Advertisement
ಮೆಜೆಸ್ಟಿಕ್ ಎಂದೇ ಖ್ಯಾತಿ ಪಡೆದಿರುವ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೋ ಸ್ಟೇಶನ್, ರೈಲು ನಿಲ್ದಾಣ, ಉಪ್ಪಾರ ಪೇಟೆ, ಚಿಕ್ಕಪೇಟೆ, ಕಾಟನ್‌ಪೇಟೆ, ಅವೆನ್ಯೂ ರಸ್ತೆ, ಆನಂದರಾವ್ ವೃತ್ತಗಳು ಗಾಂಧಿನಗರದ ಅವಿಭಾಜ್ಯ ಅಂಗಗಳು. ಹೆಚ್ಚು ಜನಸಂಧಣಿಯೇ ಈ ಕ್ಷೇತ್ರದ ಸೊಬಗು ಮತ್ತು ಸಮಸ್ಯೆ!
Related Articles
Advertisement
ಹಿಂದೆ ಆಹಾರ ಸಚಿವರಾಗಿದ್ದ, ಈಗ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಕ್ಷೇತ್ರದ ಶಾಸಕರಾಗಿದ್ದು, ಪಕ್ಷದಲ್ಲಿ ಜವಾಬ್ದಾರಿ ವಹಿಸಿಕೊಂಡ ನಂತರ ಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಿಲ್ಲ ಎಂಬ ಆರೋಪವಿದೆ. ಈ ನಡುವೆ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ದಿನೇಶ್ ಗುಂಡೂರಾವ್‌ರ ವಿಜಯ ಯಾತ್ರೆಗೆ ಬ್ರೇಕ್ ಹಾಕಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.
ಇದರ ಭಾಗವಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗಾಂಧಿನಗರ ಕ್ಷೇತ್ರದ ಲಕ್ಷ್ಮಣಪುರಿ ಕೊಳೆಗೇರಿಯಲ್ಲಿ ಒಂದು ದಿನ ರಾತ್ರಿ ವಾಸ್ತವ್ಯ ಮಾಡಿ ಗಮನ ಸೆಳೆದಿದ್ದಾರೆ. ಓಬಿಸಿ ವರ್ಗದ ಮತದಾರರೇ ನಿರ್ಣಾಯಕರಾಗಿದ್ದಾರೆ. ಶೇ.80 ರಷ್ಟು ಹಿಂದುಳಿದವರಿದ್ದು, ಒಕ್ಕಲಿಗರು,ಲಿಂಗಾಯತರು,ಬ್ರಾಹ್ಮಣರು 5ರಿಂದ 6 ಸಾವಿರ ದಷ್ಟು ಇದ್ದಾರೆ. ಸುಮಾರು 50 ಸಾವಿರ ರಾಜಸ್ಥಾನ ಮೂಲದವರಿದ್ದಾರೆ.ನೇಕಾರರು 25 ಸಾವಿರ ದಷ್ಟಿದ್ದು ಒಟ್ಟು 2.23 ಲಕ್ಷ ಮತದಾರರನ್ನು ಗಾಂಧಿನಗರ ಹೊಂದಿದೆ.
ಕ್ಷೇತ್ರದ ಬೆಸ್ಟ್ ಏನು?: ಏಳೂ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಕಿನೋ ಟಾಕೀಸ್ ಬಳಿ ಮಳೆ ನೀರು ನಿಲ್ಲದಂತೆ ಸುಸಜ್ಜಿತ ಒಳಚರಂಡಿ ಸೌಲಭ್ಯ ಕಲ್ಪಿಸಿ ದಶಕದ ಸಮಸ್ಯೆಗೆ ಪರಿಹರಿಸಿರುವುದು, ನೃಪತುಂಗ ರಸ್ತೆ ಸೇರಿ ಹಲವೆಡೆ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ, ಫ್ರೀಡಂ ಪಾರ್ಕ್ ಸಮಗ್ರ ಅಭಿವೃದ್ಧಿ, ಓಕಳಿಪುರ ಬಳಿ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ, ಕೊಳೆಗೇರಿ ನಿವಾಸಿಗಳಿಗೆ 55 ಕೋಟಿ ರೂ. ವೆಚ್ಚದಲ್ಲಿ 933 ಮನೆ ನಿರ್ಮಾಣಕ್ಕೆ ಚಾಲನೆ ನೀಡುರುವುದು ಕ್ಷೇತ್ರದ ಬೆಸ್ಟ್.
ಕ್ಷೇತ್ರದ ದೊಡ್ಡ ಸಮಸ್ಯೆ?: ಕ್ಷೇತ್ರದ ದೊಡ್ಡ ಸಮಸ್ಯೆಯಾಗಿರುವ ಕಿರಿದಾದ ರಸ್ತೆಗಳಲ್ಲಿನ ಟ್ರಾಫಿಕ್ ಕಿರಿಕಿರಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ವಾಹನಗಳ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಫ್ರೀಡಂ ಪಾರ್ಕ್ ಬಳಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಒಂದು ಹಂತವನ್ನು ಸಿಎಂ ಉದ್ಘಾಟಿಸಿದ್ದು, ಬಾಕಿ ಕಾಮಗಾರಿ ಪೂರ್ಣಗೊಂಡಿಲ್ಲ. ನೆಹರೂ ಪಾರ್ಕ್ ಬಳಿ ಕ್ರೀಡಾ ಸಂಕೀರ್ಣ ಕಾಮಗಾರಿ ಅಪೂರ್ಣಗೊಂಢಿದ್ದು, ಕಸ ವಿಲೇವಾರಿ ತೊಂದರೆಯೂ ಇದೆ.
