ಅಣ್ಣಿಗೇರಿ: ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಕಳೆದ ದಿನಗಳಿಂದ ವಿದ್ಯುತ್ ಕಡಿತಗೊಳಿಸಿದ್ದರಿಂದ ರೈತರಿಗೆ
ಅನಾನುಕೂಲವಾಗುತ್ತಿದೆ. ಈಗಾಗಲೇ ತಾಲೂಕಿನ ರೈತರು ಮಳೆಯಿಲ್ಲದೆ ಕಂಗಾಗಿದ್ದಾರೆ. ಬಿತ್ತಿದ ಬೆಳೆ ಒಣಗುತ್ತಿವೆ ಆದರೆ
ಬೋರವೆಲ್ ಇದ್ದ ರೈತರು ಬೆಳೆಗಳಿಗೆ ನೀರು ಹಾಯಿಸಿ ಅಲ್ಪಸ್ವಲ್ಪ ಬೆಳೆಯನ್ನು ಬೆಳೆಯಬೇಕೆನ್ನುವ ಆಸೆಗೆ ಹೆಸ್ಕಾಂ ವಿದ್ಯುತ್ ಕಡಿತಗೊಳಿಸಿ ತಣ್ಣಿರೆರೆಚಿದೆ.
ಮೊದಲು ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 7 ತಾಸು ವಿದ್ಯುತ್ ನೀಡುತ್ತಿದ್ದ ಹೆಸ್ಕಾಂ, ಈಗ ಸಮರ್ಪಕ ವಿದ್ಯುತ್ ಉತ್ಪಾದನೆಯಿಲ್ಲ ಎಂಬ ನೆಪದಿಂದ 4ರಿಂದ 5 ತಾಸುಗಳ ಕರೆಂಟ್ ನೀಡುತ್ತಿದ್ದಾರೆ. ಅದರಲ್ಲೂ ಹಗಲು-ರಾತ್ರಿ ಎಂಬ ಎರಡು ಸಲ ಕರೆಂಟ್ ನೀಡುತ್ತಿರುವುದು ರೈತರಿಗೆ ಕಷ್ಟವಾಗುತ್ತಿದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳನ್ನು ಎರಡು ಬ್ಯಾಚ್‌ಗಳಾಗಿ ವಿಂಗಡಿಸಿ ವಿದ್ಯುತ್ ನೀಡುತ್ತಿದ್ದಾರೆ.
ಮೊದಲ ಬ್ಯಾಚ್‌ನಲ್ಲಿ ಸೈದಾಪೂರ, ಮಜ್ಜಿಗುಡ್ಡ, ಬಸಾಪೂರ, ಸಾಸ್ವಿಹಳ್ಳಿ, ಕೊಂಡಿಕೊಪ್ಪ, ಹಳ್ಳಿಕೇರಿ, ಅಟ್ನೂರ, ಕಿತ್ತೂರ, ನಾವಳ್ಳಿ, ತುಪ್ಪದಕುರಹಟ್ಟಿ ಹಳ್ಳಿಗಳಿಗೆ ಬೆಳಿಗ್ಗೆ 9ಗಂಟೆಯಿಂದ 12 ಗಂಟೆಯವರೆಗೆ, ರಾತ್ರಿ 11ಗಂಟೆಯಿಂದ 1 ಗಂಟೆಯವರೆಗೆ ಕರೆಂಟ್ ನೀಡುತ್ತಿದ್ದರೆ, ಎರಡನೇ ಬ್ಯಾಚ್‌ನಲ್ಲಿ ಭದ್ರಾಪೂರ, ನಲವಡಿ, ಮಣಕವಾಡ, ದುಂದೂರ, ಬೆನ್ನೂರ, ಶಿಶ್ವಿನಹಳ್ಳಿ ಗ್ರಾಮಗಳಿಗೆ ಮಧ್ಯಾಹ್ನ 12ಗಂಟೆಯಿಂದ 3 ಗಂಟೆಯವರೆಗೆ, ರಾತ್ರಿ 1 ಗಂಟೆಯಿಂದ 3 ಗಂಟೆಯವರೆಗೆ ಎಂದು ಹಗಲು 3 ತಾಸು, ರಾತ್ರಿ 2 ತಾಸು ಒಟ್ಟು 5 ತಾಸು ಕರೆಂಟ್ ನೀಡುತ್ತಿದೆ ಹೆಸ್ಕಾಂ.
