ಹೊಸದಿಲ್ಲಿ: ಕೊರೊನಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಪತ್ರಿಕೋದ್ಯಮ ಕ್ಷೇತ್ರಕ್ಕೆ ಉತ್ತೇಜನಕಾರಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ದಿ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್) ಅಧ್ಯಕ್ಷ ಎಲ್. ಆದಿ ಮೂಲಂ ಒತ್ತಾಯಿಸಿದ್ದಾರೆ.
“ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಪತ್ರಿಕೋದ್ಯಮದ ಆದಾಯ ಮೂಲಗಳಾದ ಜಾಹೀರಾತು ಮತ್ತು ವಿತರಣೆ ವ್ಯವಸ್ಥೆ ಹಿಂದೆಂದೂ ಕಾಣದಂಥ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ, ಹಲವು ಪ್ರಕಾಶನ ಸಂಸ್ಥೆಗಳು ಬಾಗಿಲು ಮುಚ್ಚಿವೆ. ಮತ್ತೆ ಕೆಲವು ತಮ್ಮ ಆವೃತ್ತಿಗಳನ್ನೇ ರದ್ದುಗೊಳಿಸಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಮತ್ತಷ್ಟು ಕಾರ್ಯಚಟುವಟಿಕೆಗಳು ಬಲವಂತವಾಗಿ ಮಚ್ಚುವ ಅಪಾಯವೂ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಎಂಟು ತಿಂಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರ ಅಂದಾಜು 12,500 ರೂ. ಕೋಟಿ ರೂ. ನಷ್ಟ ಅನುಭವಿಸಿದೆ. ಸುಮಾರು 16 ಸಾವಿರ ಕೋಟಿ ರೂ. ವಾರ್ಷಿಕ ನಷ್ಟವಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ
ಪರಿಣಾಮ ಬೀರಲಿದೆ: ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭಕ್ಕೆ ಉಂಟಾಗಿರುವ ಆಘಾತ ಗಂಭೀರ ಸಾಮಾಜಿಕ- ರಾಜಕೀಯ ಪರಿಣಾಮ ಗಳನ್ನೇ ಬೀರಲಿದೆ ಎಂದು ಐಎನ್‌ಎಸ್ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಯಮದಲ್ಲಿ ಪತ್ರಕರ್ತರಾಗಿ, ಮುದ್ರಕ ರಾಗಿ, ವಿತರಕರಾಗಿ ಮತ್ತು ಪ್ರತ್ಯಕ್ಷ- ಪರೋಕ್ಷವಾಗಿ ದುಡಿಯುತ್ತಿರುವ 30 ಲಕ್ಷ ಉದ್ಯೋಗಿ ಮತ್ತು ಸಿಬಂದಿ ಅಪಾಯದ ಅಂಚಿನಲ್ಲಿದ್ದಾರೆ. ಉದ್ಯೋಗಿ ಮತ್ತು ಅವರ ಕುಟುಂಬವನ್ನೊಳಗೊಂಡಂತೆ ಲಕ್ಷಾಂತರ ಭಾರತೀಯರು, ಅಲ್ಲದೆ ಉದ್ಯಮ ಸಂಬಂಧಿತ ಕೈಗಾರಿಕೆಗಳು, ಮುದ್ರಣ ಪ್ರಕ್ರಿಯೆ, ಸುದ್ದಿಪತ್ರಿಕೆ ಮಾರಾಟಗಾರರು ಮತ್ತು ಪತ್ರಿಕೆ ಹಂಚುವ ಹುಡುಗರನ್ನೊಳಗೊಂಡ ವಿತರಣ ಸರಪಳಿ, ಇತ್ಯಾದಿ ಪತ್ರಿಕೋದ್ಯಮದ ಅವನತಿಯ ವಿನಾಶ ಕಾರಿ ಪರಿಣಾಮ ಎದುರಿಸುತ್ತಿದ್ದಾರೆ. ಇವರೆಲ್ಲರೂ ಹಲವು ದಶಕಗಳಿಂದ, ಇದನ್ನೇ ಜೀವನೋಪಾಯ ಮಾಡಿಕೊಂಡವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಿಂದಲೂ ಮೆಚ್ಚುಗೆ: ಪರಿ ಶೀಲಿಸಲ್ಪಟ್ಟ ಮತ್ತು ವಾಸ್ತವ ಸುದ್ದಿಗಳ ಪ್ರಸಾರ ಸವಾಲಾಗಿರುವ ಈ ಸಮಯದಲ್ಲಿ ಭಾರತೀಯ ವೃತ್ತಪತ್ರಿಕೆಗಳು ವಹಿಸುತ್ತಿರುವ ಮಹತ್ವದ ಪಾತ್ರ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಮೆಚ್ಚುಗೆ ವ್ಯಕ್ತಪಡಿ ಸಿದೆ ಎಂದು ಐಎನ್‌ಎಸ್ ಅಧ್ಯಕ್ಷ ಆದಿಮೂಲಂ ಹೇಳಿದ್ದಾರೆ. “ಸಂಪೂರ್ಣ ಉದ್ಯಮದ ಪುನಶ್ಚೇತನ ಕ್ಕಾಗಿ ಅತ್ಯಗತ್ಯವಿರುವ ಉತ್ತೇಜನಕಾರಿ ಪ್ಯಾಕೇಜ್ ಘೋಷಿಸಲು ಸರಕಾರ ಮುಂದಾಗಬೇಕು. ನ್ಯೂಸ್‌ಪ್ರಿಂಟ್- ಜಿಎನ್‌ಪಿ ಮತ್ತು ಎಲ್‌ಡಬ್ಲ್ಯುಸಿ ಪೇಪರ್ ಮೇಲಿನ ಬಾಕಿ ಉಳಿದ ಶೇ.5 ಕಸ್ಟಮ್ಸ್ ಸುಂಕ ರದ್ದತಿ, ಮುದ್ರಣ ಮಾಧ್ಯಮಕ್ಕಾಗಿ ಸರಕಾರದ ವೆಚ್ಚ ಶೇ.200ರಷ್ಟು ಹೆಚ್ಚಿಸುವುದು, ಬಾಕಿ ಉಳಿದ ಜಾಹೀರಾತು ಬಿಲ್‌ಗಳನ್ನು ಬಿಒಸಿ ಮತ್ತು ರಾಜ್ಯ ಸರಕಾರಗಳ ಮೂಲಕ ಕೂಡಲೇ ಬಿಡುಗಡೆಗೊಳಿಸುವುದು- ಇವು ಈ ಸಮಯದ ತುರ್ತಾಗಿದೆ’ ಎಂದು ಅವರು ಒತ್ತಾಯಿಸಿದ್ದಾರೆ.