ಕನ್ನಡದಲ್ಲಿ ಈಗಾಗಲೇ ಹಲವು ಶರಣರ ಹಾಗೂ ಪವಾಡ ಪುರುಷರ ಕುರಿತು ಅನೇಕ ಚಿತ್ರಗಳು ಬಿಡುಗಡೆಯಾಗಿವೆ. ಈಗ “ಶ್ರೀ ಮೌನೇಶ್ವರ ಮಹಾತ್ಮೆ’ ಚಿತ್ರ ಕೂಡ ಬಿಡುಗಡೆಗೆ ಸಿದ್ಧಗೊಂಡಿದೆ. ಭೀಮರಾಜ್ ವಜ್ರದ್ ನಿರ್ದೇಶಿಸಿರುವ ಈ ಚಿತ್ರ ಜನವರಿ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ತಮ್ಮ ಚಿತ್ರದ ಕುರಿತು ತಂಡದ ಜೊತೆ ಮಾತಿಗೆ ಕುಳಿತ ನಿರ್ದೇಶಕ ಭೀಮರಾಜ್ ವಜ್ರದ್ ಚಿತ್ರದ ಬಗ್ಗೆ ಹೇಳುತ್ತಾ ಹೋದರು. “ಇದು ಉತ್ತರ ಕರ್ನಾಟಕದ ಪವಾಡ ಪುರುಷ ಮೌನೇಶ್ವರ ಅವರ ಕುರಿತಾದ ಚಿತ್ರ. ಉತ್ತರ ಕರ್ನಾಟಕ ಭಾಗದ ಮಂದಿಗೆ ಮಾತ್ರ ಈ ಮೌನೇಶ್ವರ ಶರಣರ ಬಗ್ಗೆ ಗೊತ್ತಿದೆ. ಆರಂಭದ ದಿನಗಳಲ್ಲಿ ನಮಗೆ ಸಿನಿಮಾ ಮಾಡುವ ಯಾವುದೇ ಯೋಚನೆ ಇರಲಿಲ್ಲ. ಶ್ರೀಗಳ ಮಹಾತ್ಮೆ ಕುರಿತು ಆಡಿಯೋ ಆಲ್ಬಂ ಮಾಡಿದ್ದೆವು. ಕೊನೆಗೆ ಭಕ್ತಿಗೀತೆಗಳ ಜೊತೆಗೆ ಯಾಕೆ ಶ್ರೀಗಳ ಕುರಿತಾದ ಚಿತ್ರ ಮಾಡಬಾರದು ಅಂತ ಯೋಚಿಸಿ, ಚಿತ್ರ ಮಾಡಿದ್ದೇವೆ. ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣಗೊಂಡಿದೆ. ಯಾದಗಿರಿ ಜಿಲ್ಲೆಯ ಚಿಂಚಣಿ ಗ್ರಾಮದಲ್ಲಿ ಹಲವು ಪವಾಡಗಳು ನಡೆದಿವೆ. ಅವೆಲ್ಲವನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಶರಣರು 16 ನೇ ಶತಮಾನದ ಆಸುಪಾಸಿನಲ್ಲಿ ಇದ್ದರು ಎಂಬ ಮಾತಿದೆ. ಅವರ 12 ಪವಾಡಗಳನ್ನು ಮಾತ್ರ ಇಲ್ಲಿ ಹೇಳಲು ಹೊರಟಿದ್ದೇವೆ. ಇಲ್ಲಿ ಸಂದೇಶ ಕೂಡ ಇದೆ. ಶರಣರ ಸಂಭಾಷಣೆ ಮೂಲಕ ಸಣ್ಣ ಬದಲಾವಣೆ ತರುವ ಪ್ರಯತ್ನ ಕೂಡ ಆಗುತ್ತೆ ಎಂಬ ನಂಬಿಕೆ ನಮಗಿದೆ’ ಅಂದರು ನಿರ್ದೇಶಕರು.
ಶ್ರೀ ಮೌನೇಶ್ವರ ಅವರ ಪಾತ್ರ ನಿರ್ವಹಿಸಿರುವ ಮಹೇಶ್ ಕುಮಾರ್ ಅವರಿಗೆ, ಪಾತ್ರ ಸಿಕ್ಕಿದ್ದೇ ಅದೃಷ್ಟವಂತೆ. ಬಹುತೇಕ ಹೊಸಬರೇ ಸೇರಿ ಚಿತ್ರ ಮಾಡಿದ್ದೇವೆ. ಉತ್ತರ ಕರ್ನಾಟಕದ ಶ್ರೀಗಳ ಚರಿತ್ರೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ನಮ್ಮದ್ದಾಗಿದೆ. ನಿಮ್ಮೆಲ್ಲರ ಸಹಕಾರ ಇರಬೇಕು ಎಂದರು ಅವರು.
ಕಲಾವಿದ ಶಿವಕುಮಾರ ಆರಾಧ್ಯ ಅವರು, ಚಿತ್ರರಂಗದಲ್ಲಿ ಸುಮಾರು 35 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ಹಲವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರಿಗೊಂದು ವಿಶೇಷ ಪಾತ್ರ ಸಿಕ್ಕಿದೆಯಂತೆ. ಶ್ರೀ ಮೌನೇಶ್ವರ ಮಹಾತ್ಮೆ ಬಗ್ಗೆ ಗೊತ್ತಿಲ್ಲದವರಿಗೆ ಈ ಚಿತ್ರ ಅರಿವು ಮೂಡಿಸಲಿದೆ ಎಂಬುದು ಅವರ ಮಾತು.
ಮಾಸ್ಟರ್ ಚಿನ್ಮಯ್ ಕೂಡ ನಟಿಸಿದ್ದು, ಬಾಲ ಮೌನೇಶ್ವರರಾಗಿ ಕಾಣಿಸಿಕೊಂಡಿದ್ದಾಗಿ ಹೇಳಿಕೊಂಡರು. “ಉತ್ತರ ಕರ್ನಾಟಕದ ಶ್ರೀಗಳ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಪಾತ್ರ ಮಾಡುವಾಗ, ಅವರ ಪವಾಡಗಳ ಬಗ್ಗೆ ತಿಳಿದುಕೊಂಡೆ. ಅಂತಹ ಪಾತ್ರ ಮಾಡಲು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದೇನೆ’ ಎಂದು ಹೇಳಿಕೊಂಡರು ಚಿನ್ಮಯ್.
ಚಿತ್ರದಲ್ಲಿ ಮಿಮಿಕ್ರಿ ರಾಜು ಕೂಡ ಹಾಸ್ಯ ಪಾತ್ರ ಮಾಡಿದ್ದಾರೆ. ಅವರು ಈ ಹಿಂದೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ, ನಿರ್ದೇಶಕರು ಕರೆದು ಹಾಸ್ಯ ಪಾತ್ರ ಕೊಟ್ಟಿದ್ದಾಗಿ ಹೇಳಿಕೊಂಡರು. ಚಿತ್ರವನ್ನು ಚಂದ್ರಶೇಖರ್ ವಜ್ರದ್ ನಿರ್ಮಾಣ ಮಾಡಿದ್ದಾರೆ. ಜಯಪ್ರಕಾಶ್ ಛಾಯಾಗ್ರಹಣ ಮಾಡಿದರೆ, ಹರ್ಷ ಕೋಗೋಡ್ ಅವರು ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎನ್.ಟಿ.ರಾಮಸ್ವಾಮಿ, ಸ್ಪಂದನಾ, ಮಾ.ವಿಜಯ್, ಎಂ.ಎಸ್.ಉಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ.