ಪುಣೆ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾಡಿದ ರೀತಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಲು ನಕ್ಸಲರು ಸಂಚು ಹೂಡಿರುವ ಆಘಾತಕಾರಿ ಮಾಹಿತಿ ಬಯಲಾಗಿದೆ. ನಕ್ಸಲರ ಆಂತರಿಕ ಸಂವಹನದ ವಿವರದಲ್ಲಿ ಈ ಸಂಚು ಬಹಿರಂಗವಾಗಿದೆ. ತಮಿಳುನಾಡಿನ ಪೆರಂಬದೂರಿನಲ್ಲಿ 1991ರ ಮೇ 21ರಂದು ಶ್ರೀಲಂಕಾದ ಎಲ್‌ಟಿಟಿಇ ಬಂಡು ಕೋರರು ಆತ್ಮಾಹುತಿ ದಾಳಿ ನಡೆಸಿ ರಾಜೀವ್ ಗಾಂಧಿಯವರನ್ನು ಹತ್ಯೆಗೈದಿದ್ದರು. ಈಗ ಅದೇ ಮಾದರಿಯಲ್ಲಿ ಮೋದಿ ಹತ್ಯೆಗೆ ಸಂಚು ನಡೆದಿರು ವುದು ಸಂಚಲನಕ್ಕೆ ಕಾರಣವಾಗಿದೆ. ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೋನಾ ವಿಲ್ಸನ್‌ನನ್ನು ಬಂಧಿಸಿದಾಗ ಆತನ ದಿಲ್ಲಿ ಯಲ್ಲಿನ ಮನೆಯಲ್ಲಿ ಒಂದು ಪತ್ರವಿತ್ತು. ಈ ಪತ್ರದಲ್ಲಿ ಸಂಚಿನ ವಿಚಾರ ಉಲ್ಲೇಖೀಸಲಾಗಿದೆ ಎಂದು ಪುಣೆ ಸೆಷನ್ಸ್ ನ್ಯಾಯಾಲಯಕ್ಕೆ ಪುಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಪಿಎಂ ಜತೆ ಸಂಪರ್ಕ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಂದ್ರ ಗಡ್ಲಿಂಗ್, ಸುಧೀರ್ ಧವಳೆ, ರೋನಾ ವಿಲ್ಸನ್, ಶೋಮಾ ಸೇನ್ ಮತ್ತು ಮಹೇಶ್ ರಾವತ್‌ರನ್ನು ಬಂಧಿಸಲಾಗಿದೆ. ಈ ಐವರೂ ಸಿಪಿಎಂ ಜತೆ ಸಹಭಾಗಿತ್ವ ಹೊಂದಿದ್ದು, ರೋನಾ ವಿಲ್ಸನ್ ರಾಜಕೀಯ ಕೈದಿಗಳ ಬಿಡುಗಡೆ ಸಮಿತಿಯ ಸದಸ್ಯನೂ ಆಗಿದ್ದಾನೆ. ನಾಲ್ವರನ್ನೂ ಗುರುವಾರ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಜೂ.14ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ವೇಳೆ ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್ ಮತ್ತು ಕೆಲವು ಇತರ ದಾಖಲೆಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಗಾಗಿ ಎಂ4 ರೈಫಲ್ ಹಾಗೂ ನಾಲ್ಕು ಲಕ್ಷ ಸುತ್ತು ಮದ್ದುಗುಂಡುಗಳನ್ನು ಖರೀದಿಸಲು 8 ಕೋಟಿ ರೂ. ಹಣಕಾಸಿನ ಅಗತ್ಯವಿದೆ ಎಂದೂ ಪತ್ರದಲ್ಲಿ ಬರೆಯಲಾಗಿದೆ. ಕಾಮ್ರೇಡ್ ಪ್ರಕಾಶ್ ಎಂಬುವವರಿಗೆ ಆರ್. ಎಂಬ ವ್ಯಕ್ತಿ ಬರೆದ ಪತ್ರ ಇದಾಗಿದೆ.
ಪತ್ರದಲ್ಲಿ ಏನಿದೆ?: ಮೋದಿ ನೇತೃತ್ವದ ಹಿಂದೂ ಸರ್ವಾಧಿಕಾರವು ಆದಿವಾಸಿಗಳ ಜೀವನವನ್ನು ನಿರ್ನಾಮ ಮಾಡುತ್ತಿದೆ. 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮೋದಿ ಯಶಸ್ವಿಯಾಗಿ ಬಿಜೆಪಿ ಸರಕಾರವನ್ನು ರಚಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಇದು ಪಕ್ಷಕ್ಕೆ ಎಲ್ಲ ರೀತಿಯಲ್ಲೂ ತೊಂದರೆ ಉಂಟಾಗುತ್ತದೆ. ಮಿಷನ್ 2016ಗಿಂತಲೂ ಹೆಚ್ಚು ಕಠಿನವಾದ ಕ್ರಮವನ್ನು ಕೈಗೊಳ್ಳಬೇಕಿದೆ.
