ಮೈಸೂರು: 2019ನೇ ಹೊಸ ವರ್ಷ ಸಂಭ್ರಮಾಚರಣೆ ಸಂಬಂಧ ಡಿ.31ರ ರಾತ್ರಿ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಹೊಸ ವರ್ಷಾಚರಣೆಯು ಯಶಸ್ವಿಯಾಗಿ ಮತ್ತು ಶಾಂತ ರೀತಿಯಿಂದ ಆಚರಿಸುವ ಸಂಬಂಧ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಕೋರಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯ ಪಟ್ಟಣಗಳು ಮತ್ತು ತಾಲೂಕು ಕೇಂದ್ರಗಳಲ್ಲಿನ ಎಲ್ಲಾ ಹೋಟೆಲ್, ಭೋಜನ ಗೃಹ, ಕ್ಲಬ್‌ಗಳು, ಆಶ್ರಯ ಸ್ಥಾನಗಳು ಮತ್ತು ಸಂಘಗಳು ಹಮ್ಮಿಕೊಂಡಿರುವ ಔತಣಕೂಟ ಸಮಾರಂಭಗಳನ್ನು ಡಿ.31ರ ರಾತ್ರಿ ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸುವುದು.
ಹೊಸ ವರ್ಷದ ಔತಣಕೂಟ ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿ ಪಡೆಯುವುದು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳುವುದು. ಏನಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಆಯೋಜಕರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು. ಪಾನಮತ್ತರಾಗಿ ವಾಹನ ಚಾಲನೆ ಮಾಡಿದವರ ಮೇಲೆ ಡ್ರಂಕ್ ಅಂಡ್ ಡ್ರೆ„ವ್ ಪ್ರಕರಣ ದಾಖಲಿಸಿ, ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುವುದು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಾಗಲೀ, ದ್ವಿಚಕ್ರ ವಾಹನದಲ್ಲಿ ಮೂರು ಜನ ಸವಾರಿ ಮಾಡುವುದು, ಸಾಹಸ ಪ್ರದರ್ಶನ, ವೀಲಿಂಗ್ ನಡೆಸುವುದು ನಿಷೇದಿಸಿದ್ದು, ಇಲಾಖಾ ವತಿಯಿಂದ ಕ್ಷಿಪ್ರ ಕಾರ್ಯಾಚರಣೆ ತಂಡ ಮತ್ತು ಕಾವಲು ಪಡೆಯನ್ನು ರಚಿಸಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅನುಮತಿ ಪಡೆಯದೇ ಬ್ಯಾನರ್/ ಬಂಟ್ಟಿಂಗ್ಸ್/ ಧ್ವಜಗಳನ್ನು ಹಾಕಿದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
ಹೊಸ ವರ್ಷವನ್ನು ಶಾಂತ ರೀತಿಯಲ್ಲಿ ಬರಮಾಡಿಕೊಳ್ಳುವ ಸಲುವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಅಗತ್ಯ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.