ ಈ ವರೆಗೆ ಕೆಂಗಲ್‌ ಹನುಮಂತಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದು ಈ ಹಿನ್ನೆಲೆಯಲ್ಲಿ ಇಲ್ಲಿ ಕಣಕ್ಕಿಳಿದು ಗೆದ್ದು ತಮ್ಮ ಅದೃಷ್ಟ ಪರೀಕ್ಷಿಸುವ ಪ್ರಯತ್ನದಲ್ಲಿದ್ದಾರೆಯೇ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇಲ್ಲೇ ಸ್ಪರ್ಧೆಗಿಳಿಯುವ ಮೂಲಕ ನಾನೇ ಸಿಎಂ ಅಭ್ಯರ್ಥಿ ಎಂಬ ಸಂದೇಶ ರವಾನಿಸುವ ತಂತ್ರ ಅಡಗಿದೆ ಎನ್ನಲಾಗಿದೆ.

ಒಕ್ಕಲಿಗ ಸಾಮ್ರಾಜ್ಯದ ಅಧಿಪತ್ಯ: ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದ 65 ಕ್ಷೇತ್ರಗಳಲ್ಲಿ 43 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಜೆಡಿಎಸ್‌ 14ರಲ್ಲಿ ಗೆದ್ದಿದ್ದರೆ, ಬಿಜೆಪಿ 6ಕ್ಕೆ ತೃಪ್ತವಾಗಿತ್ತು. ಇದೇ ಫಲಿತಾಂಶ ಲೋಕಸಭೆಯಲ್ಲಿ ಉಲ್ಟಾ ಹೊಡೆದಿದ್ದು ಒಕ್ಕಲಿಗರ ಪ್ರಾಬಲ್ಯವಿದ್ದ 1ನೇ ಹಂತದ ಚುನಾವ‌ಣೆಯಲ್ಲಿ 14 ಕ್ಷೇತ್ರಗಳ ಪೈಕಿ 12ರಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್‌ ಗೆದ್ದಿ ದ್ದರೂ ಅದು ಪಕ್ಷದ ವರ್ಚಸ್ಸಿಗೆ ಸಿಕ್ಕ ಗೆಲುವಲ್ಲ. ಹೀಗಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಗೆದ್ದು ರಾಮನಗರ ಜಿಲ್ಲೆ ಕಬ್ಜಾ ಮಾಡುವ ಮೂಲಕ ಒಕ್ಕಲಿಗ ಸಾಮ್ರಾಜ್ಯದ ಅಧಿಪತ್ಯ ಪಡೆಯಲು ಚನ್ನಪಟ್ಟಣ ಸ್ಪರ್ಧೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಾಮನಗರದಲ್ಲಿ ನಿಖಿಲ್‌ ಸೋಲಿಸಿದ್ದು, ಚನ್ನಪಟ್ಟಣ ವನ್ನೂ ವಶಕ್ಕೆ ಪಡೆದರೆ ದೇವೇಗೌಡರ ಕುಟುಂಬವನ್ನು ಜಿಲ್ಲೆಯಿಂದ ಹೊರಗೆ ಕಳುಹಿಸಿದೆವು ಎಂಬ ಕ್ರೆಡಿಟ್‌ ಸಿಗುತ್ತದೆ ಎಂಬುದು ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತದೆ.

ಡಿಕೆಶಿ ಸ್ಪರ್ಧೆ ಹಿಂದಿನ ಕಾರಣ

Advertisement

1. ಚನ್ನಪಟ್ಟಣ ವಾಸ್ತುಪ್ರಕಾರ ದೇವಮೂಲೆಯಲ್ಲಿದ್ದು ಇಲ್ಲಿಂದ ಸ್ಪರ್ಧಿಸಿದವರಿಗೆ ರಾಜಯೋಗವಿದೆ ಎಂಬ ನಂಬಿಕೆ

  1. ಚನ್ನಪಟ್ಟಣ ಕಬ್ಜಾ ಮಾಡಿ ದೇವೇಗೌಡರ ಕುಟುಂಬದ ಹಿಡಿತದಲ್ಲಿರುವ ಜಿಲ್ಲೆಯನ್ನು ವಶಕ್ಕೆ ಪಡೆದೆ ಎಂಬ ಹೆಗ್ಗಳಿಕೆ ಮೂಲಕ ಒಕ್ಕಲಿಗರ ಸಾಮ್ರಾಜ್ಯದಲ್ಲಿ ಅಧಿಪತ್ಯ ಸ್ಥಾಪಿಸುವುದು
  2. ತನ್ನ ಸಹೋದರನ್ನು ಲೋಕಸಭೆಯಲ್ಲಿ ಸೋಲಿಸಿದ ಕುಮಾರಸ್ವಾಮಿ, ಯೋಗೇಶ್ವರ್‌ ವಿರುದ್ಧ ಸೇಡು ತೀರಿಸಿಕೊಳ್ಳುವುದು. ಕನಕಪುರದಲ್ಲಿ ತಮ್ಮನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವುದು. ಚನ್ನಪಟ್ಟಣದಲ್ಲಿ ನಿಂತು ತಮ್ಮ ಸೋತರೆ ಅವನ ರಾಜಕೀಯ ಭವಿಷ್ಯ ಮಸುಕಾಗಲಿದೆ ಎಂಬ ಆತಂಕ
  3. ಡಿಕೆಶಿ 1.20 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಕನಕಪುರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ಗೆ ಕೇವಲ 26 ಸಾವಿರ ಲೀಡ್‌ ಬಂದಿದೆ. ವಿಧಾನಸಭೆಯಲ್ಲಿ 15 ಸಾವಿರ ಮತ ಬಂದಿದ್ದ ಚನ್ನಪಟ್ಟಣದಲ್ಲಿ ಲೋಕಸಭೆಯಲ್ಲಿ 85 ಸಾವಿರ ಮತ ಬಂದಿದೆ. ಈ ಮತ ಗಳಿಕೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಬಲವಿದೆ ಎಂಬ ಲೆಕ್ಕಾಚಾರ
  4. ಯೋಗೇಶ್ವರ್‌ ಕಾಂಗ್ರೆಸ್‌ ತೊರೆದ ಬಳಿಕ ಚನ್ನಪಟ್ಟಣದಲ್ಲಿ ಸಮರ್ಥ ಕಾಂಗ್ರೆಸ್‌ ನಾಯಕರನ್ನು ಬೆಳೆಸಿಲ್ಲ. ಮೈತ್ರಿ ಅಭ್ಯರ್ಥಿಯನ್ನು ಎದುರಿಸುವ ವರ್ಚಸ್ಸಿನ ನಾಯಕರು ಯಾರೂ ಇಲ್ಲದ ಕಾರಣ ಡಿ.ಕೆ. ಸುರೇಶ್‌ ಸ್ಪರ್ಧಿ ಸಿ ದರೆ ಸೋಲ ಬಹುದು ಎಂಬ ಆತಂಕ ದಿಂದ ತಾನೇ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ.

 

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next