Advertisement

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

08:49 PM Dec 24, 2024 | Team Udayavani |

ನವದೆಹಲಿ: ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ, ಉಗ್ರರಿಗೆ ಬೆಂಬಲ ನೀಡುವ ಮಾಜಿ ಸಚಿವನೊಬ್ಬನನ್ನು ಬಿಡುಗಡೆ ಮಾಡುವ ಮೂಲಕ ಮತ್ತೊಂದು ಕ್ಯಾತೆ ತೆಗೆದಿದೆ.

Advertisement

ಪಾಕ್‌ ಆಗ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ನೀಡುವ ಮೂಲಕ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗಿದ್ದ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ)ದ ಮಾಜಿ ನಾಯಕ ಅಬ್ದಸ್‌ ಸಲಾಮ್‌ ಪಿಂಟು, ಇದೀಗ ಬಿಡುಗಡೆಯಾಗಿದ್ದಾನೆ.

17 ವರ್ಷದ ಬಳಿಕ ಈತನನ್ನು ಬಿಡುಗಡೆ ಮಾಡಲಾಗಿದ್ದು, ಭಾರತದಲ್ಲಿ ಮತ್ತಷ್ಟು ಉಗ್ರ ಕೃತ್ಯ ನಡೆಸಲು ಈತ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಉಗ್ರರಿಗೆ ಹಣಕಾಸು ನೆರವು:
ಸಲಾಮ್‌ ಪಿಂಟು ಪಾಕ್‌ ಆಗ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಅದಕ್ಕಾಗಿ ಹಣಕಾಸಿನ ನೆರವು ಒದಗಿಸುತ್ತಿದ್ದ. ಪಾಕಿಸ್ತಾನ ಪ್ರೇರಿತ ಹರ್ಕತ್‌ ಉಲ್‌ ಜಿಹಾದ್‌ ಅಲ್‌ ಇಸ್ಲಾಮಿ (ಹುಜಿ) ಸಂಘಟನೆಯ ಉಗ್ರರಿಗೆ ತರಬೇತಿಯನ್ನು ನೀಡಿ, ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದ ಎನ್ನಲಾಗಿದೆ.

ಹುಜಿ ಸಂಘಟನೆಯು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇಸ್ರೇಲ್‌, ನ್ಯೂಜಿಲೆಂಡ್‌, ಬ್ರಿಟನ್‌ ಮತ್ತು ಅಮೆರಿಕಗಳಲ್ಲಿ ಚಟುವಟಿಕೆ ನಡೆಸುತ್ತಿದೆ.

Advertisement

ಹಸೀನಾ ವಿರೋಧಿಗಳಿಗೆ ಬಿಡುಗಡೆ:
ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತು ಭಾರತ ವಿರೋಧಿ ನಿಲುವನ್ನು ಹೊಂದಿರುವ ನಾಯಕರನ್ನು ಬಾಂಗ್ಲಾ ಮಧ್ಯಂತರ ಸರ್ಕಾರ ಬಿಡುಗಡೆ ಮಾಡುತ್ತಿದೆ. ಕಳೆದ ವಾರವಷ್ಟೇ ಬಿಎನ್‌ಪಿಯ ಮತ್ತೋರ್ವ ನಾಯಕ ಲುತೊಜಾಮನ್‌ ಬಾಬರ್‌ನನ್ನು ಬಿಡುಗಡೆ ಮಾಡಲಾಗಿತ್ತು.

ಭಾರತಕ್ಕೆ ಮತ್ತಷ್ಟು ಆತಂಕ:
ಭಾರತ ವಿರೋಧಿ ನಿಲುವನ್ನು ಹೊಂದಿರುವ ಹಾಗೂ ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿರುವ ನಾಯಕರನ್ನು ಬಿಡುಗಡೆ ಮಾಡುವ ಮೂಲಕ ಬಾಂಗ್ಲಾದೇಶ ಭಾರತಕ್ಕೆ ಆತಂಕವನ್ನು ತಂದೊಡ್ಡುತ್ತಿದೆ. ಬಾಂಗ್ಲಾದೇಶದ ಬಂದರುಗಳನ್ನು ಭಾರತ ಪ್ರವೇಶಿಸದಂತೆ ತಡೆಯುವ ಯೋಜನೆಗಳನ್ನು ರೂಪಿಸುತ್ತಿರುವ ಬಾಂಗ್ಲಾ ಈಗ ಉಗ್ರರನ್ನು ಬಿಡುಗಡೆ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next