ಪೇಟನ್ : ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ ಮೆಲೆ ದ್ವೇಷಾಪರಾಧ ನಡೆದಿರುವುದು ವರದಿಯಾಗಿದೆ. ದಕ್ಷಿಣ ಕೊಲರಾಡೋದಲ್ಲಿನ ಈ ಭಾರತೀಯನ ಮನೆಯ ಮೇಲೆ ನಾಯಿ ಹೇಲು, ಕೊಳೆತ ಮೊಟ್ಟೆ ಇತ್ಯಾದಿ ಅಸಹ್ಯ ತ್ಯಾಜ್ಯಗಳನ್ನು ಎಸೆಯಲಾಗಿದೆ ಮಾತ್ರವಲ್ಲ ಜನಾಂಗೀಯ ನಿಂದನೆ ಹಾಗೂ ಬೈಗುಳಗಳನ್ನು ಬರೆಯಲಾದ ಕಾಗದಗಳಲ್ಲಿ ಈ ತ್ಯಾಜ್ಯಗಳನ್ನು ತುಂಬಿಸಿ ಎಸೆಯಲಾಗಿರುವುದು ಕಂಡುಬಂದಿದೆ.
ಕಳೆದ ಫೆ.6ರಂದು ಬೆಳಕಿಗೆ ಬಂದಿರುವ ಈ ದ್ವೇಷಾಪರಾಧ ಪ್ರಕರಣದ ತನಿಖೆಯನ್ನು ಎಫ್ ಬಿ ಐ ಇದೀಗ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಇದು ಪುಂಡ ಜನಸಮೂಹವೊಂದು ಎಸಗಿರುವ ದುಷ್ಕೃತ್ಯವೆಂದು ಅಧಿಕಾರಿಗಳು ತಿಳಿದಿದ್ದಾರೆ.
“ನಮ್ಮ ಮನೆಯ ಬಾಗಿಲಿಗೆ, ಕಿಟಕಿಗಳಿಗೆ, ಕಾರಿಗೆ ಸುಮಾರು 50 ಪೇಪರ್‌ಗಳಲ್ಲಿ ಸುತ್ತಿದ ತ್ಯಾಜ್ಯಗಳನ್ನು ಎಸೆಯಲಾಗಿದೆ. ಕನಿಷ್ಠ 40 ಮೊಟ್ಟೆಗಳನ್ನು ನಮ್ಮ ಮನೆಯ ಗೋಡೆಯ ಮೇಲೆ, ಸೀಲಿಂಗ್‌ಗೆ ಮಾತ್ರವಲ್ಲದೆ ಹೊರಗೆ ಎಲ್ಲೆಂದರಲ್ಲಿ ಎಸೆಯಲಾಗಿದೆ; ನೀವು ಕಂದು ಬಣ್ಣದ ಭಾರತೀಯರು ಇಲ್ಲಿ ಇರಕೂಡದು ಎಂಬ ನಿಂದನಾತ್ಮಕ ಬರಹವಿರುವ ಕಾಗದಗಳಲ್ಲಿ ಅಸಹ್ಯ ತ್ಯಾಜ್ಯಗಳನ್ನು ಉಂಡೆಕಟ್ಟಿ ಎಸೆಯಲಾಗಿದೆ’ ಎಂದು ಮನೆ ಮಾಲಕನಾಗಿರುವ ಭಾರತೀಯ ವ್ಯಕ್ತಿ ಹೇಳಿರುವುದನ್ನು ಉಲ್ಲೇಖೀಸಿ ಸಿಬಿಎಸ್ ಡೆನ್ವರ್ ವರದಿ ಮಾಡಿದೆ.
“ಈ ದ್ವೇಷಾಪರಾಧ ಘಟಿಸಿದ ಬೆನ್ನಿಗೇ ನಮ್ಮ ನೆರೆಹೊರೆಯವರು ಒಗ್ಗೂಡಿ ಮುಂದೆ ಬಂದು, ನಮ್ಮ ಮೇಲೆ ಅನುಕಂಪ ತೋರಿ ನಮ್ಮ ನೆರವಿಗೆ ನಿಂತು, ನಮ್ಮ ಮನೆಯನ್ನು ಸ್ವತ್ಛಗೊಳಿಸಿದ್ದಾರೆ’ ಎಂದು ದ್ವೇಷಾಪರಾಧದ ಸಂತ್ರಸ್ತ ಭಾರತೀಯ ಹೇಳಿದ್ದಾರೆ. ಎಲ್ಲ ಅಮೆರಿಕನ್ನರು ಕೆಟ್ಟವರಲ್ಲ; ಎಷ್ಟೋ ಮಂದಿ ಒಳ್ಳೆಯ ಅಮೆರಿಕನ್ನರಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿರುವುದು ಸಮಾಧಾನದ ವಿಷಯವಾಗಿದೆ ಎಂದವರು ಹೇಳಿದ್ದಾರೆ.
ಕಳೆದ ಬುಧವಾರ ರಾತ್ರಿ ಕನ್ಸಾಸ್‌ನ ಬಾರ್ ಒಂದರಲ್ಲಿ ಅಮೆರಿಕ ನೌಕಾಪಡೆಯ ಮಾಜಿ ಯೋಧ ಆ್ಯಡಮ್ ಡಬ್ಲ್ಯು ಪ್ಯುರಿಂಟಾನ್ ಎಂಬಾತ ಜನಾಂಗೀಯ ದ್ವೇಷದ ಪರಾಕಾಷ್ಠೆಯಲ್ಲಿ “ನನ್ನ ದೇಶದಿಂದ ತೊಲಗಿ’ ಎಂದು ಬೊಬ್ಬಿಡುತ್ತಾ ಹೈದರಾಬಾದಿನ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲಾ ಎಂಬವರನ್ನು ಗುಂಡಿಕ್ಕಿ ಕೊಂದು ಇನ್ನೋರ್ವ ಟೆಕ್ಕಿ ಆಲೋಕ್ ಮದಸಾನಿ ಅವರನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.