Advertisement

ಲಾಕ್ ಡೌನ್ ಭೀತಿ: ಮುಂಬೈನಿಂದ ಮತ್ತೆ ಸಾವಿರಾರು ಮಂದಿ ಗುಳೆ ಹೊರಟ ವಲಸೆ ಕಾರ್ಮಿಕರು!

01:52 PM Apr 12, 2021 | Team Udayavani |

ಇಂದೋರ್ : ಕೋವಿಡ್ ಇಡಿ ಪ್ರಪಂಚದಲ್ಲಿ ಮತ್ತೆ ಭೀತಿಯನ್ನು ಮೂಡಿಸಿದೆ ಎನ್ನುವುದಕ್ಕೆ ಅನುಮಾನ ಬೇಕಾಗಿಲ್ಲ. ಕೋವಿಡ್ ಸೋಂಕಿನ ಮೊದಲ ಅಲೆಯಲ್ಲಿ ದೇಶದ ನಾಗರಿಕ ವ್ಯವಸ್ಥೆ ತತ್ತರಿಸಿ ಹೋಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈಗ ದೇಶದಲ್ಲಿ ಮತ್ತೆ ಕೋವಿಡ್ ನ ರೂಪಾಂತರಿ ಸೋಂಕು ದೇಶವ್ಯಾಪಿ ಆತಂಕ ಸೃಷ್ಟಿಸಿದೆ.

Advertisement

ಕಳೆದ ಬಾರಿ ಇದೇ ಸಮಯಕ್ಕೆ ದೇಶದ ಮಹಾ ನಗರಗಳಿಂದ ಸಾವಿರಾರು ಮಂದಿ ವಲಸೆ ಕಾರ್ಮಿಕರು ತಮ್ಮ ಊರಿಗೆ ಗುಳೆ ಹೊರಟಿದ್ದನ್ನು ಕಂಡಿದ್ದೇವೆ. ಈ ಬಾರಿ ಮತ್ತೆ ಆ ಸನ್ನಿವೇಶ ಎದುರಾಗಿದೆ. ವಾಣಿಜ್ಯ ನಗರ ಮುಂಬೈನಲ್ಲಿ ಕೋವಿಡ್ ನ ಭೀತಿ ಹೆಚ್ಚಾಗಿದೆ. ಮತ್ತೆ ಲಾಕ್ ಡೌನ್ ಬಗ್ಗೆ ಸರ್ಕಾರ ಪದೇ, ಪದೇ ಮಾತನಾಡುತ್ತಿದ್ದು, ಜನರಲ್ಲಿ, ಅದರಲ್ಲೂ ವಲಸೆ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ.

ಈ ಹಿನ್ನಲೆಯಲ್ಲಿ ಮತ್ತೆ ವಲಸೆ ಕಾರ್ಮಿಕರು ಮಹಾನಗರಗಳಿಂದ ಊರಿಗೆ ಗುಳೆ ಹೊರಟಿರುವ ದೃಶ್ಯಗಳು ಕಂಡು ಬಂದಿರುವುದನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಮುಂಬೈ-ಆಗ್ರಾ ಮಾರ್ಗಕ್ಕೆ ಸಂಪರ್ಕ ಹೊಂದಿದ ಬೈಪಾಸ್ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ವಲಸೆ ಕಾರ್ಮಿಕರ ಮೋಟಾರ್ ಸೈಕಲ್‌ ಗಳು, ಕಪ್ಪು-ಹಳದಿ ಮಿನಿ ಟ್ರಕ್‌ ಗಳು ಮತ್ತು ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ರಾಷ್ಟ್ರೀಯ ಸುದ್ದಿ ಸಂಸ‍್ಥೆಗಳು ವರದಿ ಮಾಡಿವೆ.

