ಕಲಬುರಗಿ: ಮುಂಬರುವ ರಾಜ್ಯ ಬಜೆಟ್‌ನಲ್ಲಿ ಈಡಿಗ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಮಾಡುವ ಘೋಷಣೆ ಮಾಡಬೇಕೆಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಡಾ|ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಣ್ಣ-ಸಣ್ಣ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವ ಸರ್ಕಾರ ಪ್ರಬಲ ಈಡಿಗ ಸಮುದಾಯವನ್ನು ಕಡೆಗಣಿಸುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಬೇಕಾದ ಸಮುದಾಯದ ಶಾಸಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ತಾಲೂಕು, ಜಿಲ್ಲಾ ಪಂಚಾಯಿತಿ ಸೇರಿದಂತೆ ಸಾರ್ವತ್ರಿಕ ಚುನಾವಣೆಯಲ್ಲಿ ಸಮುದಾಯದ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
28 ಒಳ ಪಂಗಡಗಳನ್ನು ಹೊಂದಿರುವ ಈಡಿಗ ಸಮುದಾಯ 78 ಲಕ್ಷ ಜನಸಂಖ್ಯೆ ಹೊಂದಿದೆ. ಆಡಳಿತಾರೂಢ ಬಿಜೆಪಿಯಲ್ಲಿ ಇಬ್ಬರು ಸಚಿವರು ಸೇರಿ ಏಳು ಶಾಸಕರು ಇದ್ದಾರೆ. ಪ್ರತಿಪಕ್ಷಗಳಲ್ಲೂ ಸಮುದಾಯದ ಶಾಸಕರು ಇದ್ದಾರೆ. ಮಂಗಳೂರು, ಶಿವಮೊಗ್ಗ ಭಾಗವಲ್ಲದೇ ಉತ್ತರ ಕರ್ನಾಟಕದ 17 ಕ್ಷೇತ್ರಗಳಲ್ಲಿ ನಿರ್ಣಯಕ ಪಾತ್ರ ವಹಿಸುತ್ತೇವೆ. ನಿಗಮ ಮಂಡಳಿ ಸ್ಥಾಪನೆ ಸಂಬಂಧ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಮೂರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮೂರು ಬಾರಿ ಭೇಟಿ ಮಾಡಿ ಒತ್ತಾಯಿಸಲಾಗಿದೆ. ಆದರೂ, ಸಮುದಾಯದ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಬಜೆಟ್‌ನಲ್ಲಿ ಪ್ರತ್ಯೇಕ ನಿಗಮ ಮಂಡಳಿ ಬಗ್ಗೆ ಘೋಷಣೆ ಮಾಡಲೇಬೇಕು. ಅದಕ್ಕೆ 500 ಕೋಟಿ ರೂ. ಮೀಸಲಿಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಮೊದಲ ಹಂತದಲ್ಲಿ ಸಮುದಾಯದ ಶಾಸಕರ ನಿವಾಸದ ಮುಂದೆ ಹೋರಾಟ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮಹಾಮಂಡಳಿ ರಾಜ್ಯ ನಿರ್ದೇಶಕ ಸತೀಶ ಗುತ್ತೇದಾರ ಮಾತನಾಡಿದರು. ಸುದ್ದಿಗೋಷ್ಠಿ ನಂತರ ಡಾ| ಪ್ರಣವಾನಂದ ಸ್ವಾಮೀಜಿ, ಸತೀಶ ಗುತ್ತೇದಾರ, ವೆಂಕಟೇಶ ಗುಂಡಾನೂರ ಹಾಗೂ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.