ನಿಗದಿತ ಸಮಯವಿಲ್ಲ: ಪ್ರತಿದಿನ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ನೀಡುವ ವಿದ್ಯುತ್ ನಿಗದಿತ ಸಮಯವಿಲ್ಲ. ಒಂದು ದಿನ ನೀಡಿದ ಸಮಯ ಮರುದಿನ ಇರಲ್ಲ. ಇದರಿಂದ ಪ್ರತಿದಿನ ವಿದ್ಯುತ್ ನೀಡುವ ಸಮಯ ನಿಖರವಿಲ್ಲ, ರೈತರು ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಕರೆಂಟ್ ಯಾವಾಗ ನೀಡುತ್ತಾರೆ ಎಂಬುದನ್ನು ಕಾಯಬೇಕಾಗಿದೆ ಎನ್ನುತ್ತಾರೆ ರೈತರು. ಅಣ್ಣಿಗೇರಿ ತಾಲೂಕಿನಲ್ಲಿ ಸುಮಾರು 800 ಕೃಷಿ ಪಂಪ್‌ಸೆಟ್‌ಗಳಿದ್ದು ಅದನ್ನು ನಂಬಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿರುವ ರೈತರು ಸಮರ್ಪಕ ವಿದ್ಯುತ್ ಇಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮೊದಲು ಹಗಲಿನಲ್ಲಿ ಹೊಲಗಳಿಗೆ ನೀರು ಹಾಯಿಸಿ ಬರುತ್ತಿದ್ದ ರೈತರು ಈಗ ರಾತ್ರಿ ನೀರು ಹಾಯಿಸಲು ಹೊಲಗಳಿಗೆ ಹೋಗುವಂತಾಗಿದೆ.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೊದಲು 7 ತಾಸು ನೀಡುತ್ತಿದ್ದ ಕರೆಂಟ್ ಅನ್ನು ಈಗ ನಿಖರವಾದ ಸಮಯದಲ್ಲಿ ನೀಡಲ್ಲ. ಅದರಲ್ಲೂ ರಾತ್ರಿ ವೇಳೆ 2 ತಾಸು ಕರೆಂಟ್ ನೀಡುತ್ತಿರುವುದು ರೈತರಿಗೆ ಕಷ್ಟವಾಗುತ್ತಿದೆ. ರಾತ್ರಿ ವೇಳೆ ನೀರು ಹಾಯಿಸಲು ಜೀವ ಭಯದಲ್ಲೇ ಹೊಲಗಳಿಗೆ ಹೋಗುವಂತಾಗಿದೆ.ಮೊದಲಿದ್ದ 7 ತಾಸು ವಿದ್ಯುತ್‌ನ್ನು ಹಗಲಿನಲ್ಲೇ ನೀಡಿ.
ಪ್ರವೀಣ ಕಿರೇಸೂರ, ರೈತರು.
ರಾಜ್ಯದಲ್ಲಿ ಮಳೆಯಿಲ್ಲದಿರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಕುಂಟಿತಗೊಂಡಿದೆ ಹೀಗಾಗಿ ವಿದ್ಯುತ್ ವಿತರಣೆಯಲ್ಲಿ ಮೇÇಧಿ ಕಾರಿಗಳ ಹೇಳಿದಂತೆ ನಾವು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುತ್ತಿದ್ದೇವೆ, ಈಗಾಗಲೇ ರೈತರಿಗೆ ಮಾಹಿತಿಯನ್ನು ನೀಡಿದ್ದೇವೆ. ಜತೆಗೆ ಪ್ರತಿದಿನ ವಿದ್ಯುತ್ ನೀಡುವ ಸಮಯವನ್ನು ರೈತರಿಗೆ ತಿಳಿಸಲಾಗುತ್ತಿದೆ.
ಸುರೇಶ ಉಳ್ಳಾಗಡ್ಡಿ, ಹೆಸ್ಕಾಂ ಪ್ರಭಾರಿ
ಶಾಖಾಧಿಕಾರಿಗಳು ಗ್ರಾಮೀಣ ಶಾಖೆ ಅಣ್ಣಿಗೇರಿ.
*ರಾಜೇಶ ಮಣ್ಣಣ್ಣವರ