ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 14 ಜನರಿಗೆ ಕೋವಿಡ್-19 ಸೋಂಕು ತಾಗಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.
ಇಂದು ಮಧ್ಯಾಹ್ನದ ವರೆಗೆ ರಾಜ್ಯದಲ್ಲಿ ಹತ್ತು ಕೋವಿಡ್ ಸೋಂಕು ಪ್ರಕರಣ ದೃಢವಾಗಿತ್ತು. ರಾಜ್ಯ ಆರೋಗ್ಯ ಇಲಾಖೆ ಸಂಜೆ ಬಿಡುಗಡೆ ಮಾಡಿದ ವರದಿಯಲ್ಲಿ ಮತ್ತೆ ನಾಲ್ವರಿಗೆ ಸೋಂಕು ತಾಗಿರುವ ಬಗ್ಗೆ ವರದಿಯಾಗಿದೆ. ಈ ಕಾರಣದಿಂದ ಕಳೆದ 24 ಗಂಟೆಯಲ್ಲಿ 14 ಜನರಿಗೆ ಕೋವಿಡ್-19 ಸೋಂಕು ತಾಗಿದೆ.
ಬೆಂಗಳೂರು ನಗರದಲ್ಲಿ ಎರಡು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಂಧ್ರ ಪ್ರದೇಶ ರಾಜ್ಯದ ಅನಂತಪುರ ಮೂಲದ 55 ವರ್ಷದ ಮಹಿಳೆಗೆ ಸೋಂಕು ತಾಗಿದೆ. ಬೆಂಗಳೂರಿನ 26 ವರ್ಷದ ಯುವಕನಿಗೂ ಸೋಂಕು ತಾಗಿದೆ. ಇವರಿಬ್ಬರಿಗೂ ಸೋಂಕಿತ ಸಂಖ್ಯೆ 796ರ ಸಂಪರ್ಕದಿಂದ ಸೋಂಕು ತಾಗಿರುವುದು ದೃಢವಾಗಿದೆ.
ಮುಂಬೈ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿರುವ ಇಬ್ಬರಿಗೆ ಸೋಂಕು ದೃಢವಾಗಿದೆ. ಹಾಸನದ 30 ವರ್ಷದ ಮಹಿಳೆ ಮತ್ತು ಮಂಡ್ಯದ 38 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಇವರಲ್ಲಿ 426 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 31 ಮಂದಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದರೆ, ಓರ್ವ ಕೋವಿಡ್-19 ಅಲ್ಲದ ಅನ್ಯ ಕಾರಣದಿಂದ ಮರಣ ಹೊಂದಿದ್ದಾರೆ.