ಕಾಮ್ರೇಡ್ ಕಿಸಾನ್ ಮತ್ತು ಇತರ ಹಲವು ಹಿರಿಯ ಕಾಮ್ರೇಡ್‌ಗಳು ಮೋದಿ ಆಡಳಿತವನ್ನು ಕೊನೆಗೊಳಿಸಲು ನಿರ್ದಿಷ್ಟ ಹಂತಗಳನ್ನು ಪ್ರಸ್ತಾವಿಸಿದ್ದಾರೆ. ನಾವು ಇನ್ನೊಂದು ರಾಜೀವ್ ಗಾಂಧಿ ಹತ್ಯೆ ರೀತಿಯ ಕ್ರಮಕ್ಕೆ ಚಿಂತನೆ ನಡೆಸಿದ್ದೇವೆ. ಇದು ಆತ್ಮಹತ್ಯೆಯಂತೆ ಇರುತ್ತದೆ ಮತ್ತು ನಾವು ವಿಫಲವಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಪಿಬಿ/ಸಿಸಿ ಪಕ್ಷವು ನಮ್ಮ ಪ್ರಸ್ತಾವದ ಬಗ್ಗೆ ಚಿಂತಿಸಬೇಕು ಎಂದು ನಾವು ಭಾವಿಸಿದ್ದೇವೆ. ಅವರ ರೋಡ್‌ಶೋವನ್ನು ಟಾರ್ಗೆಟ್ ಮಾಡುವುದು ಉತ್ತಮ ವಿಧಾನವಾಗಿದೆ. ನಮ್ಮ ಪಕ್ಷದ ಅಸ್ತಿತ್ವವು ನಮಗೆ ಎಲ್ಲಕ್ಕಿಂತ ಮುಖ್ಯ ತ್ಯಾಗವಾಗಿರಬೇಕು.
ಹಿಂದೂ ಸರ್ವಾಧಿಕಾರವನ್ನು ಸೋಲಿಸುವುದು ನಮ್ಮ ಮೂಲ ಉದ್ದೇಶವಾಗಬೇಕು ನಮ್ಮ ಗುಪ್ತಚರ ದಳದ ಹಿರಿಯ ನಾಯಕರು ಹಾಗೂ ಇತರ ಸಂಘಟನೆಗಳು ಈ ವಿಷಯವನ್ನು ಪ್ರಸ್ತಾವಿಸಿವೆ. ಸಮಾನ ಮನಸ್ಕ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ದೇಶಾದ್ಯಂತ ಇರುವ ಅಲ್ಪಸಂಖ್ಯಾಕರ ಪ್ರತಿನಿಧಿಗಳ ಜತೆ ಸಹಭಾಗಿತ್ವ ಸಾಧಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.
ಫಡ್ನವೀಸ್‌ಗೂ ಬೆದರಿಕೆ ಪತ್ರ
ಇತ್ತೀಚೆಗೆ ಗಡಿcರೋಲಿಯಲ್ಲಿ ನಕ್ಸಲರ ವಿರುದ್ಧ ನಡೆಸಿದ ಕಾರ್ಯಾಚರಣೆಗೆ ಪ್ರತೀಕಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಅವರ ಕುಟುಂಬದವರ ಮೇಲೆ ದಾಳಿ ನಡೆಸುವ ಬೆದರಿಕೆ ಒಡ್ಡಲಾಗಿದೆ. ವಾರದ ಹಿಂದೆ ಮುಖ್ಯಮಂತ್ರಿ ಕಚೇರಿಗೆ ಈ ಪತ್ರ ಬಂದಿದ್ದು, ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಇದು ಅತ್ಯಂತ ಗಂಭೀರ ವಿಷಯ. ನಕ್ಸಲರು ಒತ್ತಡದಲ್ಲಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದ ವಿಷಯ. ಹತ್ಯೆಯ ಚಿಂತನೆ ಅತ್ಯಂತ ಅಪಾಯಕಾರಿಯಾಗಿದೆ. ಈ ಪೈಕಿ ಬಹುತೇಕ ಸಂಸ್ಥೆಗಳು ಮುಖ್ಯವಾಹಿನಿ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕ ಹೊಂದಿವೆ.
ನಳಿನ್ ಕೊಹ್ಲಿ, ಬಿಜೆಪಿ ನಾಯಕ
ಪ್ರಧಾನಿ ಮೋದಿ ಭದ್ರತೆ ಬಗ್ಗೆ ಸರಕಾರ ಯಾವತ್ತೂ ಗಂಭೀರವಾಗಿದೆ. ಸೋಲುವ ಯುದ್ಧದಲ್ಲಿ ನಕ್ಸಲರು ಹೋರಾಡುತ್ತಿದ್ದಾರೆ. ಅವರೀಗ ಕೇವಲ 10 ಜಿಲ್ಲೆಗಳಲ್ಲಷ್ಟೇ ಸಕ್ರಿಯವಾಗಿರುವುದು.
ರಾಜನಾಥ್‌ಸಿಂಗ್, ಕೇಂದ್ರ ಗೃಹ ಸಚಿವ
ಭೀಮಾ ಕೋರೆಗಾಂವ್ ಗಲಭೆ ಆರೋಪಿಗಳ ಬಂಧನದಿಂದ ಬಹಿರಂಗ
ರೋನಾ ವಿಲ್ಸನ್ ಮನೆಯಲ್ಲಿತ್ತು ಸಂಚಿನ ಪತ್ರ