ಮುಂಬೈನಲ್ಲಿ ವೈರಸ್ ಏಕಾಏಕಿ ಮತ್ತೊಮ್ಮೆ ತೀವ್ರ ಮಟ್ಟಕ್ಕೆ ತಿರುಗಿದೆ. ಲಾಕ್‌ ಡೌನ್ ಮತ್ತೆ ಆಗಬಹುದು ಮತ್ತು ಅದು ಕಳೆದ ವರ್ಷದಂತೆ ನಿರುದ್ಯೋಗ ಸೃಷ್ಟಿಯಾಗಬಹುದು ಎಂಬ ಭೀತಿ ಹುಟ್ಟುತ್ತಿದೆ. ಆದ್ದರಿಂದ ನಾವು ಮನೆಗೆ ಮರಳಲು ನಿರ್ಧರಿಸಿದ್ದೇವೆ” ಎಂದು ರಾಮ್‌ ಶರಣ್ ಸಿಂಗ್ ಎಂಬ 40 ರ ಪ್ರಾಯದ ವಲಸೆ ಕಾರ್ಮಿಕರೊಬ್ಬರು, ಆಟೋರಿಕ್ಷಾದಲ್ಲಿ ಉತ್ತರ ಪ್ರದೇಶದ ಬಲ್ಲಿಯಾಕ್ಕೆ ಹಿಂತಿರುಗುವಾಗ ಸುದ್ದಿ ಸಂಸ್ಥೆ ಜೀ ನ್ಯೂಸ್(ZEE News)ಗೆ ಪ್ರತಿಕ್ರಿಯಿಸಿದ್ದಾರೆ.

Advertisement

ಇದೇ ರೀತಿ, ಬಿಹಾರದ ಭೋಜ್‌ ಪುರ ಜಿಲ್ಲೆಯಲ್ಲಿನ ಹಳ್ಳಿಗೆ ಮರಳುತ್ತಿದ್ದ ಮತ್ತೊಬ್ಬ ವಲಸೆ ಕಾರ್ಮಿಕ   ಮೊಹಮ್ಮದ್ ಶಾದಾಬ್, ನಾನೊಂದು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದೆ. ಪರಿಸ್ಥಿತಿ ಸಹಜವಾದರೇ ಮತ್ತೆ ಇಲ್ಲಿಗೆ ಬರುತ್ತೇನೆ. ಇಲ್ಲವಾದರೇ, ನನ್ನ ಊರಿನಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು, ಕಳೆದ ವರ್ಷ, ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಕೋವಿಡ್ ನ ಕಾರಣದಿಂದಾಗಿ ಲಾಕ್‌ ಡೌನ್‌ ನಿಂದ ಜನರು ತಮ್ಮ ಊರಿಗೆ ಮರಳಿ ಹೋಗುವುದಕ್ಕೆ ಹರ ಸಾಹಸ ಪಟ್ಟಿರುವುದಕ್ಕೆ ಈ ಮಾರ್ಗ ಸಾಕ್ಷಿಯಾಗಿತ್ತು.  ಪೂರ್ವ ಮತ್ತು ಉತ್ತರ ರಾಜ್ಯಗಳಿಗೆ ಅಸಹಾಯಕ ಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಗುಳೆ ಹೊರಟಿರುವುದನ್ನು ಇಡೀ ಭಾರತ ಕಂಡಿತ್ತು.

ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ನಿತ್ಯ ನಿರಂತರವಾಗಿ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವ ಕಾರಣದಿಂದಾಗಿ ಈಗಾಗಲೇ ಮಹಾರಾಷ್ಟ್ರ ಸರ್ಕಾರ ವೀಕೆಂಡ್ ಲಾಕ್ ಡೌನ್ ಹಾಗೂ ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ಇನ್ನು, ಇತ್ತೀಚೆಗಷ್ಟೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಲಾಕ್ ಡೌನ್ ಮಾಡದಿದ್ದರೇ, ಸೋಂಕು ನಿವಾರಣೆ ಮಾಡಲು ಸಾಧ್ಯವಿಲ್ಲ ಎಂದಿರುವುದು ಜನರಲ್ಲಿ ಭವಿಷ್ಯದ ಬಗ್ಗೆ ಚಿಂತೆ ಹುಟ್ಟಿಸಿದೆ.

ಒಟ್ಟಿನಲ್ಲಿ, ಕಳೆದ ವರ್ಷದಂತೆಯೇ, ಈ ಬಾರಿಯೂ ಲಾಕ್ ಡೌನ್ ಹಾಗೂ ನಿರುದ್ಯೋಗದ ಭಯದಿಂದ ಮಧ್ಯ ಪ್ರದೇಶ, ಬಿಹಾರ್, ಉತ್ತರ ಪ್ರದೇಶದ ಕೆಲವು ವಲಸೆ ಕಾರ್ಮಿಕರು ಗುಳೆ ಹೊರಟಿರುವುದು ಮತ್ತೆ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next