Advertisement

ಡೊಂಬಿವಲಿ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ವಾರ್ಷಿಕೋತ್ಸವ

11:42 AM Jan 12, 2019 | |

ಡೊಂಬಿವಲಿ: ಕಠಿನ ಪರಿಶ್ರಮದ ಜತೆಗೆ ಸಮಯ ನಿಶ್ಚಿತಗೊಳಿಸಿ ಗುರಿ ಸಾಧನೆ ಯತ್ತ ಲಕ್ಷ್ಯ ವಹಿಸುವುದರಿಂದ ಯಶಸ್ಸು ಹತ್ತಿರವಾಗುತ್ತದೆ. ಆಧುನಿಕ ತಂತ್ರಜ್ಞಾನವನ್ನು ಕಲಿಯುವುದರ ಜತೆಗೆ ನಮ್ಮ ನಿಜಜೀವನದಲ್ಲೂ ಶಿಸ್ತು, ಮೌಲ್ಯ ಗಳನ್ನು ಅಳವಡಿಸಿಕೊಂಡು  ಯುವ ಪೀಳಿಗೆ ಇತರರಿಗೆ ಮಾದರಿಯಾಗುವಂತಹ ಸಾಧನೆಗಳನ್ನು ಮಾಡಬೇಕು ಎಂದು ಪುಣೆಯ ವೀನಸ್‌ ಗ್ರೂಪ್‌ ಆಫ್‌ ಇಂಡಸ್ಟ್ರಿಯ ಮುಖ್ಯ ಆಡಳಿತ ನಿರ್ದೇಶಕ ಮಾಳ ಸದಾನಂದ ನಾಯಕ್‌ ಅವರು ನುಡಿದರು.

Advertisement

ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿ ವಿನಾಯಕ ಸೇವಾ ಮಂಡಲದ ಸಭಾಗೃಹದಲ್ಲಿ ಡಿ. 23ರಂದು  ನಡೆದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮಕ್ಕಳ ಅಭಿರುಚಿಯನ್ನು ಅರಿತುಕೊಂಡು ಅವರನ್ನು ಬೆಳೆಸಿದಾಗ ಅವರು ಪ್ರತಿಭಾವಂತರಾಗಿ ಮೂಡಿ ಬರಲು ಸಾಧ್ಯವಿದೆ ಎಂದರು.

ಆಮಂತ್ರಿತ ಅತಿಥಿಯಾಗಿ ಪಾಲ್ಗೊಂಡ ದಹಿಸರ್‌ನ ಶ್ರೀ ವಿಘ್ನಹರ್ತಾ ಶ್ರೀ ಮಹಾಗಣಪತಿ ಸೇವಾ ಮಂಡಳದ ಗೌರವಾಧ್ಯಕ್ಷ ಗೋಪಾಲಕೃಷ್ಣ ನಾವೆಲ್ಕರ್‌ ಮಾತನಾಡಿ, ಸಂಸ್ಥೆಯ ಚಟುವಟಿಕೆಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಸಂಸ್ಥೆಯ ಮುಂದಿನ ನೂತನ ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿ ಎಂದು ಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಸದಾಶಿವ ಎನ್‌. ನಾಯಕ್‌ ಅವರು ಮಾತನಾಡಿ, ನಾವು ಕೈಗೊಳ್ಳುತ್ತಿರುವ ಪ್ರತಿಯೊಂದು ಕೆಲಸಗಳ ಬಗ್ಗೆ ಭಕ್ತಿ, ಶ್ರದ್ಧೆ ಹಾಗೂ ಪೂರ್ಣಗೊಳಿಸುವ ಛಲ ಇರಬೇಕು. ವಿದ್ಯಾರ್ಥಿಗಳನ್ನು ಈ ದಿಸೆಯಿಂದಲೇ ಬೆಳೆಸಬೇಕು ಎಂದರು.

ಇನ್ನೋರ್ವ ಅತಿಥಿ ಕರ್ನಾಟಕ ಬ್ಯಾಂಕ್‌ನ ನಿವೃತ್ತ ಜನರಲ್‌ ಮ್ಯಾನೇಜರ್‌ ಉಪೇಂದ್ರ ನಾಯಕ್‌ ಅವರು ಮಾತನಾಡಿ, ಸಂಸ್ಥೆಯ ಏಳ್ಗೆಗೋಸ್ಕರ ಪರಿಶ್ರಮ ವಹಿಸುವ ಕಾರ್ಯಕರ್ತರಿಗೆ ಟೀಕೆಗಳೂ ಬಂದರೂ ಎದೆ ಗುಂದದೆ ಕೆಲಸವನ್ನು ಪೂರ್ಣಗೊಳಿಸುವತ್ತ ಲಕ್ಷ್ಯ ವಹಿಸಬೇಕು. ಪದಾಧಿಕಾರಿಗಳ ಕಾಲೆಳೆಯುವ ಬುದ್ಧಿ ಸಂಘ-ಸಂಸ್ಥೆಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ನುಡಿದು, ಪ್ರತಿಯೊಬ್ಬರು ಮಾತೃಭಾಷೆಯ ಬಗ್ಗೆ ಅಭಿಮಾನವನ್ನಿರಿಸಿಕೊಂಡು ಅದೇ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ನುಡಿದರು.

Advertisement

ವೇದಿಕೆಯಲ್ಲಿ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಳದ ಉಪಾಧ್ಯಕ್ಷ ಎಂ. ಪಿ. ನಾಯಕ್‌, ಪದಾಧಿಕಾರಿಗಳಾದ ಸಂಜಯ್‌ ಪಾಟ್ಕರ್‌, ನಾಗರಾಜ್‌ ಪಾಟ್ಕರ್‌, ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ನಾಯಕ್‌, ಯುವ ವೇದಿಕೆಯ ಅಕ್ಷತಾ ನಾಯಕ್‌, ವಿರಾಜ್‌ ನಾಯಕ್‌, ಸಂಸ್ಥೆಯ ಕಾರ್ಯದರ್ಶಿ ರವೀಂದ್ರನಾಥ್‌ ಜಿ. ನಾಯಕ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಈಜುಪಟು ಅಥರ್ವ ಆರ್‌. ನಾಯಕ್‌, ಕ್ರೀಡಾಪಟು, ಯಕ್ಷಕಲಾವಿದೆ ಕು| ಕೃಪಾ ಕೃಷ್ಣ ನಾಯಕ್‌ ಕಡ್ತಲ, ಎಸ್‌. ಬಿ. ಐ. ಲೈಫ್‌ ಇನ್‌ಸ್ಯೂರೆನ್ಸ್‌ನಲ್ಲಿ ವಿಶಿಷ್ಟ ಸಾಧನೆಗೈದ ಮಹಿಳಾ ಏಜೆಂಟ್‌ ರೇಷ್ಮಾ ಆರ್‌. ಕಾಮತ್‌ ಇವರನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಕಾರ್ಯದರ್ಶಿ ರವೀಂದ್ರನಾಥ್‌ ಜಿ. ನಾಯಕ್‌ ಸಂಸ್ಥೆಯ ಸಿದ್ಧಿ ಸಾಧನೆಗಳನ್ನು ವಿವರಿಸಿ, ಸಂಸ್ಥೆಯು ಕೈಗೊಂಡಿರುವ ನೂತನ ಸೇವಾಭವನದ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನುಡಿದರು.

ರಘುನಾಥ್‌ ಪ್ರಭು ಮತ್ತು ಸಂತೋಷ್‌ ಎ. ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಂಬಯಿ, ಥಾಣೆ, ಪಾಲ^ರ್‌ ಇನ್ನಿತರೆಡೆಗಳಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ : ಪಿ. ಆರ್‌. ರವಿಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next