ಹಿಂದಿನ ಚುನಾವಣೆ ಫಲಿತಾಂಶ-ದಿನೇಶ್ ಗುಂಡೂರಾವ್ (ಕಾಂಗ್ರೆಸ್) 54,968
-ಪಿ.ಸಿ ಮೋಹನ್ (ಬಿಜೆಪಿ) 32,361
-ಸುಭಾಷ್ ಭರಣಿ (ಜೆಡಿಎಸ್) 7,418 ಟಿಕೆಟ್ ಆಕಾಂಕ್ಷಿಗಳು
-ಕಾಂಗ್ರೆಸ್- ದಿನೇಶ್ ಗುಂಡೂರಾವ್
-ಬಿಜೆಪಿಯಿಂದ – ಶಿವಕುಮಾರ್, ಸಪ್ತಗಿರಿ ಗೌಡ
-ಜೆಡಿಎಸ್- ಗೋವಿಂದರಾಜ್ (ಟಿಕೆಟ್ ಘೋಷಣೆಯಾಗಿದೆ) ಕ್ಷೇತ್ರದ ಮಹಿಮೆ: ಚೋಳರ ಕಾಲದದ್ದು ಎನ್ನಲಾದ ಸುಮಾರು 800 ವರ್ಷಗಳಷ್ಟು ಹಳೆಯದಾಗಿರುವ ಕಾಶಿ ವಿಶ್ವನಾಥ ದೇವಾಲಯ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಾಗೇ ಪ್ರಸಿದ್ಧ ಅಣ್ಣಮ್ಮ ದೇವಸ್ಥಾನ, ಚೌಡೇಶ್ವರಿ ದೇವಾಲಯ, ರಂಗನಾಥ ಸ್ವಾಮಿ, ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಗಳು ಪ್ರಸಿದ್ಧಿ ಪಡೆದಿವೆ. ಚಿಕ್ಕಪೇಟೆ, ಅವೆನ್ಯೂ ರಸ್ತೆ, ಗಾಂಧಿನಗರ ಹಳೆಯ ವಾಣಿಜ್ಯ ತಾಣಗಳಾದರೆ, ಮಂತ್ರಿಮಾಲ್ ಆಧುನಿಕ ವ್ಯಾಪಾರ ವಹಿವಾಟು ಕೇಂದ್ರವಾಗಿದೆ. ಜನ ದನಿ
ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಕೆಲವೆಡೆ ನಡೆಯುತ್ತಿರುವ ರಸ್ತೆ ಕಾಮಗಾರಿ ವಿಳಂಬವಾಗಿದೆ. ಶ್ರೀರಾಮಪುರ ಸೇರಿದಂತೆ ಹಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದು ಅಪರಾಧ ನಿಯಂತ್ರಣಕ್ಕೆ ನೆರವಾಗಿದೆ.
-ಪ್ರಭು ಬಹಳ ವರ್ಷಗಳಿಂದ ಹಕ್ಕುಪತ್ರಗಳ ಮನಿರೀಕ್ಷೆಯಲ್ಲಿದ್ದ ಲಕ್ಷ್ಮಣಪುರಿ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಆ ಮೂಲಕ ಶಾಸಕರು ಹಲವು ದಶಕಗಳ ಕನಸನ್ನು ಈಡೇರಿಸಿದ್ದಾರೆ. ಕೊಳೆಗೇರಿ ಇನ್ನೂ ಅಭಿವೃದ್ಧಿ ಕಾಣಬೇಕಿದೆ.
-ವೆಂಕಟೇಶ್ ಗಾಂಧಿನಗರದ ಮೂವಿಲ್ಯಾಂಡ್ ಬಳಿ ಕೈಗೆತ್ತಿಕೊಳ್ಳಲಾಗಿರುವ ಒಳಚರಂಡಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಲಕ್ಷಾಂತರ ಜನ ಸಂಚರಿಸುವ ರಸ್ತೆಯಲ್ಲಿ ಈ ರೀತಿ ನಿಧಾನಗತಿಯಲ್ಲಿ ಕೆಲಸ ನಡೆದರೆ ಹೇಗೆ?
-ಪ್ರಭಾಕರ್ ಗಾಂಧಿನಗರ ಪ್ರದೇಶದಲ್ಲಿ ಸಂಚಾರ ಒತ್ತಡವ್ಯಾಪಕವಾಗಿದೆ. ಇದರಿಂದ ರಸ್ತೆಗಳು ಹದಗೆಟ್ಟಿವೆ. ಒಳಚರಂಡಿ ದುರಸ್ತಿ ಕಾಮಗಾರಿಯಿಂದ ಧೂಳು ಜಾಸ್ತಿಯಾಗಿ ವ್ಯಾಪಾರ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
-ರಾಕ್‌ಲೈನ್ ಚಂದ್ರು * ಸೋಮಶೇಖರ ಕವಚೂರು