ಮುಂಬಯಿ: ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಂಡೊಡನೆ ಭಕ್ತರ ಮನದಲ್ಲಿ ಭಕ್ತಿಯ ಪ್ರವಾಹವೇ ಹರಿದು ಬರುತ್ತದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ದೀನವಾಗಿ ಕೂಗುವ ಭಕ್ತರ ಕರೆಗೆ ಅಯ್ಯಪ್ಪ ಸ್ವಾಮಿ ಕವಿಗೊಡದೆ ಇರಲಾರ. ಅಯ್ಯಪ್ಪ ವ್ರತಧಾರಿಗಳಾಗಿ ಸ್ವಾಮಿಯ ಸೇವೆ ಮಾಡಿದ್ದಕ್ಕೆ ಸಾರ್ಥಕವಾಯಿತು ಎಂಬ ಆತ್ಮತೃಪ್ತಿ ಮನದಲ್ಲಿ ಮೂಡುತ್ತದೆ. ಕಲಿಯುಗಕ್ಕೆ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರವಾಗಿರುವ ಅಯ್ಯಪ್ಪ ಸ್ವಾಮಿ ನಂಬಿದವರನ್ನು ಎಂದಿಗೂ ಕೈ ಬಿಟ್ಟಿಲ್ಲ. ಅಭಯ ಹಸ್ತ, ಮಂದಹಾಸದ ಮುಖಾರವಿಂದ, ದಿವ್ಯ ಜ್ಯೋತಿಯ ದರ್ಶನ ಮಾತ್ರದಿಂದ ಕಲ್ಲು-ಮುಳ್ಳಿನ ದಾರಿಯ ಕಠಿನ ಶ್ರಮವನ್ನೆಲ್ಲ ಇಂಗಿಸಿ, ಕೋಟಿ ಭಕ್ತರ ಹೃದಯಕ್ಕೆ ಸಿಂಚನ ನೀಡುವ ಲೋಕ ಚುಂಬಕ ವ್ಯಕ್ತಿತ್ವ ಶ್ರೀ ಅಯ್ಯಪ್ಪನ್ನದ್ದಾಗಿದೆ ಎಂದು ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್‌ನ ಶ್ರೀನಿವಾಸ ಗುರುಸ್ವಾಮಿ ತಿಳಿಸಿದರು.
ಭಾಯಂದರ್ ಪಶ್ಚಿಮದ ರೈಲ್ವೇ ರಸ್ತೆಯ ಸಂತೋಷ್ ಟಾಕೀಸ್ ಸಮೀಪದಲ್ಲಿರುವ ತ್ರಿಮೂರ್ತಿ ಹೊಟೇಲ್‌ನ ಮಾಲಕ ದಿ| ಸೋಮಪ್ಪ ಕೋಟ್ಯಾನ್ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್‌ನ 27ನೇ ವರ್ಷದ ವಾರ್ಷಿಕ ಮಹಾಪೂಜೆ ಜ. 14ರ ಮರಕ ಸಂಕ್ರಮಣದಂದು ಜರಗಿತು.
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀನಿವಾಸ್ ಗುರುಸ್ವಾಮಿ ಅವರು, ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಯ ಅನುಗ್ರಹ ನೆರೆದ ಎಲ್ಲ ಭಕ್ತರಿಗೆ ಲಭಿಸಲಿ. ಸ್ವಾಮಿಯ ಕೃಪೆಯಿಂದ ಸರ್ವರ ಕಷ್ಟಗಳು ಪರಿಹಾರಗೊಂಡು ಶಾಂತಿ, ನೆಮ್ಮದಿ ಲಭಿಸಲಿ, ಮಾನಸಿಕ, ದೈಹಿಕ ಕ್ಷಮತೆಗೆ ಅಯ್ಯಪ್ಪ ವ್ರತ ಪ್ರರಣೆಯಾಗಿದೆ ಎಂದು ತಿಳಿಸಿ ಶುಭ ಹಾರೈಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ ಮಹಾಗಣಪತಿ ಹೋಮ, ಪೂರ್ವಾಹ್ನ 10ರಿಂದ ಲಕ್ಷ್ಮೀನಾರಾಯಣ ಭಜನ ಮಂಡಳಿ ಮೀರಾರೋಡ್ ಹಾಗೂ ಶಿಬಿರದ ಮಹಿಳಾ ಮಂಡಳದವರಿಂದ ಭಜನೆ ಕಾರ್ಯಕ್ರಮ, ಬಳಿಕ ಅಲಂಕಾರ ಪೂಜೆ, ಪಡಿಪೂಜೆ, ಪಲ್ಲಪೂಜೆ, ಮಹಾಮಂಗಳಾರತಿ ನೆರವೇರಿತು. ಬಳಿಕ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ. ಅಧ್ಯಕ್ಷ ಸಚಿನ್ ಕೋಟ್ಯಾನ್, ಉಪಾಧ್ಯಕ್ಷ ರಮೇಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧೀರ್ ಪುತ್ರನ್, ಜತೆ ಕಾರ್ಯದರ್ಶಿ ವಿವೇಕಾನಂದ ಹೆಗ್ಡೆ, ಕೋಶಾಧಿಕಾರಿ ಸುಂದರ ಶೆಟ್ಟಿ, ಜತೆ ಕೋಶಾಧಿಕಾರಿ ಕರುಣಾಕರ ಪೂಜಾರಿ, ಸಮಿತಿ ಸದಸ್ಯರು, ಗುರುಸ್ವಾಮಿಗಳು ಮತ್ತು ಮಹಿಳಾ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.